ದೇಶದ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಲಿರುವ ಚುನಾವಣೆಗೆ (Presidential poll) ಸೋಮವಾರ ಮತದಾನ ನಡೆದಿದ್ದು ಎಲ್ಲಾ ಕಡೆ ಶಾಂತಿಯುತ ಮತ್ತು ಸೌಹಾರ್ದಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ. ಒಟ್ಟು ಶೇ 99.18 ಮತದಾನ ದಾಖಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಪಿ.ಸಿ ಮೋಡಿ (PC Mody) ಹೇಳಿದ್ದಾರೆ. ಶಿರೋಮಣಿ ಅಕಾಲಿದಳ ಶಾಸಕ ಮನಪ್ರೀತ್ ಸಿಂಗ್ ಅಯಾಲಿ ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ್ದಾರೆ. ಪಂಜಾಬ್ಗೆ ಸಂಬಂಧಿಸಿದ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ ಅಷ್ಟೇ ಅಲ್ಲದೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಬೆಂಬಲಿಸಲು ನಿರ್ಧರಿಸುವಾಗ ತಮ್ಮ ಪಕ್ಷದ ನಾಯಕತ್ವ ನನ್ನನ್ನು ಭೇಟಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. 727 ಸಂಸದರು ಮತ್ತು 9 ಶಾಸಕರು ಸೇರಿದಂತೆ 736 ಸದಸ್ಯರು ರಾಷ್ಟ್ರಪತಿ ಚುನಾವಣೆಗೆ ಸಂಸತ್ನಲ್ಲಿ ಮತದಾನ ಮಾಡಲು ಅನುಮತಿ ನೀಡಲಾಗಿದೆ. ಇದರಲ್ಲಿ 730(721 ಸಂಸದರು, 9 ಶಾಸಕ) ಇಂದು ಮತದಾನ ಮಾಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ. ಇಲ್ಲಿ ಎಂಟು ಸಂಸದರು ಮತದಾನ ಮಾಡಿಲ್ಲ. ಈ ಪೈಕಿ ಬಿಜೆಪಿ – 2, ಕಾಂಗ್ರೆಸ್ – 1, ಶಿವಸೇನಾ – 2, ಸಮಾಜವಾದಿ ಪಕ್ಷ- 1, ಬಿಎಸ್ಪಿ – 1, ಎಐಎಂಐಎಂ – 1 ಸಂಸದರು ಮತದಾನ ಮಾಡಿಲ್ಲ.
ಪಿಪಿಇ ಕಿಟ್ನಲ್ಲಿ ಬಂದು ಮತದಾನ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಅವರು ಕೋವಿಡ್ ಬಾಧಿತರಾಗಿದ್ದು ಪಿಪಿಇ ಕಿಟ್ ಧರಿಸಿ ಬಂದು ಮತದಾನ ಮಾಡಿದ್ದಾರೆ.
ರಸ್ತೆ ಮತ್ತು ವಾಯುಮಾರ್ಗ ಮೂಲಕ ದೆಹಲಿ ತಲುಪಲಿದೆ ಮತ ಪೆಟ್ಟಿಗೆ
ರಾಷ್ಟ್ರಪತಿ ಚುನಾವಣೆಯ ಮತ ಪೆಟ್ಟಿಗೆಗಳನ್ನು ರಸ್ತೆ ಮತ್ತು ವಿಮಾನದ ಮೂಲಕ ದೆಹಲಿಗೆ ಸಾಗಿಸಲಾಗುವುದು ಎಂದು ಚೀಫ್ ರಿಟರ್ನಿಂಗ್ ಅಫೀಸರ್ ಹೇಳಿದ್ದಾರೆ. ಸಹಾಯಕ ರಿಟರ್ನಿಂಗ್ ಆಫೀಸರ್ ಮತಪೆಟ್ಟಿಗೆ ಸಾಗಿಸುವಾಗ ಜತೆಯಲ್ಲಿ ಹೋಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಎಲ್ಲ ರಾಜ್ಯಗಳಿಂದ ಸೋಮವಾರ ಸಂಜೆ ಬ್ಯಾಲೆಟ್ ಬಾಕ್ಸ್ ಸಂಸತ್ ಗೆ ತಲುಪಲಿದೆ ಎಂದು ಅವರು ಹೇಳಿದ್ದಾರೆ.
70 ಸದಸ್ಯರಿರುವ ದೆಹಲಿ ವಿಧಾನಸಭೆಯಲ್ಲಿ 68 ಸದಸ್ಯರು ಮತದಾನ ಮಾಡಿದ್ದಾರೆ. ಮುಸ್ತಫಾಬಾದ್ ಶಾಸಕ ಹಾದಿ ಯೂನಸ್ ಹಜ್ ತೀರ್ಥಯಾತ್ರೆಯಲ್ಲಿದ್ದು, ಸಚಿವ ಸತ್ಯೇಂದರ್ ಜೈನ್ ಜೈಲಿನಲ್ಲಿದ್ದಾರೆ . ಹಾಗಾಗಿ ಇಬ್ಬರಿಗೆ ಮತದಾನ ಮಾಡಲು ಸಾಧ್ಯವಾಗಿಲ್ಲ.
ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ ಒ ಪನ್ನೀರ್ ಸೆಲ್ವಂ
ಕೋವಿಡ್ ಬಾಧಿತರಾಗಿರುವ ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಪಿಪಿಇ ಕಿಟ್ ಧರಿಸಿ ಬಂದು ಮತದಾನ ಮಾಡಿದ್ದಾರೆ.
Published On - 6:30 pm, Mon, 18 July 22