Narendra Modi: ಖರ್ಗೆ, ಸಿದ್ದರಾಮಯ್ಯಗೆ ಟಾಂಗ್; ಕಾಂಗ್ರೆಸ್​ನ​​ ಗ್ಯಾರಂಟಿಗಳು ಪೊಳ್ಳು ಭರವಸೆಗಳೆಂದ ಪ್ರಧಾನಿ ಮೋದಿ

ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್​​ನವರು ಹಲವು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇವುಗಳೆಲ್ಲ ಪೊಳ್ಳು ಭರವಸೆಗಳು. ಅವರಿಗೆ ಯಾವುದೇ ಸಕಾರಾತ್ಮಕವಾದ ಧೋರಣೆಗಳೇ ಇಲ್ಲ ಎಂದು ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಬಿಜೆಪಿಯ ಮಹಾಸಂಗಮ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

Narendra Modi: ಖರ್ಗೆ, ಸಿದ್ದರಾಮಯ್ಯಗೆ ಟಾಂಗ್; ಕಾಂಗ್ರೆಸ್​ನ​​ ಗ್ಯಾರಂಟಿಗಳು ಪೊಳ್ಳು ಭರವಸೆಗಳೆಂದ ಪ್ರಧಾನಿ ಮೋದಿ
ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಬಿಜೆಪಿ ಮಹಾಸಂಗಮ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿImage Credit source: ANI
Follow us
Ganapathi Sharma
|

Updated on:Mar 25, 2023 | 6:37 PM

ದಾವಣಗೆರೆ: ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್​​ನವರು ಹಲವು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇವುಗಳೆಲ್ಲ ಪೊಳ್ಳು ಭರವಸೆಗಳು. ಅವರಿಗೆ ಯಾವುದೇ ಸಕಾರಾತ್ಮಕವಾದ ಧೋರಣೆಗಳೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಬಿಜೆಪಿಯ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಕಾಂಗ್ರೆಸ್​ ನಾಯಕರ ತಿಜೋರಿ ತುಂಬಿಸುವ ಎಟಿಎಂ ಆಗಿ ಮಾತ್ರ ಕಾಣುತ್ತಿದೆ. ಕಾಂಗ್ರೆಸ್​ನವರು ಗ್ಯಾರಂಟಿ ನೀಡುತ್ತಿದ್ದಾರೆ. ಅವರ ಗ್ಯಾರಂಟಿ ಪರಿಣಾಮ ಬೀರದು ಎಂಬುದಕ್ಕೆ ಹಿಮಾಚಲ ಪ್ರದೇಶವೇ ಉದಾಹರಣೆ. ಅಲ್ಲಿ ಚುನಾವಣೆಗೂ ಮುನ್ನ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಿದರು. ಆದರೆ ಆಮೇಲೆ ಬಜೆಟ್​ನಲ್ಲಿ ಏನೇನೂ ನೀಡಲಿಲ್ಲ. ಅವರ ಗ್ಯಾರಂಟಿಗಳು ಅಷ್ಟೇ. ಕರ್ನಾಟಕದಲ್ಲಿಯೂ ಅವರಿಗೆ ಯಾವುದೇ ಪಾಸಿಟಿವ್ ಅಜೆಂಡಾಗಳಿಲ್ಲ. ಕಾಂಗ್ರೆಸ್ ಕೇವಲ ಕನಸು ಕಾಣುತ್ತಿದೆಯಷ್ಟೇ ಎಂದು ಟೀಕಿಸಿದರು.

ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ

ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮೋದಿ ಮಾತು ಆರಂಭಿಸಿದರು. ಕರ್ನಾಟಕದ ಬಿಜೆಪಿಗೆ ಧನ್ಯವಾದ ಸಮರ್ಪಿಸುತ್ತೇನೆ. ರಾಜ್ಯ ಬಿಜೆಪಿ ಈ ಕಾರ್ಯಕ್ರಮ ಆಯೋಜಿಸಿದ್ದರಿಂದ ನನಗೆ ನಿಮ್ಮನ್ನೆಲ್ಲ ಕಾಣಲು ಸಾಧ್ಯವಾಯಿತು. ನಿಮ್ಮೆಲ್ಲರ ದರ್ಶನ ನನಗೆ ದೊಡ್ಡ ಸೌಭಾಗ್ಯ ಎಂದು ಮೋದಿ ಹೇಳಿದರು.

ಇದನ್ನೂ ಓದಿ: Chikkaballapur Medical College: ಮಧುಸೂದನ್​ ವೈದ್ಯಕೀಯ ಶಿಕ್ಷಣ ಸಂಸ್ಥೆ ಉದ್ಘಾಟಿಸಿದ ನರೇಂದ್ರ ಮೋದಿ

ಹರಿಹರೇಶ್ವರ ಮಂದಿರದ ರೂಪದಲ್ಲಿ ಹರಿ ಮತ್ತು ಹರರ ಸಮನ್ವಯವಾಗಿದೆ. ಅಂಥ ಹರಿಹರದ ಸಮೀಪದಲ್ಲಿರುವ ಈ ಪುಣ್ಯ ಕ್ಷೇತ್ರದಲ್ಲಿ ಕರ್ನಾಟಕ ಬಿಜೆಪಿಯ ನಾಲ್ಕು ವಿಜಯ ಯಾತ್ರೆಗಳ ಮಹಾಸಂಗಮವಾಗಿದೆ. ಇದಕ್ಕಾಗಿ ಕರ್ನಾಟಕ ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ಹೃದಯಾಂತರಾಳದ ಧನ್ಯವಾದ ಸಮರ್ಪಿಸುತ್ತಿದ್ದೇನೆ. ಪ್ರತಿ ಯಾತ್ರೆಯಲ್ಲೂ ಜನರ ವಿಶ್ವಾಸ ವ್ಯಕ್ತವಾಗಿರುವುದನ್ನು ವಿಡಿಯೋಗಳಲ್ಲಿ ನೋಡಿದ್ದೇನೆ. ಇದು ಅಭೂತಪೂರ್ವ ಮತ್ತು ಅದ್ಭುತ ಎಂದು ಮೋದಿ ಹೇಳಿದರು.

ದೇಶಾದ್ಯಂತ 7 ಟೆಕ್ಸ್ ಟೈಲ್ಸ್ ಹಬ್ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ಒಂದು ದಾವಣಗೆರೆಯಲ್ಲಿ ಇದೆ. ಇದು ಹಲವು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈ ಮೂಲಕ ಯುವಕರಿಗೆ ಉದ್ಯೋಗದ ಅವಕಾಶ ದೊರಕುತ್ತಿದೆ. ಪ್ರಪಂಚದಾದ್ಯಂತ ಭಾರತಕ್ಕೆ ಜೈಕಾರ ಹಾಕುತ್ತಿದ್ದಾರೆ. ಇದು ಕೇವಲ ಮೋದಿಯ ಕಾರಣಕ್ಕೆ ಅಲ್ಲ. ನೀವೆಲ್ಲರೂ ವೋಟ್ ನೀಡಿದ ಕಾರಣಕ್ಕೆ ಜಗತ್ತಿನಲ್ಲಿ ಭಾರತದ ಪರ ಜೈಕಾರ ಮೊಳಗುತ್ತಿದೆ. ಇದು ಕರ್ನಾಟದಲ್ಲೂ ನಿಮ್ಮಿಂದ ಸಾಧ್ಯ ಆಗಬೇಕು ಎಂದು ಮೋದಿ ಹೇಳಿದರು.

ಖರ್ಗೆ ತವರಲ್ಲೇ ಬಿಜೆಪಿ ಜಯಭೇರಿ

ಕಲಬುರ್ಗಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಲ್ಲೇ ಬಿಜೆಪಿ ಗೆಲುವು ಸಾಧಿಸಿದೆ. ಇದರೊಂದಿಗೆ ವಿಜಯ ಯಾತ್ರೆಯ ಆರಂಭವಾಗಿದೆ. ವಿಜಯ ಸಂಕಲ್ಪ ಇಲ್ಲಿಂದಲೇ ಶುರುವಾಗಿದೆ ಎಂದು ಮೋದಿ ಹೇಳಿದರು.

ಸಿದ್ದರಾಮಯ್ಯಗೆ ಟಾಂಗ್

ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ನೋಡಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಪ್ರತಿಪಕ್ಷದ ಪ್ರಮುಖ ನಾಯಕರೊಬ್ಬರು ಕಾರ್ಯಕರ್ತರ ಕಪಾಳಕ್ಕೆ ಹೊಡೆಯುತ್ತಿದ್ದರು. ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸದವರು ಜನತಾ ಜನಾರ್ದನನ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಹಾಗಲ್ಲ. ಹಿರಿಯ, ಕಿರಿಯ ಎಂಬುದಿಲ್ಲ. ಎಲ್ಲರೂ ಒಂದೇ. ಎಲ್ಲ ಕಾರ್ಯಕರ್ತರನ್ನೂ ಗೌರವಿಸುತ್ತೇವೆ. ಕರ್ನಾಟಕದ ಎಲ್ಲ ಕಾರ್ಯಕರ್ತರೂ ನನ್ನ ಪರಮ ಮಿತ್ರರು. ನನ್ನ ಸಹೋದರರು ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಕನ್ನಡ ಸಮೃದ್ಧ ಭಾಷೆ, ನಾಡಿನ ಹೆಮ್ಮೆಯನ್ನು ಹೆಚ್ಚಿಸುವ ಭಾಷೆ; ಮುದ್ದೇನಹಳ್ಳಿಯಲ್ಲಿ ಪ್ರಧಾನಿ ಮೋದಿ ಬಣ್ಣನೆ

ಅಭಿವೃದ್ಧಿ ಮಂತ್ರ ಪಠಿಸಿದ ಮೋದಿ

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇ, ವೈಟ್​ಫಿಲ್ಡ್ ಮೆಟ್ರೋ ಲೋಕಾಪರ್ಣೆ ಸೇರಿದಂತೆ ಕರ್ನಾಟಕದಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿದ ಮೋದಿ, ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಾಗಿದೆ ಎಂದರು. ಹಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಆ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನ ಹೆಚ್ಚು ರೈತರಿಗೆ ದೊರೆಯದಂತೆ ಮಾಡಿತ್ತು. ಆದರೆ, ಡಬಲ್ ಎಂಜಿನ್ ಸರ್ಕಾರ ಬಂದ ನಂತರ ಹೆಚ್ಚು ರೈತರಿಗೆ ಪ್ರಯೋಜನ ದೊರೆಯುವಂತಾಯಿತು. ಕರ್ನಾಟಕ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಮತ್ತೆ ಹಣ ಸೇರಿಸಿ ರೈತರಿಗೆ ನೀಡಿತು. ಇದು ಡಬಲ್ ಎಂಜಿನ್ ಸರ್ಕಾರ ಪ್ರಯೋಜನ ಎಂದು ಮೋದಿ ಹೇಳಿದರು.

ಇದನ್ನೂ ಓದಿ: Whitefield Metro Station: ನಮ್ಮ ಮೆಟ್ರೋದಲ್ಲಿ ನಮ್ಮ ಮೋದಿ; ವೈಟ್‌ ಫೀಲ್ಡ್‌ ಮೆಟ್ರೋಗೆ ಚಾಲನೆ, ವಿದ್ಯಾರ್ಥಿಗಳೊಂದಿಗೆ ಸಂವಾದ

ಕರ್ನಾಟಕಕ್ಕೆ ಸ್ಥಿರ ಸರ್ಕಾರ ಬೇಕೇಬೇಕು

ದಲಿತ, ಆದಿವಾಸಿ ಸೇರಿದಂತೆ ವಂಚಿತ ಸಮುದಾಯಗಳ ಏಳಿಗೆಯೇ ನಮ್ಮ ಆದ್ಯತೆಯಾಗಿದೆ. ಎಲ್ಲ ಆಶಯಗಳನ್ನು ಈಡೇರಿಸುವುದಕ್ಕಾಗಿ ಪೂರ್ಣ ಬಹುಮತದ ಅಗತ್ಯವಿದೆ. ಕರ್ನಾಟಕಕ್ಕೆ ಸ್ಥಿರ ಸರ್ಕಾರ ಬೇಕಾಗಿದೆ ಎಂದ ಮೋದಿ, ರಾಜ್ಯಕ್ಕೆ ಪೂರ್ಣ ಬಹುಮತದ ಸರ್ಕಾರ ಬೇಕೋ ಬೇಡವೋ ಎಂದು ಜನರನ್ನು ಪ್ರಶ್ನಿಸಿದರು. ಲಂಬಾಣಿ ತಾಂಡಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ದಲಿತರು, ಆದಿವಾಸಿಗಳು, ವಂಚಿತರನ್ನು ಕಡೆಗಣಿಸಿಲ್ಲ. ಕರ್ನಾಟದಲ್ಲಿ ಅವಕಾಶವಾದಿ ಸಮ್ಮಿಶ್ರ ಸರ್ಕಾರದಿಂದ ನಷ್ಟವಾಗಿದೆ. ಇಲ್ಲಿ ಬಹುಮತದ ಬಿಜೆಪಿ ಸರ್ಕಾರ ಬೇಕು. ಬಹುಮತ ಸಿಗದಿದ್ದರೆ, ರಾಜ್ಯಕ್ಕೆ ಅನುಕೂಲವಿಲ್ಲ. ಸದೃಢ ಸರ್ಕಾರ ಬೇಕು. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಸ್ಥಿರ ಸರ್ಕಾರ ಅಗತ್ಯ ಎಂದು ಅವರು ಮತ್ತೆ ಮತ್ತೆ ಒತ್ತಿ ಹೇಳಿದರು.

ಕಮಲ ಅರಳಲಿದೆ; ಮೋದಿ ಭರವಸೆ

ಮೋದಿ ಸಮಾಧಿಗೆ ಗುಂಡಿ ತೋಡುತ್ತಿದ್ದೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ‘ಮೋದಿ ನಿಮ್ಮ ಕಮಲ ಅರಳಲಿದೆ’ ಎಂದು ಜನರು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು ನಗರ ವೇಗಗತಿಯಲ್ಲಿ ಬೆಳೆಯುತ್ತಿದೆ. ಅದಕ್ಕಾಗಿ ಸಿಎಂ ಬೊಮ್ಮಾಯಿ ಮತ್ತು ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.

ಎಲ್ಲರೂ ಮೊಬೈಲ್​ನ ಫ್ಲ್ಯಾಶ್ ಲೈಟ್ ಆನ್​ ಮಾಡುವಂತೆ ಮನವಿ ಮಾಡಿದ ಮೋದಿ, ವಿಜಯ ಸಂಕಲ್ಪದ ಪ್ರಕಾಶ ಪ್ರತಿ ಮನೆ, ಪ್ರತಿಯೊಬ್ಬರ ಮನ ತಲುಪುವಂತೆ ಮಾಡಬೇಕು ಎಂದು ಕರೆ ನೀಡಿದರು. ಕೊನೆಯಲ್ಲಿ ಕಮಲ್ ಕಿಲೇಗ, ಕಮಲ್ ಕಿಲೇಗ ಘೋಷಣೆ ಕೂಗಲಾಯಿತು.

ಇದನ್ನೂ ಓದಿ: Narendra Modi: ಪ್ರಾಜೆಕ್ಟ್ ಟೈಗರ್ 50ನೇ ವರ್ಷಾಚಣೆ; ಏಪ್ರಿಲ್ 9ರಂದು ಮೈಸೂರಿಗೆ ಪ್ರಧಾನಿ ಮೋದಿ

ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ. ವಿಶ್ವ ಹುಲಿ ದಿನದ ಪ್ರಯುಕ್ತ ಕರ್ನಾಟಕದ ಹುಲಿಗಳ ಮಧ್ಯೆ ಇರಲು ಬರುತ್ತೇನೆ. ಜತೆಗೆ, ನಿಮ್ಮ ದರ್ಶನಕ್ಕಾಗಿ ನಾನು ಬರುತ್ತೇನೆ. ನಿಮ್ಮ ಆಶೀರ್ವಾದವೇ ನಮಗೆ ಶಕ್ತಿ, ಹೊಸ ಶಕ್ತಿ, ಹೊಸ ಹುಮ್ಮಸ್ಸು ದೊರೆಯುತ್ತದೆ

ಸಮಾವೇಶ ವೇದಿಕೆ ಸುತ್ತ ಭರ್ಜರಿ ಶೋ

ಸಮಾವೇಶ ಆರಂಭಕ್ಕೂ ಮುನ್ನ ತೆರೆದ ವಾಹನದಲ್ಲಿ ಮೋದಿ, ಯಡಿಯೂರಪ್ಪ, ನಳಿನ್​ಕುಮಾರ್ ಕಟೀಲ್​ ಶೋ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಪುಷ್ಪವೃಷ್ಟಿ ಸುರಿಸುವ ಮೂಲಕ ಮೋದಿಗೆ ಗೌರವ ಸಲ್ಲಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Sat, 25 March 23