ಪ್ರತಿಯೊಂದು ಹುದ್ದೆಯೂ ಹರಾಜು, ಹೆಚ್ಚು ಹಣ ಕೊಡುವವರಿಗೆ ಪೋಸ್ಟಿಂಗ್; ಪ್ರಹ್ಲಾದ್ ಜೋಶಿ ಗಂಭೀರ ಆರೋಪ
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವುಗಳ ವಿವರ ಇಲ್ಲಿದೆ.
ಹುಬ್ಬಳ್ಳಿ: ರಾಜ್ಯ ಸರ್ಕಾರದ ಪ್ರತಿಯೊಂದು ಹುದ್ದೆಯನ್ನೂ ಹರಾಜು ಹಾಕಲಾಗುತ್ತಿದೆ. ಯಾವುದೇ ಅಧಿಕಾರಿಯ ಬಳಿ ಕೇಳಿದರೂ ಇದನ್ನು ಹೇಳುತ್ತಿದ್ದಾರೆ. ಯಾರು ಹೆಚ್ಚು ಹಣ ಕೊಡುತ್ತಾರೆಯೋ ಅವರಿಗೆ ಪೋಸ್ಟಿಂಗ್ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 10 ಲಕ್ಷ ರೂಪಾಯಿ ಬದಲು ಯಾರಾದರೂ 12 ಲಕ್ಷ ರೂಪಾಯಿ ಕೊಟ್ಟರೆ ಅವರಿಗೆ ಪೋಸ್ಟಿಂಗ್ ಮಾಡಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಅದಕ್ಕಾಗಿಯೇ ಈ ಸರ್ಕಾರದಲ್ಲಿ ಶಾಸಕರು ಬಂಡಾಯ ಏಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಮಳೆ ಬಂದು ರಸ್ತೆಗಳಿಗೆ ಹಾನಿಯಾಗಿವೆ, ನಯಾಪೈಸೆ ಅನುದಾನ ಕೊಟ್ಟಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಶಾಸಕರಿಗೆ ಸರ್ಕಾರ ಹಣ ನೀಡುತ್ತಿಲ್ಲ. ಅಧಿಕಾರಿಗಳ ಪೋಸ್ಟಿಂಗ್ ವಿಚಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಬಸ್ನಲ್ಲಿ ಉಚಿತ ಪ್ರಯಾಣ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಬಸ್ ಓಡಾಡಲು ಒಳ್ಳೆ ರಸ್ತೆ ಬೇಕು. ರಸ್ತೆ ಕಾಮಗಾರಿಗೆ ಶಾಸಕರು ಅನುದಾನ ಕೇಳಿದರೆ ನಿರಾಕರಿಸುತ್ತಾರೆ. ಇದು ಜನವಿರೋಧಿ ಸರ್ಕಾರ, ಸುಳ್ಳು ಹೇಳುವ ಸರ್ಕಾರ. ಅಭಿವೃದ್ಧಿ ಮರಿಚೀಕೆಯಾಗಿದೆ, ಜನರು ಇದಕ್ಕೆ ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಮೇಲೆ ಕೊಲೆಗಡುಕರಿಗೆ ಧೈರ್ಯ ಬಂದಿದೆ; ಜೋಶಿ
ಕಾಂಗ್ರೆಸ್ ಸರ್ಕಾರ ಬಂದಮೇಲೆ ಕೊಲೆಗಡುಕರಿಗೆ ಧೈರ್ಯ ಬಂದಿದೆ. ಕೊಲೆಗಡುಕರು ಹಾಗೂ ಕ್ರಿಮಿನಲ್ಗಳಿಗೆ ಈಗ ಧೈರ್ಯ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಜನರು ಹೆದರುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ. ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಘಟನೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಇದೆ ಎಂದು ಅವರಿಗೆ ಇಷ್ಟೆಲ್ಲಾ ಧೈರ್ಯ ಬರುತ್ತಿದೆ. ಕೊಲೆ ಮಾಡುವುದು, ಫೋಟೋ ಎಡಿಟ್, ಚಿತ್ರೀಕರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆ ಎಂಬ ಭರವಸೆ ಅವರಿಗಿದೆ. ಹಾಗಾಗಿ ಹೀಗೆಲ್ಲ ಮಾಡುತ್ತಿದ್ದಾರೆ. ಸಾಮಾನ್ಯ ಜನರಿಗೆ ಸರ್ಕಾರ ಭರವಸೆ ಒದಗಿಸಬೇಕಿದೆ. ಇವತ್ತು ಸಾಮಾನ್ಯ ಜನರು ಭಯದಲ್ಲಿ ಬದುಕುವಂತಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್ಗಳಿಗೆ ಧೈರ್ಯ ಬರುತ್ತಿದೆ ಎಂದು ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ನೈಸ್ ಹಗರಣದ ಕುರಿತು ದಾಖಲೆ ನೀಡಿದ್ರೆ, ನೀವು ರೈತರಿಗೆ ನ್ಯಾಯ ಕೊಡಿಸುತ್ತೀರಾ – ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಪ್ರಶ್ನೆ
ಕಾಂಗ್ರೆಸ್ ಸರ್ಕಾರ ಇದ್ದಾಗ ಹಿಂದೂ ವಿರೋಧಿ ಮಾನಸಿಕತೆಯ ಕ್ರಿಮಿನಲ್ಗಳಿಗೆ ಧೈರ್ಯ ಬರುತ್ತದೆ. ಕಾಂಗ್ರೆಸ್ ಸರ್ಕಾರ ಬಂದರೆ ಕ್ರಿಮಿನಲ್ಗಳಿಗೆ ವಿಶೇಷ ಧೈರ್ಯ ಬರುತ್ತದೆ. ಇದೆಲ್ಲಾ ತುಷ್ಟೀಕರಣದ ಪರಿಣಾಮ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Sat, 5 August 23