ರಾಜಕೀಯ ಸೇರಲು ಉತ್ಸುಕರಾಗಿರುವ ರೌಡಿ ಪಟಾಲಂ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸಿಸಿಬಿ ಮಾಸ್ಟರ್ ಪ್ಲಾನ್

ಚುನಾವಣೆ ಸಮಯದಲ್ಲಿ ರಾಜಕೀಯ ಸೇರಲು ಉತ್ಸುಕರಾಗಿರುವ ರೌಡಿ ಪಟಾಲಂ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸಿಸಿಬಿ ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ರಾಜಕೀಯ ಸೇರಲು ಉತ್ಸುಕರಾಗಿರುವ ರೌಡಿ ಪಟಾಲಂ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸಿಸಿಬಿ ಮಾಸ್ಟರ್ ಪ್ಲಾನ್
ಸಿಸಿಬಿ ಪೊಲೀಸ್
Edited By:

Updated on: Dec 17, 2022 | 7:42 AM

ಬೆಂಗಳೂರು: ಕೆಲವೇ ತಿಂಗಳುಗಳಲ್ಲಿ ವಿಧಾನ ಸಭೆ (Karnataka Election 2023) ಹಾಗೂ ಬಿಬಿಎಂಪಿ ಚುನಾವಣೆ (BBMP Election) ಸಮೀಪಿಸುತ್ತಿದೆ. ಒಬ್ಬೊಬ್ಬರಾಗಿ ರೌಡಿಶೀಟರ್​ಗಳು (Rowdy Sheeters) ಶ್ವೇತ ವಸ್ತ್ರಧಾರಿಗಳಾಗಿ ಸೋ‌ಕಾಲ್ಡ್ ಸಮಾಜ ಸೇವಕರಂತೆ ತಮ್ಮನ್ನ ಬಿಂಬಿಸಿಕೊಳ್ಳಲು ಶುರುಮಾಡಿದ್ದಾರೆ. ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವ ಸಮಾಜ ಸೇವಕರೆಂದು ಸೇವಾ ಕಾರ್ಯಕ್ರಮಗಳನ್ನ ಆಯೋಜಿಸಿ ಫೋಸ್ ಕೊಡುವ ರೌಡಿಶೀಟರ್​ಗಳು ಜತೆ-ಜತೆಗೆ ಫ್ಲೆಕ್ಸ್​ಗಳಲ್ಲಿ ಬ್ಯಾನರ್​ಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಇದಕ್ಕೆ ಪರೋಕ್ಷ ಬೆಂಬಲವೆಂಬಂತೆ ಕೆಲ ರಾಜಕೀಯ ಧುರೀಣರು ರೌಡಿಶೀಟರ್​ಗಳ ಹಿನ್ನೆಲೆ ಅರಿವಿದ್ದರೂ ಸ್ವತಃ ವೇದಿಕೆ ಹಂಚಿಕೊಂಡು ಹಾರ-ತುರಾಯಿ ಹಾಕಿಕೊಳ್ಳುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳಿಂದ ಹಿಡಿದು ರಾಷ್ಟೀಯ ಪಕ್ಷಗಳ ರಾಜಕಾರಣಿಗಳು ಪಕ್ಷಾತೀತವಾಗಿ ಅಪರಾಧ ಹಿನ್ನೆಲೆಯುಳ್ಳವರನ್ನ, ರೌಡಿಶೀಟರ್​ಗಳನ್ನ ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳಲು ಅಣಿಯಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ನಡುವೆ ಚುನಾವಣೆ ಸಮಯದಲ್ಲಿ ರಾಜಕೀಯ ಸೇರಲು ಉತ್ಸುಕರಾಗಿರುವ ರೌಡಿ ಪಟಾಲಂ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸಿಸಿಬಿ ಮಾಸ್ಟರ್ ಪ್ಲಾನ್ ಮಾಡಿದೆ. ಅದೇನೆಂದು ಇಲ್ಲಿದೆ ನೋಡಿ.

ಬೆಂಗಳೂರಿನ ಕುಖ್ಯಾತ ರೌಡಿಶೀಟರ್ಸ್ ಮೇಲೆ ಸಿಸಿಬಿ ಕಣ್ಣಿಟ್ಟಿದೆ. ಅಕ್ರಮವಾಗಿ ಬೇನಾಮಿ ಆಸ್ತಿ-ಪಾಸ್ತಿ ಸಂಪಾದಿಸಿಟ್ಟಿರುವ ರೌಡಿಶೀಟರ್​ಗಳ ಆದಾಯ ಮೂಲ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದು, ಸೂಕ್ತ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಹೊಂದಿದವರ ರೌಡಿಶೀಟರ್​ಗಳನ್ನ ರೌಂಡಪ್ ಮಾಡಿ ಖೆಡ್ಡಾ ಕೆಡವಲು ಖಾಕಿ ಟೀಂ ಸನ್ನದ್ಧವಾಗಿದ್ದು, ಈಗಾಗಲೇ ಕಾರ್ಯಚರಣೆ ಆರಂಭಸಿದೆ. ರಿಯಲ್ ಎಸ್ಟೇಟ್, ಹಫ್ತಾ ವಸೂಲಿ ದಂಧೆ ನಡೆಸುವವರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪ್ಲಾನ್ ಮಾಡಿರುವ ಸಿಸಿಬಿ ಪೊಲೀಸರು, ರಾಜ್ಯ ರಾಜಧಾನಿಯ ಉದ್ಯಮಿಗಳು, ಭೂ ಮಾಲೀಕರ ಬೆದರಿಸಿ ಅಕ್ರಮ ಆಸ್ತಿ ಸಂಪಾದಿಸಿದ ರೌಡಿಶೀಟರ್​ಗಳಿಗೆ ಶಾಕ್ ನೀಡಲಿದ್ದಾರೆ.

ಇದನ್ನೂ ಓದಿ: ಶಾರೀಕ್‌ಗಿಂತಲೂ ಸಿಟಿ ರವಿ ರಾಜ್ಯದ ದೊಡ್ಡ ಮಾಸ್ಟರ್‌ಮೈಂಡ್ ಉಗ್ರ: ಕಿಸಾನ್ ಕಾಂಗ್ರೆಸ್ ಅಧ್ಯಕ್ಷ

ಸಿಸಿಬಿ ಪ್ರತ್ಯೇಕ ತಂಡದಿಂದ ರೌಡಿಶೀಟರ್ಸ್ ಆಸ್ತಿಪಾಸ್ತಿ ‌ಕುರಿತು ದಾಖಲೆಗಳ ಸಂಗ್ರಹ ಮಾಡಲಾಕ್ತಿದ್ದು, ಅಮಾಯಕರನ್ನ ಬೆದರಿಸಿ ರಿಯಲ್ ಎಸ್ಟೇಟ್ ಮತ್ತಿತರ ವ್ಯವಹಾರಗಳಲ್ಲಿ ಬೆಂಗಳೂರಿನ ಕೆಲ ರೌಡಿಶೀಟರ್​​ಗಳು ಹಣ ಗಳಿಕೆ ಕುರಿತಂತೆ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಶಂಕೆ ವ್ಯಕ್ತಪಡಿಸಿರುವ ಸಿಸಿಬಿ ಪೊಲೀಸರ ತಂಡ ಸಾಕ್ಷ್ಯಾಧಾರಗಳು, ದಾಖಲೆಗಳ ಸಮೇತ ಪಕ್ಕಾ ಮಾಹಿತಿ ಕಲೆ ಹಾಕಲು ಅಖಾಡಕ್ಕೆ ಇಳಿದಿದ್ದಾರೆ.

ರೌಡಿಶೀಟರ್​ಗಳ ಅಕ್ರಮ ಆಸ್ತಿ ಕುರಿತು ಪೊಲೀಸರಿಗೆ ದಾಖಲೆಗಳು ಲಭ್ಯವಾಗಿ ಪಕ್ಕಾ ಆಗುತ್ತಿದ್ದಂತೆ ಅದರ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಪತ್ರ ಬರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ವಿಭಾಗವಾರು ರೌಡಿಶೀಟರ್​​ಗಳ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಲಿದ್ದಾರೆ. ಪ್ರತಿ ವಿಭಾಗದಲ್ಲೂ ಬರೋಬ್ಬರಿ 30 ರೌಡಿಶೀಟರ್​ಗಳ‌ ಪಟ್ಟಿ ತಯಾರಾಗಿದೆ. ಸದ್ಯ ರೌಡಿಶೀಟರ್​ಗಳ ವ್ಯವಹಾರ ಏನು? ಆದಾಯ ಸಂಗ್ರಹ ಹೇಗೆ?ಹಣಕಾಸಿನ ವಹಿವಾಟು, ಬ್ಯಾಂಕ್‌ ಅಕೌಂಟ್ ಟ್ರಾನ್ಸ್ತಾಕ್ಷನ್ ಮಾಹಿತಿ ಸಂಗ್ರಹ ಮಾಡುತ್ತಿದ್ದು, ರೌಡಿಶೀಟರ್​ಗಳ ಚಲನವಲನ ಕುರಿತು ಸಿಸಿಬಿ‌ ಹದ್ದಿನ ಕಣ್ಣಿಟ್ಟಿದೆ.

ಇದನ್ನೂ ಓದಿ: ಬಿಜೆಪಿಯಲ್ಲಿ ರೌಡಿ ಮೋರ್ಚಾಗೆ ಮನ್ನಣೆ, ಯಾವೊಬ್ಬ ಬಿಜೆಪಿಗರಿಗೂ ಒಳ್ಳೆಯ ಇತಿಹಾಸವಿಲ್ಲವೇಕೆ ಎಂದು ಪ್ರಶ್ನಿಸಿ ಕಾಂಗ್ರೆಸ್​ ಕಿಡಿ

ಈ ಹಿಂದೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ಅಕ್ರಮವಾಗಿ ಆದಾಯಗಳಿಕೆ, ಆಸ್ತಿ-ಪಾಸ್ತಿಗಳ, ದಾಖಲೆಗಳ ಹಿನ್ನಲೆ ಕೆದಕಲು ಮುಂದಾಗಿರುವುದು ರಾಜಕೀಯ ನಾಯಕರಾಗಲು, ರಾಜಕಾರಣಿಗಳ ಪಟಾಲಂ ಸೇರುವ ಸನ್ನಿಹಿತದಲ್ಲಿರುವ, ರಾಷ್ಟೀಯ ಮತ್ತು ಪ್ರಾದೇಶಿಕ ಪಕ್ಷಗಳ ರಾಜಕಾರಣಿಗಳ ಹಿಂದೆ-ಮುಂದೆ ಸುತ್ತಾಡುತ್ತಾ, ಪಕ್ಷಗಳ ಕದ ತಟ್ಟಲು ಮುಂದಾಗಿರುವ ರೌಡಿಶೀಟರ್​ಗಳಿಗೆ ಬಿಸಿ ಮುಟ್ಟಿಸುತ್ತಾರಾ? ರೌಡಿಶೀಟರ್​ಗಳ ಅಟ್ಟಹಾಸಕ್ಕೆ ಸಿಸಿಬಿ ಪೊಲೀಸರ ಈ ಪ್ರಯತ್ನ ಬ್ರೇಕ್ ಹಾಕುತ್ತಾ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಶಿವಪ್ರಸಾದ್, ಟಿವಿ9 ಬೆಂಗಳೂರು

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 am, Sat, 17 December 22