ಬೆಳಗಾವಿಯಲ್ಲಿ ಪ್ರಧಾನಿಗೆ ಅದ್ದೂರಿ ಸ್ವಾಗತ; ರೋಡ್​ ಶೋ ವೇಳೆ ಹೂಮಳೆಯಲ್ಲಿ ಮಿಂದೆದ್ದ ಮೋದಿ

ಮೋದಿ ಅವರನ್ನು ನೋಡಲು ರಸ್ತೆಗಳ ಇಕ್ಕೆಲಗಳಲ್ಲಿ ಜನ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹಾದಿಯುದ್ದಕ್ಕೂ ಪ್ರಧಾನಿ ಮೇಲೆ ಹೂಮಳೆಗರೆಯಲಾಯಿತು. ಪ್ರಧಾನಿಯವರನ್ನು ಕಾಣುವುದಕ್ಕಾಗಿ ಜನರು ಕಟ್ಟಡ ಸೇರಿದಂತೆ ಎತ್ತರದ ಪ್ರದೇಶಗಳನ್ನು ಏರಿ ಇಣುಕುತ್ತಿದ್ದುದು ಕಂಡುಬಂತು.

ಬೆಳಗಾವಿ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಳಗಾವಿಗೆ ಬಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ನಗರದಲ್ಲಿ ಭವ್ಯ ಸ್ವಾಗತ ದೊರೆಯಿತು. ಶಿವಮೊಗ್ಗದಿಂದ ಸೇನಾ ವಿಮಾನದಲ್ಲಿ ಬೆಳಗಾವಿಯ ಸಾಂಬ್ರಾ ಏರ್​ಪೋರ್ಟ್​ಗೆ ಬಂದ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಎಡಿಜಿಪಿ ಅಲೋಕ್ ಕುಮಾರ್, ​ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಸಂಜಯ್ ಪಾಟೀಲ್ ಸ್ವಾಗತಿಸಿದರು. ನಂತರ ಭಾರತೀಯ ವಾಯುಸೇನೆ ಹೆಲಿಕಾಪ್ಟರ್​ನಲ್ಲಿ ಬೆಳಗಾವಿಯ ಕೆಎಸ್​ಆರ್​ಪಿ ಮೈದಾನಕ್ಕೆ ತೆರಳಿದ ಮೋದಿ ಅಲ್ಲಿಂದ ರೋಡ್​ಶೋ ಆರಂಭಿಸಿದರು. ಮೋದಿ ಅವರನ್ನು ನೋಡಲು ರಸ್ತೆಗಳ ಇಕ್ಕೆಲಗಳಲ್ಲಿ ಜನ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಚೆನ್ನಮ್ಮ ವೃತ್ತದಿಂದ ಆರಂಭವಾದ ರೋಡ್​ಶೋ ಕಾಲೇಜು ಮಾರ್ಗವಾಗಿ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ಶನಿ ಮಂದಿರ, ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಓಲ್ಡ್ ಪಿಬಿ ರೋಡ್ ಮಾರ್ಗವಾಗಿ ಮಾಲಿನಿ ಸಿಟಿ ತಲುಪಿತು. ಹಾದಿಯುದ್ದಕ್ಕೂ ಪ್ರಧಾನಿ ಮೇಲೆ ಹೂಮಳೆಗರೆಯಲಾಯಿತು. ಪ್ರಧಾನಿಯವರನ್ನು ಕಾಣುವುದಕ್ಕಾಗಿ ಜನರು ಕಟ್ಟಡ ಸೇರಿದಂತೆ ಎತ್ತರದ ಪ್ರದೇಶಗಳನ್ನು ಏರಿ ಇಣುಕುತ್ತಿದ್ದುದು ಕಂಡುಬಂತು.

ರಸ್ತೆಯುದ್ದಕ್ಕೂ ಮೋದಿ, ಮೋದಿ ಎಂಬ ಘೋಷಣೆಗಳು ಕೇಳಿಬಂದವು. ಅನೇಕ ಮಂದಿ ‘ಹರ ಹರ ಮೋದಿ’ ಘೋಷಣೆ ಕೂಗಿದರು. ಮೋದಿ ರೋಡ್​ಶೋ ನಡೆಸುತ್ತಿರುವ ಮಾರ್ಗದುದ್ದಕ್ಕೂ ಕೇಸರಿ ಶಾಲು, ಧ್ವಜ ಹಿಡಿದುಕೊಂಡ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು. ಸುಡು ಬಿಸಿಲನ್ನೂ ಲೆಕ್ಕಿಸದೆ ಸಾಗರೋಪಾದಿಯಲ್ಲಿ ನೆರೆದ ಜನರತ್ತ ಕೈಬೀಸುತ್ತಾ ಮೋದಿ ಮುಂದೆ ಸಾಗಿದರು.

ಇದನ್ನೂ ಓದಿ: ಪ್ರವಾಹ ಬಂದಾಗ ಕರ್ನಾಟಕದತ್ತ ತಿರುಗಿಯೂ ನೋಡದ ಮೋದಿ ಈಗ ರಾಜ್ಯದ ಪ್ರವಾಸಿ; ಕಾಂಗ್ರೆಸ್ ವ್ಯಂಗ್ಯ

ಅತ್ತ ಮಾಲಿನಿ ಸಿಟಿಯಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿಕೆಯಲ್ಲಿಯೂ ಮೋದಿ ರೋಡ್​​ಶೋ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಯಿತು. ಅಲ್ಲಿ ಸಚಿವರಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಇವರೆಲ್ಲ ಭಾಷಣ ಮಾಡುತ್ತಿದ್ದರೂ ಕಾರ್ಯಕರ್ತರು ಮೋದಿ, ಮೋದಿ ಎಂಬ ಘೋಷಣೆ ಕೂಗುತ್ತಿದ್ದರು.

ಭಾರತ ವಿಶ್ವದ ಹಿರಿಯಣ್ಣ ಆಗಲಿದೆ; ಕಾರಜೋಳ

ಭಾರತ ವಿಶ್ವದ ಹಿರಿಯಣ್ಣ ಆಗುವ ಕಾಲ ದೂರವಿಲ್ಲ. ಇಡೀ ಜಗತ್ತೇ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ತಲೆದೂಗಿದೆ. ಒಂದು ಕಾಲವಿತ್ತು, ಭಾರತದ ಪ್ರಧಾನಿ ಬೇರೆ‌ ದೇಶಕ್ಕೆ ಹೋದರೆ ಸಾಲ‌ ಕೇಳೋಕೆ‌ ಬಂದಿದ್ದಾರೆ ಅಂತ ಭಾವಿಸುತ್ತಿದ್ದರು. ಆದರೆ, ಈಗ ನಮ್ಮ ಪ್ರಧಾನಿ‌ ಬಳಿ ಬಂದು ನಮ್ಮ ದೇಶದಲ್ಲಿ‌‌ ಹೂಡಿಕೆಗೆ ಅವಕಾಶ ಕೇಳುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

ಮೋದಿ ಕೈ ಬಲಪಡಿಸಿ; ಸವದಿ ಮನವಿ

ಕಾಂಗ್ರೆಸ್ ನವರಿಗೆ ಬಹುಶಃ ಡಿಕೆಶಿ,‌ ಸಿದ್ದರಾಮಯ್ಯ ನಡುವಿನ ಜಗಳ ನಿಲ್ಲಿಸುವುದಕ್ಕೆ ಆಗುತ್ತಿಲ್ಲ. ಆದರೆ ಮೋದಿಯವರು ಎರಡು ದೇಶಗಳ ನಡುವಿನ ಯುದ್ಧ ‌ನಿಲ್ಲಿಸಿದ್ದಾರೆ. 2024ಕ್ಕೆ ಮತ್ತೆ ಪ್ರಧಾನಿಯಾಗಲು ಮೋದಿ ಕೈ ಬಲಪಡಿಸಬೇಕು. ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ಅವರ ಕೈ ಬಲಪಡಿಸೋಣ. ಈ ಮೂಲಕ ಮೋದಿಯವರ ಕೈ ಬಲಪಡಿಸೋಣ ಎಂದು ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ