ಒಡಿಶಾ ರೈಲು ದುರಂತ: ಘಟನಾ ಸ್ಥಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ದೂರವಾಣಿ ಮೂಲಕ ಧೈರ್ಯ ತುಂಬಿದ ಸಿಎಂ ಸಿದ್ದರಾಮಯ್ಯ
ಒಡಿಶಾ ರೈಲು ದುರಂತ ಸ್ಥಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಿಎಂ ಸಿದ್ಧರಾಮಯ್ಯ ದೂರವಾಣಿ ಕರೆ ಮಾಡಿ, ಮೈಸೂರಿನ 30ಕ್ಕೂ ಹೆಚ್ಚು ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.
ಬೆಂಗಳೂರು: ಒಡಿಶಾದ (Odisha) ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ನೂರಾರು ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆ ಆಗುತ್ತಿದೆ. ಅಪಘಾತಕ್ಕೀಡಾದ ರೈಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನ ಪ್ರಯಾಣಿಸಿದ್ದು, ಸುರಕ್ಷಿತವಾಗಿದ್ದಾರೆ. ಸದ್ಯ ಸಿಎಂ ಸಿದ್ಧರಾಮಯ್ಯ ದುರಂತ ಸ್ಥಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಮೈಸೂರು ನಿವಾಸಿಗಳ ಜತೆ ದೂರವಾಣಿ ಮೂಲಕ ಸಿಎಂ ಮಾತುಕತೆ ಮಾಡಿದ್ದು, ಅಗತ್ಯ ಎಲ್ಲಾ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ತಮ್ಮ ಸಹಾಯಕ್ಕೆ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಕಮಿಷನರ್ ಬರ್ತಿದ್ದಾರೆ ಎಂದು ಮೈಸೂರಿನ 30ಕ್ಕೂ ಹೆಚ್ಚು ಸಂತ್ರಸ್ತರಿಗೆ ಸಿಎಂ ಸಿದ್ಧರಾಮಯ್ಯ ಧೈರ್ಯ ತುಂಬಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದ ಅಪಘಾತ ಹಿಂದೆಂದೂ ಆಗಿರಲಿಲ್ಲ
ಇದಕ್ಕೂ ಮುಂಚೆ ಮಾಧ್ಯಮದರೊಂದಿಗೆ ಮಾತನಾಡಿರುವ ಸಿಎಂ ಸಿದ್ಧರಾಮಯ್ಯ ಇಷ್ಟು ದೊಡ್ಡ ಪ್ರಮಾಣದ ಅಪಘಾತ ಹಿಂದೆಂದೂ ಆಗಿರಲಿಲ್ಲ. ಸಚಿವ ಸಂತೋಷ್ ಲಾಡ್ರನ್ನು ಒಡಿಶಾಗೆ ಕಳುಹಿಸುತ್ತಿದ್ದೇನೆ. ಕರ್ನಾಟಕ ರಾಜ್ಯದವರಿಗೆ ಹಾನಿ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಹೇಳಿದ್ದರು.
ರೈಲ್ವೆ ಇಲಾಖೆ, ಒಡಿಶಾ ಸರ್ಕಾರದ ಜತೆ ಸಂಪರ್ಕದಲ್ಲಿದ್ದೇವೆ. ನಾವು ಇನ್ನೂ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇವೆ. ರಾಜ್ಯದಿಂದ 100 ಜನರು ಪ್ರಯಾಣಿಸಿರುವ ಬಗ್ಗೆ ಮಾಹಿತಿಯಿದೆ. ಯಾರ ತಪ್ಪಿದೆ ಎಂದು ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕು. 300ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದಾರೆಂದು ಹೇಳ್ತಿದ್ದಾರೆ. ಒಡಿಶಾ ಸರ್ಕಾರದ ಜೊತೆ ಸಿಎಸ್ ನಿರಂತರ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.
ಕನ್ನಡಿಗರು ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ಇದೆ ಎಂದ ಸಂಸದ ಪ್ರತಾಪ್ ಸಿಂಹ
ಮೈಸೂರುನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದು, ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ರೈಲ್ವೆ ದುರ್ಘಟನೆ ನಿಂತೇ ಹೋಗಿತ್ತು. ಅಷ್ಟರ ಮಟ್ಟಿಗೆ ರೈಲ್ವೆ ಅಧಿಕಾರಿಗಳು ಲೋಪದೋಷ ಸರಿಪಡಿಸಿದ್ದರು. ಸಾಕಷ್ಟು ಕನ್ನಡಿಗರು ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ಇದೆ. ಒಡಿಶಾ ರೈಲು ದುರಂತದಲ್ಲಿ ಅಪಾರ ಸಾವು ನೋವು ಸಂಭವಿಸಿದೆ.
ಇದನ್ನೂ ಓದಿ: Odisha Train Accident: ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತ; ಸಹಾಯವಾಣಿ ಸಂಖ್ಯೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಪರಿಹಾರ ಕಾರ್ಯದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ತೊಡಗಿದ್ದಾರೆ. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕೇಂದ್ರ ಕ್ರಮ ವಹಿಸುತ್ತದೆ. ದುರ್ಘಟನೆಯಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:19 pm, Sat, 3 June 23