ಸತೀಶ್ ಜಾರಕಿಹೊಳಿ ಮತ್ತು ದಲಿತ ನಾಯಕರು ದೆಹಲಿಯಲ್ಲಿ; ಮೂರು ಡಿಸಿಎಂ ಸ್ಥಾನಗಳಾಗಬೇಕೆಂದು ಹೈಕಮಾಂಡ್ ಬಳಿ ಮನವಿ?

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Dec 25, 2023 | 10:37 AM

Karnataka Politics: ಸತೀಶ್ ಜಾರಕಿಹೊಳಿ ಹಾಗೂ ಕೆಲ ಕಾಂಗ್ರೆಸ್ ದಲಿತ ನಾಯಕರು ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಈಗಿರುವ ಒಂದು ಡಿಸಿಎಂ ಸ್ಥಾನದ ಜೊತೆ ಇನ್ನೂ ಮೂರು ಡಿಸಿಎಂ ಸ್ಥಾನಗಳನ್ನು ಸೃಷ್ಟಿಸುವಂತೆ ಹೈಕಮಾಂಡ್​ಗೆ ಮನವಿ ಮಾಡುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾದರೆ ಮೂರು ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಬೇಕು ಎಂಬುದು ಜಾರಕಿಹೊಳಿ ಅಂಡ್ ಟೀಮ್​ನ ಒತ್ತಾಯ.

ಸತೀಶ್ ಜಾರಕಿಹೊಳಿ ಮತ್ತು ದಲಿತ ನಾಯಕರು ದೆಹಲಿಯಲ್ಲಿ; ಮೂರು ಡಿಸಿಎಂ ಸ್ಥಾನಗಳಾಗಬೇಕೆಂದು ಹೈಕಮಾಂಡ್ ಬಳಿ ಮನವಿ?
ಸತೀಶ್ ಜಾರಕಿಹೊಳಿ
Follow us on

ನವದೆಹಲಿ, ಡಿಸೆಂಬರ್ 25: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯ ರಾಜಕೀಯದ (Karnataka Politics) ಕಾವೇರಿದೆ. ಆಡಳಿತ ಪಕ್ಷ ಕಾಂಗ್ರೆಸ್​ನೊಳಗೆ ರಾಜಕೀಯ ನಡೆಗಳು ಕುತೂಹಲ ಮೂಡಿಸುತ್ತಿವೆ. ಕಾಂಗ್ರೆಸ್ ಹಿರಿಯ ಮುಖಂಡರಲ್ಲೊಬ್ಬರಾದ ಸತೀಶ್ ಜಾರಕಿಹೊಳಿ (satish Jarkiholi) ಹಾಗೂ ಕೆಲ ದಲಿತ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಡಿಕೆ ಶಿವಕುಮಾರ್ ಅಲ್ಲದೇ ರಾಜ್ಯದಲ್ಲಿ ಇನ್ನೂ ಮೂವರು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವಂತೆ ಪಟ್ಟು ಹಿಡಿದಿರುವ ಸತೀಶ್ ಜಾರಕಿಹೊಳಿ ಇದೇ ವಿಚಾರವಾಗಿ ಹೈಕಮಾಂಡ್ ಭೇಟಿ ಮಾಡಿ ಮನವೊಲಿಸಲು ರಾಷ್ಟ್ರರಾಜಧಾನಿಯಲ್ಲಿ ಇದ್ದಾರೆ ಎನ್ನಲಾಗಿದೆ.

ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಹಾಗೆಯೇ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಲಿಂಗಾಯತ ಸಮುದಾಯದ ವ್ಯಕ್ತಿಯನ್ನು ಡಿಸಿಎಂ ಆಗಿ ಮಾಡಬೇಕು ಎಂಬುದು ಸತೀಶ್ ಜಾರಕಿಹೊಳಿ ಅವರ ಬೇಡಿಕೆ. ಡಿಸಿಎಂ ಸ್ಥಾನಕ್ಕೆ ಅವರೂ ಒಬ್ಬ ಪ್ರಬಲ ಆಕಾಂಕ್ಷಿ. ಜಾರಕಿಹೊಳಿ ಪ್ರಬಲ ನಾಯಕ ಸಮುದಾಯಕ್ಕೆ ಸೇರಿದವರು. ಅವರ ಸಮುದಾಯ ಪರಿಶಿಷ್ಟ ಪಂಗಡ ಅಥವಾ ಎಸ್​ಟಿ ವರ್ಗಕ್ಕೆ ಸೇರುತ್ತದೆ.

ಇದನ್ನೂ ಓದಿ: ಕರ್ನಾಟಕದ ಬಗ್ಗೆ ಒಂದು ದಿನವಾದ್ರು ಪ್ರಲ್ಹಾದ್​​ ಜೋಶಿ ಮಾತನಾಡಿದ್ದಾರಾ? ಬಿಕೆ ಹರಿಪ್ರಸಾದ್ ಪ್ರಶ್ನೆ

ಲೋಕಸಭೆ ಚುನಾವಣೆಯಲ್ಲಿ ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಅವಕಾಶ ಹೆಚ್ಚಿದೆ. ಚುನಾವಣೆಯೊಳಗೆ ಎಸ್​ಸಿ, ಎಸ್​ಟಿ ಮತ್ತು ಲಿಂಗಾಯತರಿಗೆ ಡಿಸಿಎಂ ಸ್ಥಾನ ಕೊಟ್ಟರೆ ಕಾಂಗ್ರೆಸ್​ಗೆ ಲಾಭ ಆಗಲಿದೆ ಎಂಬುದು ಪಿಡಬ್ಲ್ಯುಡಿ ಸಚಿವರೂ ಆದ ಸತೀಶ್ ಜಾರಕಿಹೊಳಿ ಅವರ ವಾದ.

ಡಿಸಿಎಂ ಸ್ಥಾನಗಳಷ್ಟೇ ಅಲ್ಲ, ಎಸ್​ಸಿ ಎಸ್​ಟಿ ಮೀಸಲು ಕ್ಷೇತ್ರಗಳ ಜವಾಬ್ದಾರಿ ತನಗೆ ನೀಡಬೇಕು. ಆ ಕ್ಷೇತ್ರಗಳ ಟಿಕೆಟ್ ಹಂಚಿಕೆ ವೇಳೆ ದಲಿತ ನಾಯಕರೊಂದಿಗೆ ಸಮಾಲೋಚನೆ ನಡೆಸಬೇಕು ಎಂದೂ ಯಮಕನಮರಡಿ ಕ್ಷೇತ್ರದ ಶಾಸಕರಾದ ಅವರು ಕಾಂಗ್ರೆಸ್ ಹೈಕಮಾಂಡ್ ಬಳಿ ಮನವಿ ಮಾಡುತ್ತಿದ್ದಾರೆ.

ಕಳೆದ ಎರಡು ದಿನಗಳಿಂದಲೂ ದೆಹಲಿಯಲ್ಲಿ ಬೀಡುಬಿಟ್ಟಿರುವ ಸತೀಶ್ ಜಾರಕಿಹೊಳಿ, ರಾಷ್ಟ್ರರಾಜಧಾನಿಗೆ ಬರುವ ಮುನ್ನ ಬೆಂಗಳೂರಿನಲ್ಲಿ ದಲಿತ ನಾಯಕರ ಜೊತೆ ಸಭೆ ನಡೆಸಿ ವಿವಿಧ ವಿಚಾರಗಳನ್ನು ಚರ್ಚಿಸಿದ್ದರು. ಆ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಹೈಕಮಾಂಡ್ ಗಮನಕ್ಕೆ ತರುವ ಪ್ರಯತ್ನವನ್ನು ಜಾರಕಿಹೊಳಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯನವರಿಗೆ ಧಮ್​ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡಿಲಿ; ಅನಂತ್ ಕುಮಾರ್ ಹೆಗ್ಡೆ

ಮೂವರು ಡಿಸಿಎಂಗಳು ಸಿದ್ದರಾಮಯ್ಯಗೂ ಓಕೆ?

ಮೂರು ಹೆಚ್ಚುವರಿ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಬೇಕೆನ್ನುವ ಒತ್ತಾಯ ಕೆಲ ತಿಂಗಳಿಂದಲೂ ಪ್ರಬಲವಾಗಿ ಕೇಳಿಬರುತ್ತಿದೆ. ಸಹಕಾರಿ ಖಾತೆ ಸಚಿವ ಕೆಎನ್ ರಾಜಣ್ಣ ಸೇರಿದಂತೆ ಹಲವರು ಕೂಡ ಮೂರು ಉಪ ಮುಖ್ಯಮಂತ್ರಿ ಸ್ಥಾನಗಳು ಆಗಬೇಕೆಂದು ಅಭಿಪ್ರಾಯ ಪಡುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೈಕಮಾಂಡ್ ಒಪ್ಪಿದರೆ ತನ್ನದೇನೂ ಅಭ್ಯಂತರ ಇಲ್ಲ ಎಂದು ಹಲವು ಬಾರಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ