ಬಾಗಲಕೋಟೆ: ಅಕ್ಕಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಹಗ್ಗಜಗ್ಗಾಟ ವಿಚಾರವಾಗಿ‘ಅಕ್ಕಿ, ನೀರಿನಲ್ಲಿ ರಾಜಕಾರಣ ಮಾಡಬಾರದು. ಹಸಿವಿನ ನೋವು ಎಂತದ್ದು ಇರುತ್ತೆಂದು ನಮಗೆ ಗೊತ್ತು ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್(RB Timmapur) ಹೇಳಿದರು. ಬಾಗಲಕೋಟೆ(Bagalkote)ಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಬಿಜೆಪಿ ಅವರು ಯಾವ ರಾಜ್ಯದವರು?, ಈ ರಾಜ್ಯದವರಿಗೆ ಅನ್ನ ಕೊಡ್ರಪ್ಪ. ಈ ರಾಜ್ಯದ ಬಡವರು ಅನ್ನ ತಿಂತಾರೆ. ಬಿಜೆಪಿ ಸಂಸದರಿಗೆ ವಿಶೇಷವಾದ ಚಿಂತೆ ಆ ಕಡೆಗೆ ಇದೆ. ಯಾವ ರಾಜ್ಯದಲ್ಲೂ ಇಷ್ಟು ಎಂಪಿ ಆರಿಸಿ ಕಳಿಸಿಲ್ಲ. ರಾಜ್ಯದ ಒಂದು ಸಮಸ್ಯೆಗಳ ಬಗ್ಗೆ ಇವರು ಮಾತಾಡ್ತಾರಾ?, ಸರ್ಕಾರ ಇವರದ್ದೆ ಇದೆಯಲ್ಲ ಎಂದು ರಾಜ್ಯದ ಬಿಜೆಪಿ ಸಂಸದರ ವಿರುದ್ದ ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ಅಕ್ಕಿ ಸ್ಟಾಕ್ ಇದೆಯಲ್ಲ. ದೇಶದ ರಕ್ಷಣೆ ಮಾಡುವರು, ಆಡಳಿತ ನಡೆಸುವವರು ಬಡವರಿಗೆ ಅನ್ನ ಕೊಡ್ತೇವೆ ಅಂದಾಗ ಕೊಡಬೇಕಲ್ಲ. ಬೇರೆ ಕಡೆಯಿಂದ ಆಮದು ಮಾಡಿಕೊಳ್ಳಲಿ. ಬಡವರ ಸಲುವಾಗಿ ನಾವು ಪ್ರತಿ ವರ್ಷ ಆಮದು ಮಾಡಿಕೊಳ್ತೇವೆ ಎಂದು ಹೇಳಲಿ. ಬಡವರ ಯೋಜನೆಗಳಿಗೆ ದುರುದ್ದೇಶದಿಂದ ತಡೆ ಮಾಡುವುದು ತರವಲ್ಲ. ಬಡವರು ಇದನ್ನು ಸಹಿಸಿಕೊಳ್ಳಲು ಆಗಲ್ಲ. ಬಡವರ ಬಗ್ಗೆ ಕಾಳಜಿ ತೋರಿಸಲಿ ಎಂದರು.
ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಹಂಚಿಕೆ ವಿಚಾರ ‘ಹಿಂದಿನ ಬಿಜೆಪಿ ಸರ್ಕಾರ ಎಲ್ಲ ಸಮುದಾಯದವರನ್ನು ಮುಗಿಸಿದ್ರು, ಲಿಂಗಾಯುತ ಸಮುದಾಯದಲ್ಲಿ ಬಿಎಸ್ವೈರನ್ನು ಮುಗಿಸಿದ್ರು, ಒಬಿಸಿಯಲ್ಲಿ ಎಲ್ಲ ಜಾತಿಗಳನ್ನು ಸೇರಿಸುವ ಕೆಲಸ ಮಾಡಿದ್ರು, ಗಂಗಾ ಮತಸ್ಥರನ್ನು ಪ್ರವರ್ಗ 1ರಿಂದ ತೆಗೆದು 2ಸಿಗೆ ಸೇರಿಸಿದ್ರು, ದಲಿತರಲ್ಲಿ ಎಡ, ಬಲ ಸಮುದಾಯದವರಿಗೆ ಚಾಕೊಲೇಟ್ ನೀಡಿ ಯಾಮಾರಿಸಲು ಯತ್ನಿಸಿದರು ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ. ಅದೆಲ್ಲ ಈಗ ಬಿಜೆಪಿಯವರಿಗೇ ತದ್ವಿರುದ್ಧ ಆಗಿದೆ. ನಮ್ಮ ಸರ್ಕಾರ ಎಲ್ಲ ಜಾತಿ ಸಮುದಾಯಕ್ಕೆ ನ್ಯಾಯ ಒದಗಿಸಲಿದ್ದು, ಶಿಕ್ಷಣ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಪರಿಶೀಲಿಸಿ ನಿರ್ಧರಿಸಲಿದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ್ ಹೇಳಿದರು.
ಇದೇ ವೇಳೆ ರಾಜ್ಯದಲ್ಲಿ ಮುಂಗಾರು ಮಳೆ ಇಲ್ಲ, ಮಹಾರಾಷ್ಟ್ರ ನೀರು ಬಿಡುತ್ತಿಲ್ಲ ಎನ್ನುವ ವಿಚಾರ ‘ನೀರು ಪೂರೈಕೆ ಬಗ್ಗೆ ಬಹಳ ಗಮನ ಕೊಡಬೇಕಿದೆ. ಕುಡಿವ ನೀರಿಗೆ ನಾವು ಪ್ರಾಮುಖ್ಯತೆ ಕೊಡುತ್ತೇವೆ. ರಾಜ್ಯಕ್ಕೆ ಒಂದು ಕಡೆ ಕೇಂದ್ರ ಅಕ್ಕಿ ಕೊಡುತ್ತಿಲ್ಲ. ಈಗ ಮಹಾರಾಷ್ಟ್ರ ಧೋರಣೆ ಏನಿದೆಯೋ?, ಈ ಪಕ್ಷಪಾತ ಧೋರಣೆ ಜನರ ಜೊತೆ ಮಾಡಬಾರದು. ನೋಡೋಣ ಮೊದಲು ನೀರು ಕೊಡಿ ಎಂದು ವಿನಂತಿ ಮಾಡ್ತೇವೆ. ಪ್ರಧಾನಮಂತ್ರಿಗಳು ಅಂದ್ರೆ ನಮ್ಮ ದೇಶಕ್ಕೆ ತಂದೆ ತರಹ, ತಾಯಿ ಕರಳು ಇರಬೇಕು. ಅಕ್ಕಿ, ನೀರಿನಲ್ಲಿ ರಾಜಕಾರಣ ಮಾಡಬಾರದು ಎಂದರು.
ಇದನ್ನೂ ಓದಿ:ತೀವ್ರ ಸ್ವರೂಪ ಪಡೆದುಕೊಂಡ ಅಕ್ಕಿ ರಾಜಕೀಯ: ರಾಜ್ಯಾದ್ಯಂತ ಇಂದು ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ
‘ಆ ಹಸಿವಿನ ನೋವು ಉಂಡು ನಾವು ಬೆಳೆದು ಇವತ್ತು ಸಚಿವರಾಗಿದ್ದೇವೆ. ಹಸಿವಿನ ನೋವು ಎಂತದ್ದು ಇರುತ್ತೆಂದು ನಮಗೆ ಗೊತ್ತು. ದಯಮಾಡಿ ನಾನು ವಿನಂತಿ ಮಾಡುತ್ತೇನೆ. ಇದರಲ್ಲಿ ರಾಜಕೀಯ ಮಾಡಬೇಡಿ, ಪ್ರಧಾನಮಂತ್ರಿಗೆ ಯಾರ ಬಗ್ಗೆಯೂ ಕರುಣೆ ಇಲ್ಲ. ಟಾಟಾ, ಅಂಬಾಬಿ, ಅದಾನಿ ಬಗ್ಗೆ ಮಾತ್ರ ಅವರಿಗೆ ಕಾಳಜಿ. ಬಡವರಿಗೆ ಕೊಡುವ ಅನ್ನಕ್ಕೂ ತೊಂದ್ರೆ ಮಾಡ್ತಾರೆ ಅಂದ್ರೆ. ನಮ್ಮ ರಾಜ್ಯದ ಬಡವರ ಪರ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಆತಂಕ ಇದೆ.
ಬಡವರ ವಿರೋಧಿ ನೀತಿ ಅನುಸರಿಸುತ್ತಾ ಬಂದಿದ್ದ ಬಿಜೆಪಿ ಪ್ರವೃತ್ತಿಗೆ ಅಭದ್ರತೆ ಕಾಡತೊಡಗಿದೆ. ನಮ್ಮ ಯೋಜನೆಗಳು ರಾಷ್ಟ್ರವ್ಯಾಪಿ ಪ್ರಚಾರ ಆಗ್ತಿದೆ. ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ಬುಡಕ್ಕೆ ನೀರು ಬರ್ತಿದೆ, ಬಡವರ ಸೌಲಭ್ಯಗಳಿಗೆ ಅಡ್ಡಕತ್ತರಿ ಹಾಕಿ, ಯೋಜನೆ ಮಾಡಲು ಆಗಲ್ಲ ಎನ್ನುವ ಊಹಾಪೋಹ ಎಬ್ಬಿಸಲು ಹೊರಟಿದ್ದಾರೆ. ಆದರೆ, ಇದು ನಡೆಯಲ್ಲ, ನಮ್ಮ ರಾಜ್ಯ ಸರ್ಕಾರ ಮಾಡೇ ಮಾಡುತ್ತೆ. ತೊಂದರೆ ಸರಿ ಮಾಡುವ ತಾಕತ್ತು ಈ ಸರ್ಕಾರಕ್ಕೆ ಇದೆ ಎಂದಿದ್ದಾರೆ.
ಸಿದ್ದರಾಮಯ್ಯ 5 ವರ್ಷವೂ ಸಿಎಂ ಎಂಬ ಸಚಿವರ ಹೇಳಿಕೆ ಕುರಿತು‘ 5 ವರ್ಷ ಸಿಎಂ ಅಂತಾ ಕೆಲವರು ಪ್ರೀತಿಯಿಂದ ಹೇಳಿದ್ದಾರೆ ಅಷ್ಟೇ, ಎಲ್ಲವೂ ಕೂಡ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಆಗುತ್ತೆ. ಈಗ ಯಾರು ಏನೇ ಹೇಳಿದರೂ ವೈಯಕ್ತಿಕ ಅಭಿಪ್ರಾಯ ಅಷ್ಟೇ. ವೈಯಕ್ತಿಕ ಅಭಿಪ್ರಾಯದ ಪ್ರಕಾರ ಮುಂದುವರಿಸಲು ಆಗುತ್ತಾ?, ಬಿಜೆಪಿಯವರ ಭ್ರಮೆಗಳಿಗೆ ನನ್ನ ಕಡೆ ಉತ್ತರ ಇಲ್ಲ. ಇನ್ನು ಇದೇ ವೇಳೆ ರಾಜಕೀಯ ನಿವೃತ್ತಿ ಬಗ್ಗೆ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರ ‘ಒಮ್ಮೊಮ್ಮೆ ಭಾವನೆಗಳು ವ್ಯಕ್ತವಾಗುತ್ತೆ, ಭಾವನೆ ಕಾನೂನು ಆಗಲ್ಲ. ನಾನು ಮುಖ್ಯಮಂತ್ರಿ ಆಗಬೇಕೆಂಬ ಭಾವನೆ ಎಲ್ಲರಲ್ಲೂ ಇರುತ್ತೆ ಎಂದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Tue, 20 June 23