ಬೆಂಗಳೂರು, ಜೂನ್ 20: ಸಂವಿಧಾನದ (Constitution) ಕುರಿತಾಗಿ ನೀಡಿರುವ ಹೇಳಿಕೆಗಳಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ (BJP) ಹಿನ್ನೆಡೆ ಆಗಿರುವುದರಿಂದ ಈಗ ಸಂಘ (RSS) ಪರಿವಾರ ಎಚ್ಚೆತ್ತುಕೊಂಡಿದೆ. ಜೂನ್ 25 ರಂದು ತುರ್ತು ಪರಿಸ್ಥಿತಿಯ ವರ್ಷಾಚರಣೆ ಸಂದರ್ಭ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಘ ಪರಿವಾರದ ಕಡೆಯಿಂದ ಸಿದ್ಧತೆ ನಡೆದಿದೆ. ಸಂವಿಧಾನದ ಕುರಿತ ಹೇಳಿಕೆಗಳ ಬಗ್ಗೆ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಬಿಂಬಿಸಿದ ರೀತಿ ಬಿಜೆಪಿಗೆ ಇನ್ನಿಲ್ಲದ ಹೊಡೆತ ಕೊಟ್ಟಿತ್ತು. ಎಸ್ಸಿ, ಎಸ್ಟಿ ಕ್ಷೇತ್ರಗಳು ಬಿಜೆಪಿಯ ಅರಿವಿಗೇ ಇಲ್ಲದಂತೆ ಕೈ ಬಿಟ್ಟು ಹೋಗಿದ್ದವು. ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್ ಸಂವಿಧಾನದ ಬಗ್ಗೆ ವಿಷಯ ಎತ್ತಲೂ ಅವಕಾಶವಿಲ್ಲದಂತಹ ರೀತಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಇದೀಗ ಬಿಜೆಪಿ ಹಾಗೂ ಸಂಘ ಪರಿವಾರ ಹೊರಟಿವೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಆಚರಣೆಯ ದಿನವಾದ ಜೂನ್ 25 ರಂದು ರಾಜ್ಯದಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಘ ಪರಿವಾರ ಮುಂದಾಗಿದೆ.
ಜೂನ್ 25 ರಂದು ರಾಜ್ಯದಲ್ಲಿ ವಿಚಾರ ಸಂಕಿರಣಗಳು, ಸಂವಾದಗಳು, ಭಾಷಣಗಳು, ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದ್ದು, ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನಕ್ಕೆ ಕಾಂಗ್ರೆಸ್ ಯಾವ ರೀತಿ ಅಪಚಾರ ಎಸಗಿತ್ತು ಎಂಬುದನ್ನು ಬಿಂಬಿಸಲು ತುರ್ತು ಪರಿಸ್ಥಿತಿಯ ದಿನದ ಮೂಲಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಕುರಿತಂತೆ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬುಧವಾರ ಪ್ರಮುಖರ ಸಭೆ ಕೂಡಾ ನಡೆದಿದೆ. ಚಿಂತಕ ಚಕ್ರವರ್ತಿ ಸೂಲಿಬೆಲೆ, ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಅರಕಲಗೂಡು ಸೂರ್ಯಪ್ರಕಾಶ್ ಸೇರಿದಂತೆ ಸಂಘ ಪರಿವಾರದ ಹಿನ್ನೆಲೆಯ ಮುಖಂಡರು ಮತ್ತು ಬಿಜೆಪಿ ಶಾಸಕರು ಕೂಡಾ ಈ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ ವರ್ಷ ತುರ್ತು ಪರಿಸ್ಥಿತಿಯ 50 ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.
ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಡಿಕೆ ಶಿವಕುಮಾರ್ ಪಣ: ಚನ್ನಪಟ್ಟಣದಲ್ಲಿ ಸೋಲಿನಲ್ಲೂ ಗೆಲುವು ಹುಡುಕಿದ ಡಿಸಿಎಂ
ಸಂವಿಧಾನದ ವಿಚಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಆಗಿರುವಂತಹ ಹಿನ್ನಡೆಯನ್ನು ಭರ್ತಿ ಮಾಡಿಕೊಳ್ಳಲು ತುರ್ತು ಪರಿಸ್ಥಿತಿಯ ದಿನದ ಕಾರ್ಯಕ್ರಮಗಳ ಮೂಲಕ ಸಿದ್ಧತೆ ಮಾಡಿಕೊಂಡಿರುವ ಬಿಜೆಪಿ, ಸಂವಿಧಾನದ ವಿಚಾರದಲ್ಲಿ ಆಗಿರುವ ನಷ್ಟವನ್ನು ಅದರಿಂದಲೇ ಗಳಿಸಿಕೊಳ್ಳಲು ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ