ಕಲಬುರಗಿ, ಆಗಸ್ಟ್ 05: ನಮ್ಮ ಗ್ಯಾರಂಟಿ ಯೋಜನೆಗಳಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಮ್ಮದು ಬೋಗಸ್ ಭರವಸೆಗಳಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ. ನಗರದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆದಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಹೇಳಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾರು ಬಡವರ ಬಗ್ಗೆ ಚಿಂತನೆ ಮಾಡುತ್ತಾರೋ, ಅವರು ಕಾರ್ಯಕ್ರಮದ ಜೊತೆಗೆ ದುಡ್ಡನ್ನು ಕೂಡ ಹೊಂದಿಕೆ ಮಾಡುತ್ತಾರೆ. ಈ ಕೆಲಸವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಬಡವರಿಗೆ ಯಾವುದೇ ಯೋಜನೆ ಜಾರಿ ಮಾಡಲಿಲ್ಲ. ಯೋಜನೆಗಳ ಕುರಿತಾಗಿ ನಾವು ಪಾರ್ಲಿಮೆಂಟ್ನಲ್ಲಿ ಮಾತನಾಡಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಇದೀಗ ಎಲ್ಲ ಕಡೆ ಮೋದಿ ಕರ್ನಾಟಕದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಪ್ರತಿಯೊಂದು ಹುದ್ದೆಯೂ ಹರಾಜು, ಹೆಚ್ಚು ಹಣ ಕೊಡುವವರಿಗೆ ಪೋಸ್ಟಿಂಗ್; ಪ್ರಹ್ಲಾದ್ ಜೋಶಿ ಗಂಭೀರ ಆರೋಪ
ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಯಿಂದ ದಿವಾಳಿ ಆಗಿ ಹೋಗುತ್ತದೆ ಅಂತ ಹೇಳುತ್ತಿದ್ದಾರೆ. ಮೋದಿ ಅವರು ಯೋಜನೆ ಲಾಭ ಜನರಿಗೆ ಸಿಗುತ್ತದೆಯೇ ಇಲವೋ ಎನ್ನುವ ಬಗ್ಗೆ ತಿಳಿದುಕೊಳ್ಳಬೇಕು. ಒಂದು ವೇಳೆ ತಿಳಿದಿದ್ದೇ ಆದಲ್ಲಿ ಅವರು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಈ ಭಾಗದಲ್ಲಿ ಬಡವರಿಗೆ ಉಚಿತ ಶಿಕ್ಷಣ ಸಿಗುವಂತೆ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ನನಗೆ 5 ಜನ ಮಕ್ಕಳಿದ್ದಾರೆ, ಇನ್ನೂ ಜನರಿಗೆ ಇನ್ನೆಷ್ಟು ಮಕ್ಕಳಿರಬೇಕು. ಹೀಗಾಗಿ ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಬೇಕು ಎಂದರು.
ಇದನ್ನೂ ಓದಿ: ನೈಸ್ ಹಗರಣದ ಕುರಿತು ದಾಖಲೆ ನೀಡಿದ್ರೆ, ನೀವು ರೈತರಿಗೆ ನ್ಯಾಯ ಕೊಡಿಸುತ್ತೀರಾ – ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಪ್ರಶ್ನೆ
ಮೈಸೂರು, ಕನಕಪುರದವರು ಬೆಂಗಳೂರಿಗೆ ಬಹಳ ಸಮೀಪ ಇದ್ದಾರೆ. ಬೆಂಗಳೂರಿನಿಂದ ನಾವು ಇರೋದು 500 ಕಿಲೋ ಮೀಟರ್ ದೂರ. ಹೀಗಾಗಿ ಕಾರ್ಯಕ್ರಮಗಳು ಈ ಭಾಗದಿಂದಲೇ ಆರಂಭವಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಪದೇಪದೆ ಕೆಡಿಪಿ ಸಭೆ ನಡೆಸಬೇಕು.
ಈ ಭಾಗಕ್ಕೆ ನೀಡಿದ್ದ ಅನುದಾನ ಸದುಪಯೋಗ ಆಗುವಂತೆ ನೋಡಬೇಕು ಎಂದು ಸಿಎಂ, ಡಿಸಿಎಂಗೆ ಸೂಚನೆ ನೀಡಿದರು. ಸರ್ಕಾರ ಬಂದು ಎರಡು ತಿಂಗಳಾಗಿದೆ, ಕೆಲವರು ಗುಲ್ಲು ಎಬ್ಬಿಸುತ್ತಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಜಾದು ಮಾಡಲು ಆಗುವುದಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.