ಬಿಜೆಪಿ MLA ಪರ ಪ್ರತಿಭಟನೆಗೆ ಬಂದುವರು ಪೊಲೀಸ್ ವಶಕ್ಕೆ, ಮುನಿರತ್ನ ಏಕಾಂಗಿ ಧರಣಿ: ಬೇಡಿಕೆ ಏನು?

| Updated By: ರಮೇಶ್ ಬಿ. ಜವಳಗೇರಾ

Updated on: Oct 11, 2023 | 11:36 AM

ಡಿಕೆ ಬ್ರದರ್ಸ್ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಡುವಿನ ರಾಜಕೀಯ ಜಂಗೀ ಕುಸ್ತಿ ಮುಂದುವರೆದಿದೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಟಾರ್ಗೆಟ್ ಪಾಲಿಟಿಕ್ಸ್ ವಿರುದ್ಧ ಮುನಿರತ್ನ (Muniratna) ಸಿಡಿದೆದ್ದಿದ್ದಾರೆ.

ಬಿಜೆಪಿ MLA ಪರ ಪ್ರತಿಭಟನೆಗೆ ಬಂದುವರು ಪೊಲೀಸ್ ವಶಕ್ಕೆ, ಮುನಿರತ್ನ ಏಕಾಂಗಿ ಧರಣಿ: ಬೇಡಿಕೆ ಏನು?
ಮುನಿರತ್ನ ಪ್ರತಿಭಟನೆ
Follow us on

ಬೆಂಗಳೂರು, (ಅಕ್ಟೋಬರ್ 11): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ(Munirathna) ಅವರು ಇಂದು (ಬುಧವಾರ) ವಿಧಾನಸೌಧ (Vidhana soudha) ಆವರಣದ ಗಾಂಧಿ ಪ್ರತಿಮೆ ಸಮೀಪ ಧರಣಿ ನಡೆಸಿದ್ದಾರೆ. ಆದ್ರೆ, ಮುನಿರತ್ನ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಮುನಿರತ್ನ ಅವರು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ. ಅಷ್ಟಕ್ಕೂ ಮುನಿರತ್ನ ಧರಣಿ ಕುಳಿತಿರುವುದ್ಯಾಕೆ? ಬಿಜೆಪಿ ಶಾಸಕನ ಬೇಡಿಕೆ ಏನು? ಎನ್ನವ ವಿವರ ಇಲ್ಲಿದೆ.

ಮುನಿರತ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದ್ಯಾಕೆ?

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಟಾರ್ಗೆಟ್ ಪಾಲಿಟಿಕ್ಸ್ ವಿರುದ್ಧ ಆರ್.ಆರ್ ನಗರ ಶಾಸಕ ಮುನಿರತ್ನ (Muniratna) ಸಿಡಿದೆದ್ದು, ಬಸವರಾಜ್ ಬೊಮ್ಮಾಯಿ (Basavaraj Bommai) ಸರ್ಕಾರದಲ್ಲಿ ಆರ್​​ಆರ್​ ನಗರಕ್ಕೆ ನೀಡಿದ್ದ ಒಟ್ಟು 126 ಕೋಟಿ ರೂ. ಅನುದಾನವನ್ನು ಇದೀಗ ಕಾಂಗ್ರೆಸ್ ಸರ್ಕಾರ ಬೇರೆ ಕ್ಷೇತ್ರಗಳಿಗೆ ನೀಡಿದೆ. ಸ್ವತಃ ಡಿಕೆ ಶಿವಕುಮಾರ್ ಅವರೇ ಆರ್​ಆರ್​​ ನಗರ ಕ್ಷೇತ್ರದ ಅನುದಾನ ಯಶವಂತಪುರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೀಡಿದ್ದಾರೆ ಎಂದು ಮುನಿರತ್ನ ಅವರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಆ ಅನುದಾನವನ್ನು ಆರ್​ಆರ್​ ಕ್ಷೇತ್ರಕ್ಕೆ ವಾಪಸ್‍ ನೀಡುವಂತೆ ಆಗ್ರಹಿಸಿ ಇಂದು(ಅಕ್ಟೋಬರ್ 11) ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಇದನ್ನೂ ಓದಿ: ಪ್ರತಿಭಟನೆ ನಂತರ ಡಿಸಿಎಂ ಕಾಲು ಹಿಡಿಯುತ್ತೇನೆ: ಬಿಜೆಪಿ ಶಾಸಕ ಮುನಿರತ್ನ

ಆರ್ ಆರ್ ನಗರ ಕ್ಷೇತ್ರದ ಅನುದಾನ ಕಡಿತದ ಕುರಿತು ನಿನ್ನೆ (ಸೆ.11) ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುನಿರತ್ನ, ಬಿಜೆಪಿ‌ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು 126 ಕೋಟಿ ಅನುದಾನ ಕೊಟ್ಟು ಆದೇಶ ಹೊರಡಿಸಿದ್ದರು. ನಿನ್ನೆ ಏಕಾಏಕಿ ಅನುದಾನ ಕಟ್ ಮಾಡಿದ್ದಾರೆ. ನಮ್ಮ‌ ಕ್ಷೇತ್ರದ ಅನುದಾನವನ್ನು ಯಶವಂತಪುರ, ಬ್ಯಾಟರಾಯನಪುರ ಹಾಗೂ ಪುಲಿಕೇಶಿನಗರಕ್ಕೆ ಕೊಟ್ಟಿದ್ದಾರೆ. ಎಂದು ಆರೋಪಿಸಿದ್ದರು.

ಡಿಕೆ ಶಿವಕುಮಾರ್ ಕಾಲು ಹಿಡಿಯುತ್ತೇನೆ ಎಂದ ಮುನಿರತ್ನ

ಅನುದಾನದ ಬಗ್ಗೆ ಮುಖ್ಯಮಂತ್ರಿ ಅವರನ್ನು ಕೇಳುವುದಿಲ್ಲ. ಬೆಂಗಳೂರು ಅಭಿವೃದ್ಧಿ ಸಚಿವರು ಡಿಕೆ ಶಿವಕುಮಾರ್. ಹೀಗಾಗಿ ನನಗೆ ಡಿಸಿಎಂ ಅವರಿಂದಲೇ ಅನುದಾನ ಬೇಕಿರುವುದು. ಬದಲಾವಣೆ ಅನುದಾನ ಕೊಡಿಸಬೇಕಿರುವುದು ಡಿಸಿಎಂ. ನಾನು ಸಿಎಂ ಹತ್ತಿರ ಹೋಗಲ್ಲ. ಡಿಸಿಎಂ ಹತ್ತಿರ ಹೋಗುತ್ತೇನೆ. ಅವರ ಕಾಲನ್ನೇ ನಾನು ಹಿಡಿಯುತ್ತೇನೆ ಎಂದಿದ್ದರು.