ಭಾರತ್ ಜೋಡೋ ಯಾತ್ರೆ ನಿಲ್ಲಿಸಿ ಹಿಮಾಚಲ, ಗುಜರಾತ್​​ಗೆ ಹೋಗಿ; ರಾಹುಲ್ ಗಾಂಧಿಗೆ ಗೋವಾದ ಮಾಜಿ ಸಿಎಂ ಸಲಹೆ

'ಕಾಂಗ್ರೆಸ್‌ಗೆ ಭಾರತ್ ಜೋಡೋ ಯಾತ್ರೆ ಅತ್ಯಂತ ಮಹತ್ವದ್ದಾಗಿದೆ. ಪಕ್ಷ ತಳಮಟ್ಟದಲ್ಲಿ ಬೆಳೆಯಬೇಕು ಎಂಬುದು ನಮ್ಮ ಆಶಯ. ರಾಹುಲ್ ಗಾಂಧಿ ಅದ್ಭುತ ಕೆಲಸ ಮಾಡಿದ್ದಾರೆ...

ಭಾರತ್ ಜೋಡೋ ಯಾತ್ರೆ ನಿಲ್ಲಿಸಿ ಹಿಮಾಚಲ, ಗುಜರಾತ್​​ಗೆ ಹೋಗಿ; ರಾಹುಲ್ ಗಾಂಧಿಗೆ ಗೋವಾದ ಮಾಜಿ ಸಿಎಂ ಸಲಹೆ
ರಾಹುಲ್ ಗಾಂಧಿ
Updated By: ರಶ್ಮಿ ಕಲ್ಲಕಟ್ಟ

Updated on: Oct 17, 2022 | 9:40 PM

ಪಣಜಿ: ಈಗ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ಬಿಟ್ಟು ಹಿಮಾಚಲ ಪ್ರದೇಶ  (Himachal Pradesh)ಮತ್ತು ಗುಜರಾತ್ (Gujarat) ರಾಜ್ಯಗಳ ಮೇಲೆ ರಾಹುಲ್ ಗಾಂಧಿ ಗಮನ ಕೇಂದ್ರೀಕರಿಸಬೇಕು ಎಂದು ಕಾಂಗ್ರೆಸ್ ಸಂಸದ ಮತ್ತು ಗೋವಾದ ಮಾಜಿ ಮುಖ್ಯಮಂತ್ರಿ ಫ್ರಾನ್ಸಿಸ್ಕೊ ಸರ್ದಿನ್ಹಾ ಸೋಮವಾರ ಹೇಳಿದ್ದಾರೆ. ಬಿಜೆಪಿಯನ್ನು ಸೋಲಿಸುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್​​ನ ಭಾರತ್ ಜೋಡೋ ಯಾತ್ರೆಯು 150 ದಿನಗಳಲ್ಲಿ 3,570 ಕಿಮೀ ಕ್ರಮಿಸಿದೆ. ಇದು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿದ್ದು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಇದುವರೆಗೆ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ಎಂಬ ನಾಲ್ಕು ರಾಜ್ಯಗಳಲ್ಲಿ ಸಂಚರಿಸಿದ್ದಾರೆ. ‘ಕಾಂಗ್ರೆಸ್‌ಗೆ ಭಾರತ್ ಜೋಡೋ ಯಾತ್ರೆ ಅತ್ಯಂತ ಮಹತ್ವದ್ದಾಗಿದೆ. ಪಕ್ಷ ತಳಮಟ್ಟದಲ್ಲಿ ಬೆಳೆಯಬೇಕು ಎಂಬುದು ನಮ್ಮ ಆಶಯ. ರಾಹುಲ್ ಗಾಂಧಿ ಅದ್ಭುತ ಕೆಲಸ ಮಾಡಿದ್ದಾರೆ, ಆದರೆ ಈಗ ರಾಹುಲ್‌ಜಿ ಈ ಯಾತ್ರೆ ತಕ್ಷಣ ನಿಲ್ಲಿಸಿ ಚುನಾವಣೆ ನಡೆಯುವ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ಗೆ ಹೋಗಬೇಕು ಎಂದು ನಾನು ಬಯಸುತ್ತೇನೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಮತದಾನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ದಿನ್ಹಾ ಹೇಳಿದ್ದಾರೆ.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನವೆಂಬರ್ 12 ರಂದು ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಗುಜರಾತ್ ಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ.

ಈ ಎರಡು ರಾಜ್ಯಗಳ ಜನರನ್ನು ಕಾಂಗ್ರೆಸ್‌ಗೆ ಮತ ಹಾಕುವಂತೆ ರಾಹುಲ್ ಗಾಂಧಿ ಜಾಗೃತಗೊಳಿಸಬೇಕಾಗಿದೆ ಎಂದು ಸರ್ದಿನ್ಹಾ ಹೇಳಿದರು. ಬಿಜೆಪಿಗೆ ಸವಾಲನ್ನು ಒಡ್ಡುವ ಮತ್ತು ಅದನ್ನು ಸೋಲಿಸುವ “ಏಕೈಕ ಪಕ್ಷ” ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ದಕ್ಷಿಣ ಗೋವಾದ ಲೋಕಸಭಾ ಸದಸ್ಯ ಹೇಳಿದ್ದಾರೆ.

ಎಐಸಿಸಿ ನೂತನ ಅಧ್ಯಕ್ಷರ ಆಯ್ಕೆಗೆ ಸೋಮವಾರ ನಡೆಯುತ್ತಿರುವ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸರ್ದಿನ್ಹಾ, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅವಿರೋಧವಾಗಿ ಆಯ್ಕೆಯಾಗಲು ಶಶಿ ತರೂರ್ ಅವರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯಬೇಕಿತ್ತು. ಗೋವಾದ ಶೇ.99 ರಷ್ಟು ಕಾಂಗ್ರೆಸ್ಸಿಗರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ಹಾಕಲಿದ್ದಾರೆ,” ಎಂದು ಹೇಳಿದರು.