ಬಸವರಾಜ ಬೊಮ್ಮಾಯಿ ಕಾರ್ಯವೈಖರಿಗೆ ವರಿಷ್ಠರ ಮೆಚ್ಚುಗೆ, ಸಿಎಂ ಅಭ್ಯರ್ಥಿ ಘೋಷಣೆ ಸಾಧ್ಯತೆ: ಅರುಣ್ ಸಿಂಗ್
Karnataka Politics: ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದರು.
ಬೆಂಗಳೂರು: ಬಿಜೆಪಿಯ ಹೈಕಮಾಂಡ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ಕಾರ್ಯವೈಖರಿ ಇಷ್ಟವಾಗಿದೆ. ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ (Arun Singh) ಹೇಳಿದರು. ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದರು.
ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ‘ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶದಲ್ಲಿ ‘ಬೊಮ್ಮಾಯಿ ಕಾರ್ಯವೈಖರಿ ಬಗ್ಗೆ ಅವರಿಗೆ (ವರಿಷ್ಠರಿಗೆ) ಮೆಚ್ಚುಗೆ ಇದೆ’ ಎಂದು ಅರುಣ್ ಸಿಂಗ್ ಪುನರುಚ್ಚರಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಹಿಸಲಿರುವ ಪಾತ್ರಗಳು ಏನಾಗಿರುತ್ತವೆ? ಯಾರನ್ನಾದರೂ ಮುಖ್ಯಮಂತ್ರಿ ಮುಖವಾಗಿ ಬಿಂಬಿಸುವ ಆಲೋಚನೆ ಪಕ್ಷಕ್ಕೆ ಇದೆಯೇ ಎಂದು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, ‘ಬೊಮ್ಮಾಯಿ ಬಗ್ಗೆ ಮೆಚ್ಚುಗೆಯಿದೆ’ ಎಂದಷ್ಟೇ ಹೇಳಿದ್ದರು.
‘ಬಿಜೆಪಿಯು ಈ ಬಾರಿ ಕರ್ನಾಟಕದಲ್ಲಿ ತಾನು ಇರಿಸಿಕೊಂಡಿರುವ ಗುರಿ 150ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಲಿದೆ. ಮೋದಿ ಮತ್ತು ಬೊಮ್ಮಾಯಿ ಆಡಳಿತ ಕೊಟ್ಟಿರುವ ಜನಪರ ಯೋಜನೆಗಳಿಗೆ ರಾಜ್ಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ಅವರು ತಿಳಿಸಿದರು.
‘ಬೊಮ್ಮಾಯಿ ನಾಯಕತ್ವ ಮತ್ತು ಯಡಿಯೂರಪ್ಪ ಮಾರ್ಗದರ್ಶನದಲ್ಲಿಯೇ ಬಿಜೆಪಿ ಚುನಾವಣೆಯನ್ನು ಎದುರಿಸಲಿದೆ’ ಎಂದು ಅವರು ಹೇಳಿದರು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಕರ್ನಾಟಕದ ಜನಪ್ರಿಯ ನಾಯಕ ಯಡಿಯೂರಪ್ಪ ಅವರು ಈಗ ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ.
‘ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಮುಂದಿನ ಚುನಾವಣೆಗೆ ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಸಾಮಾನ್ಯ ಜನರೊಂದಿಗೆ ಸುಲಭವಾಗಿ ಬೆರೆಯುವ ಬೊಮ್ಮಾಯಿ ಆಡಳಿತವನ್ನು ಜನರು ಮೆಚ್ಚಿಕೊಂಡಿದ್ದಾರೆ. ಬೊಮ್ಮಾಯಿ ನಮ್ಮವರು ಎಂದು ಕರ್ನಾಟಕದ ಎಲ್ಲ ಜನರೂ ಭಾವಿಸುತ್ತಿದ್ದಾರೆ’ ಎಂದು ಅರುಣ್ ಸಿಂಗ್ ವಿವರಿಸಿದರು.
ಯಡಿಯೂರಪ್ಪ ಅವರನ್ನು ಪಕ್ಷವು ಸದಾ ಗೌರವಿಸುತ್ತದೆ. ಅವರ ಮಾರ್ಗದರ್ಶನದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಪಕ್ಷದ ಸಂಘಟನೆಗಾಗಿ ಮತ್ತು ಮತದಾರರನ್ನು ಸೆಳೆಯಲು ಯಡಿಯೂರಪ್ಪ ಶೀಘ್ರ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ಅದು ದೊಡ್ಡ ವಿಚಾರ ಎಂದು ಅರುಣ್ ಸಿಂಗ್ ನುಡಿದರು.
ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಮತ್ಕಾರವೇ ನಡೆಯಲಿದೆ. ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಜೆಡಿಎಸ್-ಕಾಂಗ್ರೆಸ್ನ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಇತ್ತೀಚೆಗೆ ಚುನಾವಣೆ ನಡೆದ ಗೋವಾ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಣಿಪುರಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ನೆಲಕಚ್ಚಿದೆ. ಕಾಂಗ್ರೆಸ್ ಬಿಡುವ ಅಭಿಯಾನ ಎಲ್ಲೆಡೆ ನಡೆಯುತ್ತಿದೆ. ರಾಹುಲ್ ಗಾಂಧಿ ಅವರ ಜೋಡೋ ಯಾತ್ರೆಯು ಫ್ಲಾಪ್ ಯಾತ್ರೆಯಾಗಿದೆ ಎಂದು ಲೇವಡಿ ಮಾಡಿದರು.
ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಲಿಂಕ್: BJP’s central leadership pleased with Bommai’s performance, to be CM candidate in Karnataka
Published On - 9:47 am, Mon, 17 October 22