ಪ್ರತಿಭಟನೆ ನಂತರ ಡಿಸಿಎಂ ಕಾಲು ಹಿಡಿಯುತ್ತೇನೆ: ಬಿಜೆಪಿ ಶಾಸಕ ಮುನಿರತ್ನ
ಆರ್ಆರ್ ನಗರ ಕ್ಷೇತ್ರಕ್ಕೆ ನೀಡಬೇಕಾದ ಅನುದಾನವನ್ನು ಬೇರೆ ಕ್ಷೇತ್ರಕ್ಕೆ ನೀಡಿದ ಆರೋಪ ಸಂಬಂಧ ಕ್ಷೇತ್ರದ ಬಿಜೆಪಿ ಶಾಸಕ ಎನ್ ಮುನಿರತ್ನ ಅವರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಶ್ಮೀರ ಸಮಸ್ಯೆ ಬಗೆ ಹರಿಯುತ್ತದೆ, ಆದರೆ ನನ್ನ ಕ್ಷೇತ್ರದ ಸಮಸ್ಯೆ ಬಗೆ ಹರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಪ್ರತಿಭಟನೆ ನಂತರ ನನ್ನ ಕ್ಷೇತ್ರದ ಜನರಿಗಾಗಿ ನಾನು ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲು ಹಿಡಿಯಲು ಸಿದ್ಧ ಎಂದಿದ್ದಾರೆ.
ಬೆಂಗಳೂರು, ಅ.10: ನನ್ನ ಕ್ಷೇತ್ರದ ಜನರಿಗಾಗಿ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕಾಲಿಗೆ ಬೀಳಲೂ ಸಿದ್ಧನಿದ್ದೇನೆ. ಪ್ರತಿಭಟನೆ ಮುಗಿದ ಕೂಡಲೇ ಅವರು ಎಲ್ಲಿರುತ್ತಾರೋ ಅಲ್ಲಿಗೆ ಹೋಗಿ ಕಾಲು ಹಿಡ್ಕೊಂಡು ಬಿಡುತ್ತೇನೆ ಎಂದು ಆರ್ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎನ್. ಮುನಿರತ್ನ (N.Munirathna) ಅವರು ಹೇಳಿದ್ದಾರೆ.
ಅನುದಾನದ ಬಗ್ಗೆ ಮುಖ್ಯಮಂತ್ರಿ ಅವರನ್ನು ಕೇಳುವುದಿಲ್ಲ. ಬೆಂಗಳೂರು ಅಭಿವೃದ್ಧಿ ಸಚಿವರು ಡಿಕೆ ಶಿವಕುಮಾರ್. ಹೀಗಾಗಿ ನನಗೆ ಡಿಸಿಎಂ ಅವರಿಂದಲೇ ಅನುದಾನ ಬೇಕಿರುವುದು. ಬದಲಾವಣೆ ಅನುದಾನ ಕೊಡಿಸಬೇಕಿರುವುದು ಡಿಸಿಎಂ. ನಾನು ಸಿಎಂ ಹತ್ತಿರ ಹೋಗಲ್ಲ. ಡಿಸಿಎಂ ಹತ್ತಿರ ಹೋಗುತ್ತೇನೆ. ಅವರ ಕಾಲನ್ನೇ ನಾನು ಹಿಡಿಯುತ್ತೇನೆ ಎಂದರು.
ಸದಾನಂದ ಗೌಡರನ್ನು ಟೀಕಿಸಿದ ಮುನಿರತ್ನ
ವಿಪಕ್ಷ ನಾಯಕನ ಆಯ್ಕೆ ಮಾಡದ ವಿಚಾರವಾಗಿ ಮಾಜಿ ಸಿಎಂ ಸದಾನಂದ ಗೌಡರ ವಿರೋಧ ವಿಚಾರವಾಗಿ ಮಾತನಾಡಿದ ಮುನಿರತ್ನ, ಅವರ ಹೇಳಿಕೆಗೆ ನನ್ನ ವಿರೋಧ ಇದೆ. ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸುವಾಗ ಅವರಿಗೆ ವಿರೋಧ ಇರಲಿಲ್ಲವಾ? ಆಗ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ, 66 ಮಂದಿ ಬಿಜೆಪಿ ಶಾಸಕರು ವಿರೋಧ ಪಕ್ಷದ ನಾಯಕರೇ. ಎಲ್ಲರೂ ವಿಪಕ್ಷ ನಾಯಕರಾಗಿಯೇ ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಹನಿಟ್ರ್ಯಾಪ್ ಹೆಸರಿನಲ್ಲಿ ಮುನಿರತ್ನ ಬ್ಲ್ಯಾಕ್ ಮೇಲ್ ಮಾಡುತ್ತಾರೆ: ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಗಂಭೀರ ಆರೋಪ
ಡಿಕೆ ಶಿವಕುಮಾರ್ ಅವರು ತಿಹಾರ್ ಜೈಲಿಗೆ ಹೋಗುತ್ತಾರೆಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಕುಮಾರಸ್ವಾಮಿ ಅವರು ಮಾಜಿ ಸಿಎಂ, ಮಾಜಿ ಪ್ರಧಾನಿ ಮಗ. ಅವರಿಗೆ ಒಂದಷ್ಟು ವಿಚಾರ ಗೊತ್ತಿರಬೇಕು ಎಂದರು.
ಡಿಕೆ ಸುರೇಶ್ಗೆ ಪತ್ರ ಬರೆದ ಮುನಿರತ್ನ
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕೈಬಿಟ್ಟ ಬಗ್ಗೆ ಮುನಿರತ್ನ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರಿಗೆ ಪತ್ರ ಬರೆದಿದ್ದಾರೆ.
ಮುನಿರತ್ನ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ: ರವಿಕುಮಾರ್
ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಮಂಜೂರಾಗಿದ್ದ ಅನುದಾನವನ್ನು ಬೇರೆ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿದ ವಿಚಾರವಾಗಿ ಮಾತನಾಡಿದ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್, ಮುನಿರತ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಅನುದಾನವನ್ನು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಸರ್ಕಾರ ಹಣ ವರ್ಗಾವಣೆ ಮಾಡಿದೆ. ಕಾಂಗ್ರೆಸ್ ಸರ್ಕಾರ ತಮ್ಮ ಮನೆಯಿಂದ ಅನುದಾನ ಕೊಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಅಲ್ಲದೆ, ಇದು ಎಲ್ಲಾ ಬಿಜೆಪಿಯ ಶಾಸಕರಿಗೆ ಆಗುತ್ತಿರುವ ಅನ್ಯಾಯವಾಗಿದೆ. ಬಿಜೆಪಿ ಶಾಸಕ ಮುನಿರತ್ನ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ. ಅಶ್ವತ್ಥ್ ನಾರಾಯಣ ಸೇರಿ ಇನ್ನೂ ಅನೇಕರು ಬೆಂಬಲ ಕೊಡುತ್ತಾರೆ. ಪಕ್ಷದ ಮುಖಂಡರು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ