ಹೆಲ್ಪ್ ಲೈನ್ ಹೆಸರಲ್ಲಿ ಒಬ್ಬರಿಗೆ 4 ಲಕ್ಷ ರೂ. ವೇತನ ಪಾವತಿ: ತನಿಖೆಗೆ ಆದೇಶಿಸಿದ ಸಚಿವ ಜಮೀರ್ ಅಹಮದ್
ಹೆಲ್ಪ್‌ಲೈನ್ ಹೆಸರಿನಲ್ಲಿ ಒಬ್ಬರಿಗೆ ಮಾಸಿಕ 4 ಲಕ್ಷ ರೂ. ವೇತನ ಪಾವತಿ ಸಂಬಂಧ ಸಮಗ್ರ ತನಿಖೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಆದೇಶ ನೀಡಿದ್ದಾರೆ.
ಬೆಂಗಳೂರು: ಹೆಲ್ಪ್‌ಲೈನ್ ಹೆಸರಿನಲ್ಲಿ ಒಬ್ಬರಿಗೆ ಮಾಸಿಕ 4 ಲಕ್ಷ ರೂ. ವೇತನ ಪಾವತಿ ಸಂಬಂಧ ಸಮಗ್ರ ತನಿಖೆಗೆ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ (zameer ahmed khan) ಆದೇಶ ನೀಡಿದ್ದಾರೆ. ಅಲ್ಪಸಂಖ್ಯಾತರ ಇಲಾಖೆ ಯೋಜನೆ ಬಗ್ಗೆ ಮಾಹಿತಿ ನೀಡಲು ಹೆಲ್ಪ್‌ಲೈನ್ ಸ್ಥಾಪನೆ ಮಾಡಲಾಗಿತ್ತು. ಹೆಲ್ಪ್‌ಲೈನ್ ನಿರ್ವಹಣೆ ಮಾಡಿದ ಒಬ್ಬರಿಗೆ ತಿಂಗಳಿಗೆ ನಾಲ್ಕು ಲಕ್ಷ ವೇತನ ನೀಡಿರುವ ಆರೋಪ ಕೇಳಿಬಂದಿದೆ. ಹೆಲ್ಪ್ಲೈನ್ನಿಂದ ಪ್ರಯೋಜನ ಆಗದಿದ್ದರೂ ಮುಂದುವರಿಸಿದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಜಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದಾರೆ.
ರಾಜ್ಯದ ಮುಖ್ಯ ಕಾರ್ಯದರ್ಶಿಗಿಂತ ಮೂರು ಪಟ್ಟು ವೇತನ ಒಬ್ಬರಿಗೇ ಮಾಸಿಕ ನೀಡಿದ್ದು ಹೇಗೆ? ಸಹಾಯವಾಣಿ ಕೇಂದ್ರಕ್ಕೆ ವಾರ್ಷಿಕ 2.5 ಕೋಟಿ ರೂ. ವೆಚ್ಚ ಆಗುತ್ತಿದೆ. ಆದರೆ ಪ್ರತ್ಯೇಕವಾಗಿ ಹೆಲ್ಪ್‌ಲೈನ್ ವ್ಯವಸ್ಥೆಯ ಅಗತ್ಯತೆ ಏನಿತ್ತು ಎಂದು ಜಮೀರ್ ಅಹ್ಮದ್ ಖಾನ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: HD Kumaraswamy; ಗ್ಯಾರಂಟಿಗಳ ಜಾರಿಗೆ ಹಣ ಹೊಂದಿಸುವುದು ಕಷ್ಟದ ಕೆಲಸವೇನಲ್ಲ: ಹೆಚ್ ಡಿ ಕುಮಾರಸ್ವಾಮಿ
ಕರ್ನಾಟಕದ ನಾಲ್ಕು ಕಡೆ ಹಜ್ ಭವನ
ಐದು ವರ್ಷಗಳಲ್ಲಿ ಕರ್ನಾಟಕದ ನಾಲ್ಕು ಕಡೆ ಹಜ್ ಭವನ ತಲೆ ಎತ್ತಲಿದೆ ಎಂದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಇತ್ತೀಚೆಗೆ ಹೇಳಿದ್ದರು. ಬೆಂಗಳೂರಿನ ಯಲಹಂಕದ ಹಜ್ ಭವನದಲ್ಲಿ ನಡೆದ ಹಜ್ ಯಾತ್ರಿಕರ ವಿಮಾನಯಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಅವರು, ಕಲಬುರಗಿ, ರಾಯಚೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ ಆಗಲಿದೆ ಎಂದಿದ್ದರು.
ಇದನ್ನೂ ಓದಿ: 40 ಪರ್ಸೆಂಟ್ ಆರೋಪದ ಬಗ್ಗೆ ತನಿಖೆ ನಡೆಸಿ: ಕಾಂಗ್ರೆಸ್ಗೆ ಕುಮಾರಸ್ವಾಮಿ ಸವಾಲು
ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ಅನುದಾನ ನೀಡಿದ್ದರು. ಈ ಬಾರಿ ಅಧಿಕಾರಕ್ಕೆ ಬಂದ ಎರಡೇ ದಿನಕ್ಕೆ ಹಜ್ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ನೀಡಿದ್ದಾರೆ. ಅಲ್ಲದೆ, ಒಟ್ಟು 5 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂದು ಘೋಷಿಸಿದ್ದಾರೆ. ಹಜ್ ಭವನ ಕಟ್ಟೋಕೆ ರೋಷನ್ ಬೇಗ್ ಅವರ ಶ್ರಮ ಬಹಳಷ್ಟಿದೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:16 pm, Mon, 12 June 23