ಕರ್ನಾಟಕಕ್ಕೆ ಸಾವಿರಾರು ಕೋಟಿ ನೀಡಿದ ಕೇಂದ್ರ: ಸಿದ್ದು ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

| Updated By: Rakesh Nayak Manchi

Updated on: Jun 21, 2022 | 4:30 PM

ಜನದ್ರೋಹ ಮಾಡಿ ಯೋಗ ಮಾಡಲು ರಾಜ್ಯಕ್ಕೆ ಮೋದಿ ಬಂದಿದ್ದಾರೆ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ರಾಜಕೀಯವಾಗಿ ಮಾತಾಡಬೇಕು ಎಂದು ಮಾತನಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ ಎಂದ ಬೊಮ್ಮಾಯಿ.

ಕರ್ನಾಟಕಕ್ಕೆ ಸಾವಿರಾರು ಕೋಟಿ ನೀಡಿದ ಕೇಂದ್ರ: ಸಿದ್ದು ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು
ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ
Follow us on

ಬೆಂಗಳೂರು: ಜನದ್ರೋಹ ಮಾಡಿ ಯೋಗ ಮಾಡಲು ರಾಜ್ಯಕ್ಕೆ ಮೋದಿ ಬಂದಿದ್ದಾರೆ ಎಂದು ಸರಣಿ ಟ್ವೀಟ್ ಮಾಡಿ ಟೀಕಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಿರುಗೇಟು ನೀಡಿದ್ದಾರೆ. ಇವತ್ತೇನಾದರೂ ಕೋವಿಡ್ ಅನ್ನು ಇಡೀ ದೇಶದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಅಂದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ಕೋವಿಡ್ ನಿರ್ವಹಣೆಗೆ ಕೇಂದ್ರದಿಂದ ಸಾವಿರಾರು ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗಾಗಿ ಸಾವಿರಾರು ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಔಷಧ, ಲಸಿಕೆ, ಉಪಕರಣಗಳು, ಆಕ್ಸಿಜನ್, ಆಕ್ಸಿಜನ್ ಉತ್ಪಾದಿಸುವ ಯಂತ್ರಗಳನ್ನು, ವೆಂಟಿಲೇಟರ್​ಗಳನ್ನು ಕಳಿಸಿದ್ದಾರೆ. ರಾಜಕೀಯವಾಗಿ ಮಾತಾಡಬೇಕು ಎಂದು ಮಾತನಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಸತ್ಯಾಂಶ ಜನರಿಗೆ ಗೊತ್ತಿದೆ, ಮೋದಿಯವರು ರಾಜ್ಯಕ್ಕೆ ಏನು ಸಹಾಯ ಮಾಡಿದ್ದಾರೆ ಎಂದು ಜನರಿಗೆ ಎಲ್ಲವೂ ಗೊತ್ತಿದೆ. ಮೋದಿಯವರ ಜನಪ್ರಿಯತೆ ನೋಡಿ ಸಿದ್ದರಾಮಯ್ಯ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: Yashwant Sinha ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿರೋಧ ಪಕ್ಷಗಳ ಅಭ್ಯರ್ಥಿ

ಆಡಳಿತ ಮೆಚ್ಚಿದ ನಮೋ, ಬೊಮ್ಮಾಯಿ ಹೇಳಿದ್ದೇನು?

ಸಿಎಂ ಬಸವರಾಜ ಬೊಮ್ಮಾಯಿ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ ವಿಚಾರವಾಗಿ ಹೇಳಿಕೆ ನೀಡಿದ ಸಿಎಂ ಬೊಮ್ಮಾಯಿ, ನರೇಂದ್ರ ಮೋದಿಯವರು ಯಾವಾಗಲೂ ಸುಶಾಸನ, ಅಭಿವೃದ್ಧಿ ಪರ ಆಡಳಿತ ಮೆಚ್ಚಿಕೊಂಡವರು. ರಾಜ್ಯದಲ್ಲೂ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಹಣ ನೀಡಿ ಅವರ ಸಹಭಾಗಿತ್ವದಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿರುವುದನ್ನು ಅವರು ನೋಡಿದ್ದಾರೆ ಎಂದರು.

ಮೋದಿಯವರ ಮೆಚ್ಚುಗೆ ನನಗೆ ದೊಡ್ಡ ಶಕ್ತಿ ನೀಡಿದಂತಾಗಿದೆ. ನಾನು ಇನ್ನಷ್ಟು ಬದ್ಧತೆಯಿಂದ, ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಲು ಅವರ ಮೆಚ್ಚುಗೆ ಪುಷ್ಟಿ ಕೊಟ್ಟಿದೆ ಎಂದರು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬಗ್ಗೆ ನಾಳೆ ಸ್ವಾಮೀಜಿಗಳ ಸಭೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ಸಮುದಾಯವರು ಮತ್ತು ಸಿ.ಸಿ ಪಾಟೀಲ್ ಅವರು ಸ್ವಾಮೀಜಿಗಳ ಜೊತೆ ಮಾತನಾಡುತ್ತಾರೆ ಎಂದರು.

ಇದನ್ನೂ ಓದಿ: Maharashtra political crisis ಏಕನಾಥ್ ಶಿಂಧೆಗೆ ಕೊಕ್ ನೀಡಿದ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ

ಎಚ್​ಡಿಡಿಗೆ ಗೌರವಪೂರ್ವಕ ಉತ್ತರ

ಪರಿಷ್ಕೃತ ಪಠ್ಯ ವಾಪಸ್ ಪಡೆಯುವಂತೆ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಪತ್ರದ ಬಗ್ಗೆ ನಾಳೆ ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡಿ ದೇವೇಗೌಡರ ಸಲಹೆಗಳನ್ನು ಪರಿಶೀಲಿಸುವಂತೆ ಸೂಚಿಸುತ್ತೇನೆ. ದೇವೇಗೌಡರಿಗೆ ಗೌರವಪೂರ್ವಕವಾಗಿ ಉತ್ತರಿಸುತ್ತೇನೆ ಎಂದರು.

ಸಿದ್ದಲಿಂಗೇಶ್ವರಸ್ವಾಮಿ ದರ್ಶನ ಪಡೆದ ಸಿಎಂ

ತುಮಕೂರು: ಮೋದಿ ಕಾರ್ಯಕ್ರಮ ಮುಗಿಸಿ ತೆರಳುವಾಗ ಕುಣಿಗಲ್ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಿದ್ದಲಿಂಗೇಶ್ವರಸ್ವಾಮಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆ ದೇವರು ಕೂಡ ಹೌದು. ದೇವಸ್ಥಾನ ಭೇಟಿ ವೇಳೆ ಸಚಿವ ಸುಧಾಕರ್, ಶಾಸಕ ರಂಗನಾಥ್ ಕೂಡ ಇದ್ದರು.

ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ