ಬೆಂಗಳೂರು, ಫೆಬ್ರವರಿ: ಇಂದು (ಫೆ.27) ಬೆಳಿಗ್ಗೆಯಿಂದಲೇ ರಾಜ್ಯಸಭೆ ಚುನಾವಣೆ (Rajya Sabha Election) ಮತದಾನ ಆರಂಭವಾಗಿದೆ. ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ (BJP) ಶಾಸಕ ಎಸ್.ಟಿ.ಸೋಮಶೇಖರ್ (ST Somashekar) ಕಾಂಗ್ರೆಸ್ (Congress) ಪರ ಮತ ಚಲಾಯಿಸುವ ಮೂಲಕ ಅಡ್ಡ ಮತದಾನ ಮಾಡಿದ್ದಾರೆ. ಮಾತದಾನ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆತ್ಮಸಾಕ್ಷಿಯ ಮತ ಚಲಾವಣೆ ಮಾಡಿದ್ದೇನೆ ಎಂದು ಹೇಳಿದರು.
ಶಾಸಕ ಎಸ್ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಕೊಠಡಿಯಲ್ಲಿ ಸಭೆ ಸೇರಲಾಗಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ “ತಲೆ ಕೆಡಿಸಿಕೊಳ್ಳುವುದು ಬೇಡ, ಅದು ಗೊತ್ತಿದ್ದ ವಿಷಯ” ಎಂಬ ಸಮಾಧಾನದ ಮಾತುಗಳನ್ನು ಆಡಿದ್ದಾರೆ.
ಇನ್ನು ಅಡ್ಡ ಮತದಾನ ಮಾಡಿರುವ ಎಸ್ಟಿ ಸೋಮಶೇಖರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ. “ನಮಗೆ ಮತ ಹಾಕಿದ್ದರೆ ಸೋಮಶೇಖರ್ಗೆ ಧನ್ಯವಾದ ತಿಳಿಸುವೆ” ಎಂದರು.
ಬಿಜೆಪಿ ತನ್ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಈ ಮೂಲಕ ಎಲ್ಲ ಶಾಸಕರು ರಾಜ್ಯಸಭೆ ಚುನಾವಣೆಗೆ ಹಾಜರಾಗಬೇಕು. ಹಾಗೇ ಪಕ್ಷ ಸೂಚಿಸುವ ಅಭ್ಯರ್ಥಿಗೆ ಮತ ಹಾಕಬೇಕು. ಆದರೆ ಇಲ್ಲಿ ಶಾಸಕ ಎಸ್ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದ್ದು, ಬಿಜೆಪಿಯ ಮುಂದಿನ ನಡೆ ಏನು ಎಂಬುವುದು ಕಾದು ನೋಡಬೇಕಿದೆ. ಇನ್ನು ವಿಪ್ ಉಲ್ಲಂಘನೆ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕಾಂಗ ಪಕ್ಷದ ನಾಯಕರು ಇಲ್ಲವೇ ಮುಖ್ಯ ಸಚೇತಕರು ಸ್ಪೀಕರ್‌ಗೆ ದೂರು ಸಲ್ಲಿಸಲು ಅವಕಾಶ ಇದೆ. ಆಗ ಶಾಸಕರು, ತಮ್ಮ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮೇಲೆ ಎಫ್ಐಆರ್ಗೆ ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ: ಏನದು?
ಇನ್ನು ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕೂಡ ಅಡ್ಡ ಮತದಾನ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಿವರಾಮ ಹೆಬ್ಬಾರ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಹೀಗಾಗಿ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕು ಸಾಧ್ಯತೆ ಇದೆ ಎನ್ನಲಾಗಿದೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ನಾಲ್ಕು ಸ್ಥಾನಗಳಿರುವ ಚುನಾವಣೆಗೆ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷವಾರು ಸಂಖ್ಯಾ ಬಲ ನೋಡುವುದಾದರೆ ಕಾಂಗ್ರೆಸ್ 134, ಬಿಜೆಪಿ 66, ಜೆಡಿಎಸ್ 19 ಮತ್ತು ನಾಲ್ವರು ಪಕ್ಷೇತರ ಶಾಸಕರು ಮತದಾನ ಮಾಡಲಿದ್ದಾರೆ. ಒಟ್ಟು 223 ಶಾಸಕರು ಮತದಾನ ಮಾಡುತ್ತಿದ್ದಾರೆ. 11 ಗಂಟೆಯವರೆಗೆ ಒಟ್ಟು ಶೇ. 50 ಮತ ಚಲಾವಣೆಯಾಗಿದೆ. ಒಟ್ಟು 112 ಶಾಸಕರು ಮತದಾನ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:51 am, Tue, 27 February 24