ಅನ್ನ ಹಳಸಿತ್ತು ನಾಯಿ ಕಾದಿತ್ತು ಎಂಬಂತೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾಯುತ್ತಿದ್ದ ಬಿಜೆಪಿ: ಸಿದ್ದರಾಮಯ್ಯ
Karnataka Election 2023: ಸಮ್ಮಿಶ್ರ ಸರ್ಕಾರ ಪತನವಾಗುವುದನ್ನೇ ಬಿಜೆಪಿಯವರು ಕಾಯುತ್ತಿದ್ದರು. ಅನ್ನ ಹಳಸಿತ್ತು ನಾಯಿ ಕಾದಿತ್ತು ಅನ್ನೋ ರೀತಿ ಕಾದು ಕುಳಿತಿದ್ದರು, ಯಡಿಯೂರಪ್ಪ ದುಡ್ಡು ಇಟ್ಟುಕೊಂಡು ಕಾಯುತ್ತಿದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಸಿದ್ದರಾಮಯ್ಯ ಅವರು ನಾಯಿಗೆ ಹೋಲಿಸಿದರು.
ಬಾಗಲಕೋಟೆ: ಅನ್ನ ಹಳಸಿತ್ತು ನಾಯಿ ಕಾದಿತ್ತು ಎಂಬಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಬಿಜೆಪಿಯವರು (BJP Karnataka) ಕಾಯುತ್ತಿದ್ದರು, ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು ದುಡ್ಡು ಇಟ್ಟುಕೊಂಡು ಕಾಯುತ್ತಿದ್ದರು. 17 ಶಾಸಕರಿಗೆ ಕೋಟಿ ಕೋಟಿ ಹಣ ಕೊಟ್ಟು ಖರೀದಿಸಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ (Congress Praja Dhwani Convention) ಭಾಷಣ ಮಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಅವರು ತಾಜ್ ವೆಸ್ಟ್ಎಂಡ್ನಲ್ಲಿ ಅಧಿಕಾರ ಮಾಡುತ್ತಿದ್ದರು. ಅವರು ಹೋಟೆಲ್ನಿಂದ ಅಧಿಕಾರ ನಡೆಸುತ್ತಿದ್ದಕ್ಕೆ ಸರ್ಕಾರ ಪತನವಾಯಿತು. ಆದರೆ ಸಿದ್ದರಾಮಯ್ಯರಿಂದ ಸರ್ಕಾರ ಪತನ ಆಯ್ತು ಅಂತಾ ಆರೋಪಿಸುತ್ತಾರೆ. ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದರು.
ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ಬಹಳ ನಿಸ್ಸೀಮರು. ಸುಳ್ಳೇ ಇವರ ಮನೆ ದೇವರು ಅಂತ ನಾನು ಆಗಾಗ ಹೇಳುತ್ತೇನೆ. ಹೇಗಾದರೂ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಅಮಿತ್ ಶಾ ಮತ್ತು ಮೋದಿಯನ್ನು ಕರೆತರುತ್ತಿದ್ದಾರೆ. ತಾಂಡಾಗಳನ್ನು ಕಂದಾಯ ಗ್ರಾಮ ಮಾಡಲು ಕಾನೂನಾತ್ಮಕ ಹೋರಾಟ, ಪಾರೆಸ್ಟ್ ಕ್ಲಿಯರೆನ್ಸ್ ಕಾರ್ಯ ಎಲ್ಲವನ್ನು ಆರಂಭಿಸಿದವರು ನಾವು. ಆದರೆ ಹಕ್ಕು ಪತ್ರ ಕೊಡಲು ದೆಹಲಿಯಿಂದ ಬರುತ್ತಾರೆ, ನಂತರ ನಾವು ಮಾಡಿದ್ದೇವೆ ಅಂತಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಪ್ರವಾಹ ಬಂದಾಗ ಕರ್ನಾಟಕದತ್ತ ತಿರುಗಿಯೂ ನೋಡದ ಮೋದಿ ಈಗ ರಾಜ್ಯದ ಪ್ರವಾಸಿ; ಕಾಂಗ್ರೆಸ್ ವ್ಯಂಗ್ಯ
ಕಪ್ಪುಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡುವುದಾಗಿ ಹೇಳಿದ್ದರು. ಪ್ರಧಾನಿ ಮೋದಿ 15 ಪೈಸೆಯಾದರೂ ಕೊಟ್ಟಿದ್ದಾರಾ? ಉದ್ಯೋಗ ಕೊಡುತ್ತೇವೆ ಅಂತ ಹೇಳಿದರು, ಅದರಂತೆ ಉದ್ಯೋಗ ಕೊಡಿ ಅಂದರೆ ಮೋದಿಯವರು ಪಕೋಡಾ ಮಾರಿ ಅಂತಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂದರು, ಆದರೆ ಆಗಿದೆಯಾ? ರೈತರ ಸಾಲ ಮಾತ್ರ ದುಪ್ಪಟ್ಟಾಗಿದೆ. ಅಚ್ಚೆ ದಿನ್ ಆಯೆಂ ಅಂತಾರೆ, ಬಂತಾ ಅಚ್ಚೆ ದಿನ್? ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗಿವೆ. ಒಳ್ಳೆಯ ದಿನ ಬರುತ್ತದೆ ಅಂತ ಹೇಳಿದ್ದೀರಿ ಅಲ್ವಾ ಮೋದಿಜಿ ಎಲ್ಲಿ ಬರಲೇ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ಹಿಂದು ಮುಸಲ್ಮಾನರಿಗೆ ತಂದಿಟ್ಟೆ ಬಿಜೆಪಿ ವೋಟ್ ತಗೊಳೋದು: ಜಮೀರ್ ಅಹ್ಮದ್ ಖಾನ್
ಸಮಾವೇಶದಲ್ಲಿ ಭಾಷಣ ಮಾಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ಹಿಂದು ಮುಸಲ್ಮಾನರಿಗೆ ತಂದಿಟ್ಟೆ ಬಿಜೆಪಿ ವೋಟ್ ತಗೊಳೋದು ಎಂದು ಹೇಳಿದರು. ಮಾತು ಮುಂದುವರಿಸಿದ ಅವರು, ರಾಜ್ಯಕ್ಕೆ, ಬಡವರಿಗೆ ಎಲ್ಲ ಸಮಾಜಕ್ಕೆ ಒಳ್ಳೆಯದಾಗಬೇಕಾದರೆ ಕಾಂಗ್ರೆಸ್ ಬರಬೇಕು. ಹೀಗಂತ ಜನ ಹೇಳುತ್ತಿದ್ದಾರೆ. ನಮ್ಮ ಕ್ಷೇತ್ರದ ಸ್ಲಮ್ ಜನರ ಮನೆಗೆ ಹೋದಾಗ ಅಲ್ಲಿ ದೇವರ ಫೋಟೋ ಪಕ್ಕ ಸಿದ್ದರಾಮಯ್ಯ ಫೋಟೋ ಇಟ್ಟಿದ್ದರು. ಯಾಕಯ್ಯ ಅಂತ ಕೇಳಿದರೆ ಆ ಪುಣ್ಯಾತ್ಮನಿಂದಲೇ ಹೊಟ್ಟೆ ತುಂಬ ಊಟ ಮಾಡುತ್ತಿದ್ದೇವೆ ಅಂದರು. ಇತಿಹಾಸ ತೆಗೆಯಿರಿ ಯಾವಾಗ್ಯಾವಾಗ ಕಾಂಗ್ರೆಸ್ ಬಂದಿದೆ ಆಗ ಬಡವರಿಗೆ ಅನುಕೂಲ ಆಗಿದೆ ಎಂದರು.
ಬಿಜೆಪಿ ಅವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಅವರು ಇರುವುದು ಬರಿ ಲೂಟಿ ಹೊಡೆಯಲು. ಯಡಿಯೂರಪ್ಪ ಸಾಲ ಮನ್ನಾ ಮಾಡಿ ಅಂದರೆ ನೋಟ್ ಪ್ರಿಂಟ್ ಮಾಡುವ ಮಷಿನ್ ಇಟ್ಟುಕೊಂಡಿಲ್ಲ ಅಂತ ಹೇಳಿದ್ದರು. ಸಿದ್ದು ನ್ಯಾಮಗೌಡ ತರಹ ಆನಂದ ನ್ಯಾಮಗೌಡ ಆಗುತ್ತಾನೆ ಅಂತ ನಿರೀಕ್ಷೆ ಇಟ್ಟಿರಲಿಲ್ಲ. ಆದರೆ ಈಗ ಆನಂದ ನ್ಯಾಮಗೌಡ ಅಪ್ಪನಿಗೆ ತಕ್ಕ ಮಗನಾಗಿದ್ದಾನೆ. ನಮ್ಮ ಸರಕಾರ ಇರದೇ ಇದ್ದರೂ ಸಾವಿರಾರು ಕೋಟಿ ಅನುದಾನ ತಂದಿದ್ದಾನೆ. ಇದು ಕ್ಷೇತ್ರದ ಮೇಲೆ ಅವರಿಗೆ ಇರುವ ಕಮಿಟ್ಮೆಂಟ್. ಅವರನ್ನು ನಮ್ಮ ಅಲ್ಪಸಂಖ್ಯಾತ ಜನರು ಹಾಗೂ ಎಲ್ಲರೂ ಹೆಚ್ಚು ಮತ ನೀಡಿ ಮತ್ತೆ ಆಯ್ಕೆ ಮಾಡಬೇಕು. ಈ ಸಾರಿ ಒಂದು ಲಕ್ಷ ಮತಗಳ ಅಂತರದಿಂದ ಆನಂದ ನ್ಯಾಮಗೌಡ ಗೆಲುತ್ತಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Mon, 27 February 23