ಕುತಂತ್ರದಿಂದ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
ಬಿಜೆಪಿಯ ಕುತಂತ್ರಕ್ಕೆ ನಾವು ಹೆದರಲ್ಲ, ಹೋರಾಟ ಮಾಡುತ್ತೇವೆ. ಬಿಜೆಪಿ ನಡೆ ವಿರುದ್ಧ ಹೋರಾಟ ಮಾಡಲು ನಾವು ತಯಾರಾಗಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಯಾದಗಿರಿ: ಕುತಂತ್ರದಿಂದ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಾಗ್ದಾಳಿ ಮಾಡಿದರು. ಜಿಲ್ಲೆಯ ಸೈದಾಪೂರ್ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಿಜೆಪಿಯ ಕುತಂತ್ರಕ್ಕೆ ನಾವು ಹೆದರಲ್ಲ, ಹೋರಾಟ ಮಾಡುತ್ತೇವೆ. ಬಿಜೆಪಿ ನಡೆ ವಿರುದ್ಧ ಹೋರಾಟ ಮಾಡಲು ನಾವು ತಯಾರಾಗಿದ್ದೇವೆ. ಬಿಜೆಪಿ ವಿರೋಧ ಪಕ್ಷಗಳನ್ನು ದುರ್ಬಲ ಮಾಡುವ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ವಸ್ತು ಖರೀದಿ ಮಾಡಬಹುದು, ಆದರೆ ಧೈರ್ಯ ಖರೀದಿಸಲು ಆಗಲ್ಲ. ಮೋದಿ ನಾನು ಬಡವ ಅಂತಾರೆ, ಮೋದಿಗಿಂತ ಬಡವ ನಾನು. ಪ್ರಧಾನಿ ಮೋದಿ ಕಾಯಕವೇ ಕೈಲಾಸ ಎಂದು ಹೇಳುತ್ತಾರೆ. ಕಾಯಕ ಮಾಡೋದು ನಾವು, ಕೈಲಾಸದಲ್ಲಿ ಇರೋದು ಮೋದಿ ಎಂದು ಖರ್ಗೆ ತೀವ್ರ ವಾಗ್ದಾಳಿ ಮಾಡಿದರು.
ಮೋದಿ ಮತ್ತು ಶಾ ಕುತಂತ್ರದಿಂದ ನಾನು ಸೋತಿದ್ದೇನೆ
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನ ತಪ್ಪಿಸಲು ಮೋದಿ ಮತ್ತು ಶಾ ಅಡ್ಡಿ ಮಾಡಿದರು. ಮೋದಿ ಮತ್ತು ಶಾ ಕುತಂತ್ರದಿಂದ ನಾನು ಸೋತಿದ್ದೇನೆ ವಿನಃ ನನ್ನ ಜನ ನನ್ನನ್ನು ಸೋಲಿಸಿಲ್ಲಾ. ಆರ್ಎಸ್ಎಸ್ ತತ್ವದಿಂದ ಮೋದಿ ಸಮಾಜ ಹಾಳು ಮಾಡುತ್ತಿದ್ದಾರೆ. ಮೋದಿ ಅವರು ತಾವು ಸಿಎಂ ಇದ್ದಾಗ ತಮ್ಮ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದಾರೆ. ಗುಜರಾತ್ನಲ್ಲಿ ಮೋದಿ ಅವರ ಸಮುದಾಯ ಮುಂದುವರಿದ ಸಮುದಾಯವಾಗಿದೆ ಎಂದರು.
ಇದನ್ನೂ ಓದಿ: Karnataka Elections 2023: ಮುಸ್ಲಿಮರಿಗೆ ತೊಂದರೆ ಕೊಡಲು ಒಬಿಸಿ ಮೀಸಲಾತಿ ಕಿತ್ತು ಹಾಕಿದ್ದಾರೆ: ಸಿದ್ದರಾಮಯ್ಯ
ಮೋದಿ ಅವರು ನನ್ನ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷನ ತಲೆ ಮೇಲೆ ಗಾಂಧಿ ಟೋಪಿ ಇರುತ್ತೆ. ನೀವು ಕರಿ ಟೋಪಿ ಹಾಕುತ್ತೀರಿ ನಾವು ಬಿಳಿ ಟೋಪಿ ಹಾಕುತ್ತೇವೆ. ಮೋದಿ ಅವರ ತಲಿ ಮೇಲೆ ಕರಿ ಛತ್ರಿ ಇತ್ತು. ನಮ್ಮ ತಲಿ ಮೇಲೆ ಬಿಳಿ ಛತ್ರಿ ಇದೆ. ಮೋದಿ ಅವರು ಕಪ್ಪು ಹಣ ಇರೋರ ಮೇಲೆ ಕರಿ ಟೋಪಿ, ಛತ್ರಿ ಇಡುತ್ತಾರೆ.
ಲಾಭವಾಗಲಿ, ನಷ್ಟವಾಗಲಿ ಚಿಂಚನಸೂರ್ ಕಾಂಗ್ರೆಸ್ನಲ್ಲೇ ಇರಬೇಕು
ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಬಾಬುರಾವ್ ಚಿಂಚನಸೂರ್ ಕುರಿತಾಗಿ ಮಾತನಾಡಿದ ಅವರು, ಲಾಭವಾಗಲಿ, ನಷ್ಟವಾಗಲಿ ಚಿಂಚನಸೂರ್ ಕಾಂಗ್ರೆಸ್ನಲ್ಲೇ ಇರಬೇಕು. ಸಿಎಂ ಸ್ಥಾನ ತಪ್ಪಿದ್ರೂ ಯಾರ ವಿರುದ್ಧ ಒಂದೇ ಒಂದು ಹೇಳಿಕೆ ನೀಡಿಲ್ಲ. ಚುನಾವಣೆ ಸಂದರ್ಭದಲ್ಲಿ ಜನರೇ ನನಗೆ ಹಣವನ್ನು ಕೊಡುತ್ತಿದ್ದರು. ಆದರೆ ಬಾಬುರಾವ್ ಚಿಂಚನಸೂರ್ ಕಾಲದಲ್ಲಿ ಇದು ಬದಲಾಗಿದೆ. ಒಂದು ಕೇಳಿದರೆ ಬಾಬುರಾವ್ ಚಿಂಚನಸೂರ್ ಎರಡು ಕೊಡುತ್ತಾರೆ ಎಂದು ವೇದಿಕೆ ಮೇಲೆ ಚಿಂಚನಸೂರ್ ಕಾಲೆಳೆದರು. ನನಗೆ ಈಗ 81 ವರ್ಷ, ಹಾಗಂತ ನಾನು ಮೆತ್ತಗೆ ಆಗುವುದಿಲ್ಲ. ಉಸಿರು ಇರೋವರಗೆ ದೇಶದ ಸಲುವಾಗಿ ಹೋರಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಕಳ್ಳರನ್ನು ಕಳ್ಳ ಎಂದು ಹೇಳೋದು ತಪ್ಪು ಎಂಬ ಭಾವನೆ ಬಿಜೆಪಿಯಲ್ಲಿದೆ: ಬಿಕೆ ಹರಿಪ್ರಸಾದ್ ವಾಗ್ದಾಳಿ
ಕಾಂಗ್ರೆಸ್ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ: ಡಿ.ಕೆ. ಶಿವಕುಮಾರ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಾತನಾಡಿ, ದೇವರು ವರ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಕೊಡುತ್ತಾನೆ. ಖರ್ಗೆ ಅವಕಾಶ ಸಿಕ್ಕಾಗಲೆಲ್ಲ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಬಿಜೆಪಿ ರಾಹುಲ್ ಗಾಂಧಿ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು JDSಗೆ ಬೆಂಬಲಿಸಿದ್ದೆವು. ಆದರೆ ಹೆಚ್ಡಿ ಕುಮಾರಸ್ವಾಮಿ ಅಧಿಕಾರವನ್ನು ಉಳಿಸಿಕೊಳ್ಳಲಿಲ್ಲ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:15 pm, Sat, 25 March 23