ಐದು ವರ್ಷಗಳಲ್ಲಿ ಕರ್ನಾಟಕದ ನಾಲ್ಕು ಕಡೆ ಹಜ್ ಭವನ ತಲೆ ಎತ್ತಲಿದೆ: ಜಮೀರ್ ಅಹ್ಮದ್ ಖಾನ್
ಐದು ವರ್ಷಗಳಲ್ಲಿ ಕರ್ನಾಟಕದ ನಾಲ್ಕು ಕಡೆ ಹಜ್ ಭವನ ತಲೆ ಎತ್ತಲಿದೆ ಎಂದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹಜ್ ಯಾತ್ರಿಕರ ವಿಮಾನಯಾನ ಉದ್ಘಾಟನಾ ಸಮಾರಂಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಐದು ವರ್ಷಗಳಲ್ಲಿ ಕರ್ನಾಟಕದ ನಾಲ್ಕು ಕಡೆ ಹಜ್ ಭವನ (Haj Bhavan) ತಲೆ ಎತ್ತಲಿದೆ ಎಂದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದ್ದಾರೆ. ಬೆಂಗಳೂರಿನ ಯಲಹಂಕದ ಹಜ್ ಭವನದಲ್ಲಿ ನಡೆದ ಹಜ್ ಯಾತ್ರಿಕರ ವಿಮಾನಯಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಬುರಗಿ, ರಾಯಚೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ ಆಗಲಿದೆ ಎಂದರು.
ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ಅನುದಾನ ನೀಡಿದ್ದರು. ಈ ಬಾರಿ ಅಧಿಕಾರಕ್ಕೆ ಬಂದ ಎರಡೇ ದಿನಕ್ಕೆ ಹಜ್ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ನೀಡಿದ್ದಾರೆ. ಅಲ್ಲದೆ, ಒಟ್ಟು 5 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂದು ಘೋಷಿಸಿದ್ದಾರೆ. ಹಜ್ ಭವನ ಕಟ್ಟೋಕೆ ರೋಷನ್ ಬೇಗ್ ಅವರ ಶ್ರಮ ಬಹಳಷ್ಟಿದೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ಗ್ಯಾರಂಟಿ ಅನುಷ್ಠಾನದಿಂದ 5 ಸಾವಿರ ಕೋಟಿ ಕೊಡಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ 5 ಸಾವಿರ ಕೋಟಿಗಿಂತ ಕಡಿಮೆ ಮಾಡಬಾರದು. ಅನುದಾನ ಕಡಿಮೆ ಮಾಡಬಾರದೆಂದು ಮುಸ್ಲಿಂ ಮುಖಂಡರ ಬೇಡಿಕೆ ಇದೆ. ಯಾವುದೇ ಕಾರಣಕ್ಕೂ ಅನುದಾನ ಕಡಿಮೆ ಮಾಡಬಾರದು ಸರ್ ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಜ್ ಸಮಿತಿ ಸಹಕಾರದಲ್ಲಿ ಹಜ್ ಯಾತ್ರೆ ಆರಂಭವಾಗಿದೆ. ಅತ್ಯಂತ ಸಂತೋಷದಿಂದ ಹಜ್ ಯಾತ್ರಡ ಉದ್ಘಾಟನೆ ನೆರವೇರಿಸಿದ್ದೇನೆ. ಸರ್ಕಾರ, ನಾಡಿನ ಜನತೆಯ ಪರವಾಗಿ ಹಜ್ ಯಾತ್ರಿಗಳ ಪ್ರಯಾಣ ಶುಭಕರವಾಗಿರಲೆಂದು ಪ್ರಾರ್ಥಿಸುತ್ತೇನೆ. ನಾನು ಸಿಎಂ ಆಗಿದ್ದಾಗ ಐದು ವರ್ಷಗಳೂ ಕೂಡ ಹಜ್ ಯಾತ್ರೆಗೆ ಶುಭ ಕೋರುವ ಅವಕಾಶ ಸಿಗುತ್ತಿತ್ತು. ಈಗ ಮತ್ತೆ ಅವಕಾಶ ಸಿಕ್ಕಿರುವುದು ನಿಮ್ಮೆಲ್ಲರ, ನಾಡಿನ ಜನರ ಆಶೀರ್ವಾದ ಎಂದರು.
ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಮೂಲಭೂತ ಕರ್ತವ್ಯ ನಾಡಿನ ಜನರಿಗೆ ರಕ್ಷಣೆ ಕೊಡಬೇಕು. ರಾಜ್ಯದಲ್ಲಿ ನೆಮ್ಮದಿಯಿಂದ ಜೀವನ ಮಾಡಲು ಎಲ್ಲ ರೀತಿಯ ಸಹಾಯ ಕಾರ್ಯಕ್ರಮ ಕೊಡಬೇಕು. ಹಿಂದೆ ನಮ್ಮ ಸರ್ಕಾರ ಇದ್ದಾಗ ಎಲ್ಲ ಜನರಿಗೆ, ವಿಶೇಷವಾಗಿ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುವ ಕೆಲಸ ಮಾಡಿದ್ದೆವು. ನಾವು ಹೋದ ಮೇಲೆ ಅಹಿಂದ, ಬಡವರು ಭಯ, ಆತಂಕದಿಂದ ಇರುವ ಪರಿಸ್ಥಿತಿ ನಿರ್ಮಾಣವಾಯಿತು. ಸದ್ಯ ನಮ್ಮ ಅಧಿಕಾರವಧಿಯಲ್ಲಿ ಭಯ ಆತಂಕದಿಂದ ಬದುಕುವ ಅಗತ್ಯವಿಲ್ಲ ಎಂದರು. ಈ ವೇಳೆ ಹಜ್ ಯಾತ್ರಿಕರು ಕೇಕೆ ಶಿಳ್ಳೆ ಹಾಕಿದರು.
ಅಲ್ಪಸಂಖ್ಯಾತರ ಹಕ್ಕು ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ: ಸಿದ್ದರಾಮಯ್ಯ
ಮುಂದೆ ನಿಮ್ಮ ಹಕ್ಕು ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ. ಅಲ್ಪಸಂಖ್ಯಾತರಿಗೆ ಖುಷಿ ಪಡಿಸೋಕೆ ಹೇಳುತ್ತಿಲ್ಲ. ಈ ಸರ್ಕಾರ ನಿಮ್ಮ ಜೊತೆ ಇರುತ್ತದೆ. ಇದರಲ್ಲಿ ಯಾರೂ ಸಂಶಯ ಇಟ್ಟುಕೊಳ್ಳುವ ಅಗತ್ಯವಿಲ್ಲ. ಅದರಂತೆ ನಾಡಿನ ಎಲ್ಲ ಜನರ ಹಿತ ಕಾಯುವ ಕೆಲಸವನ್ನ ಸರ್ಕಾರ ಮಾಡುತ್ತದೆ. ನಾವು ಕೊಟ್ಟ ಮಾತಿನಂತೆ ಧರ್ಮ ಜಾತಿ ಭೇದವಿಲ್ಲ ಐದು ಗ್ಯಾರೆಂಟಿ ಈಡೇರಿಸಿದ್ದೇವೆ. ಹಿಂದೆ ಅಲ್ಪಸಂಖ್ಯಾತ ಇಲಾಖೆಯಡಿ ಯಾವೆಲ್ಲಾ ಕಾರ್ಯಕ್ರಮ ಕೊಟ್ಟಿದ್ದೆವೋ ಎಲ್ಲ ಕಾರ್ಯಕ್ರಮ ಮುಂದುವರೆಸುತ್ತೇವೆ. ಅದಕ್ಕೆ ಬೇಕಾದ ಅನುದಾನವನ್ನು ಸರ್ಕಾರ ಕೊಡುತ್ತದೆ ಎಂದರು.
ಹಜ್ ಸಚಿವ ರಹೀಂ ಖಾನ್ ಮಾತನಾಡಿ, ಒಂದು ತಿಂಗಳಿಂದ ಈ ಬಗ್ಗೆ ಸಭೆ ನಡೆಸಿದ್ದೆವು. ಆರೋಗ್ಯ, ಫ್ಲೈಟ್, ವಸತಿ, ಊಟದ ಬಗ್ಗೆ ಪ್ರತಿ ದಿನವೂ ಸಭೆ ನಡೆಸಿ ವ್ಯವಸ್ಥಿತವಾಗಿ ಮಾಡಿದೆವು. ಜಹ್ ಯಾತ್ರಿಕರಿಗೆ ಜಮೀರ್ ಅಹ್ಮದ್ ಖಾನ್ ಅವರು ವೈಯಕ್ತಿಕವಾಗಿ ಊಟ, ವಸತಿಯ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ದಿನವೂ 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ನಮ್ಮ ಇಲಾಖೆಯಿಂದ ಹಜ್ಗೆ ತೆರಳಲು ಬೇಕಾದ ವಿಮಾನ ಸೇರಿದಂತೆ ಎಲ್ಲಾ ಪ್ರಯಾಣದ ಬಗ್ಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಧಾರಾಕಾರ ಮಳೆಯಿಂದ ವೇದಿಕೆ ಮುಂಭಾಗಕ್ಕೆ ನುಗ್ಗಿದ ನೀರು
ಹಜ್ ಯಾತ್ರಿಕರ ವಿಮಾನಯಾನ ಉದ್ಘಾಟನಾ ಸಮಾರಂಭದ ವೇಳೆ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದಾಗಿ ವೇದಿಕೆ ವೇದಿಕೆ ಮುಂಭಾಗಕ್ಕೆ ಮಳೆ ನೀರು ನುಗ್ಗಿದ್ದು, ಜರ್ಮನ್ ಟೆಂಟ್‌ನಡಿ ಆಶ್ರಯ ಪಡೆಯಲು ಯಾತ್ರಿಕರು ಪರದಾಟ ನಡೆಸಿದರು. ಹಜ್ ಭವನದಲ್ಲಿ ಬೃಹತ್ ಹಾಲ್ ಇದ್ದರೂ ಹೊರಗೆ ವೇದಿಕೆ ನಿರ್ಮಾಣ ಮಾಡಿದ ಹಿನ್ನೆಲೆ ಕಾರ್ಯಕ್ರಮದ ಆಯೋಜಕರ ವಿರುದ್ಧ ಹಜ್ ಯಾತ್ರಿಕರು ಆಕ್ರೋಶ ಹೊರಹಾಕಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ