ಬೆಳಗಾವಿ: ವಿದ್ಯುತ್ ದರ ಏರಿಕೆ (Power tariff hike) ಖಂಡಿಸಿ ಕೈಗಾರಿಕೋದ್ಯಮಿಗಳಿಂದ ನಾಳೆ ಚನ್ನಮ್ಮ ವೃತ್ತದಿಂದ ಮೌನ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಹೇಮಂತ್ ಪೋರವಾಲ್ ಹೇಳಿದರು. ಉದ್ಯಮಿಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದ ಬೆಲೆ ಏರಿಕೆಗಿಂತ ಈ ವರ್ಷ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ದರ ಏರಿಸಿದ್ದು ಖಂಡನೀಯ. ಈಗಾಗಲೇ ಕೊವಿಡ್ನಿಂದ ಕೈಗಾರಿಕೋದ್ಯಮದ ಮೇಲೆ ಹೊಡೆತ ಬಿದ್ದಿದೆ. ಹಾಗಾಗಿ ನಾಳೆ ಜಿಲ್ಲಾ ಉಸ್ತುವಾರಿ ಸಚಿವರು ಡಿಸಿಗೆ ಮನವಿ ಸಲ್ಲಿಸಲು ತೀರ್ಮಾನ ಮಾಡಿದ್ದೇವೆ ಎಂದರು.
ಶೇಕಡ 32 ರಿಂದ 65ರಷ್ಟು ವಿದ್ಯುತ್ ಬೆಲೆ ಏರಿಕೆ ಮಾಡಲಾಗಿದೆ. ಈ ರೀತಿ ಹೆಚ್ಚಳ ಮಾಡುತ್ತಾ ಹೋದರೆ ಮಹಾರಾಷ್ಟ್ರಕ್ಕೆ ಹೋಗಬೇಕಾಗುತ್ತೆ. ಬೆಳಗಾವಿಯ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ 50 ರಿಂದ 60 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ. ಮಹಾರಾಷ್ಟ್ರದವರ ಪ್ರೊಡಕ್ಷನ್ ಜಾಸ್ತಿ ಇದ್ದು, ಅವರು ಈ ಅವಕಾಶ ಬಳಸಿಕೊಳ್ಳುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ಹಿಂದಿನ ಸರ್ಕಾರ, ನಾವಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್
ಬೆಳಗಾವಿಯಿಂದ 13 ಕೀಮಿ ಮಹಾರಾಷ್ಟ್ರ ಗಡಿ ಇದೆ ಹೀಗಾಗಿ ಎಲ್ಲರೂ ಅಲ್ಲಿಗೆ ಹೋಗುತ್ತಾರೆ. ವಿದ್ಯುತ್ ದರ ಏರಿಕೆ ನಿಯಂತ್ರಿಸದಿದ್ದರೆ ಕರ್ನಾಟಕದಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತೆ. ನಮ್ಮ ವಿನಂತಿ ಪುರಸ್ಕರಿಸದಿದ್ದರೆ ಒಂದು ದಿನ ಕರ್ನಾಟಕದಲ್ಲಿ ಕೈಗಾರಿಕೆ ಬಂದ್ ಮಾಡುತ್ತೇವೆ. ಇದಕ್ಕೂ ಮೀರಿ ಕ್ರಮ ಜರುಗಿಸದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಒನ್ ಟು ತ್ರಿಬಲ್ ವಿದ್ಯುತ್ ದರ ಹೆಚ್ಚಿಸಿದ್ಯಾರು? ಎಲ್ಲಾ ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಮಾತನಾಡಿ, ವಿದ್ಯುತ್ ದರ ಹೆಚ್ಚಳದಿಂದ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿದೆ. ಬೆಳಗಾವಿ ಜಿಲ್ಲೆಯಲ್ಲಿ 40 ಸಾವಿರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಇವೆ. ಕೊವಿಡ್ನಿಂದಾಗಿ ಕಳೆದ 2 ವರ್ಷಗಳಿಂದ ಕೈಗಾರಿಕೋದ್ಯಮ ನಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ದರ ಹೆಚ್ಚಿಸಿದರೆ ಸಮಸ್ಯೆ ಆಗಲಿದೆ. ಕಾರ್ಮಿಕರಿಗೆ ವೇತನ ನೀಡುವುದು ಸಹ ಕಷ್ಟವಾಗುತ್ತೆ ಎಂದರು.
ಕೈಗಾರಿಕೆಗಳು ಉದ್ಯೋಗ ಸೃಷ್ಟಿ ಮಾಡುತ್ತೆ, ಸರ್ಕಾರ ಉದ್ಯೋಗ ಸೃಷ್ಟಿಸಲ್ಲ. ಕೈಗಾರಿಕೆಗಳನ್ನೇ ಕೊಲ್ಲುವ ಕೆಲಸ ಮಾಡಿದರೆ ಆದಾಯ ತರುವವರು ಯಾರು? ಗ್ಯಾರಂಟಿ ಯೋಜನೆ ನೀಡುವುದಾದರೆ ಅವರ ಪರಿಸ್ಥಿತಿಗೆ ಅನುಗುಣವಾಗಿ ನೀಡಿ. ಶೇ.40ರಷ್ಟು ವಿದ್ಯುತ್ ದರ ಏರಿಕೆ ಮಾಡಿದರೆ ಕೈಗಾರಿಕೆ ಬೆಳೆಯುವುದು ಹೇಗೆ ಎಂದು ಪ್ರಶ್ನೆ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 pm, Mon, 12 June 23