ಕರ್ನಾಟಕದ ಬಗ್ಗೆ ಒಂದು ದಿನವಾದ್ರು ಪ್ರಲ್ಹಾದ್ ಜೋಶಿ ಮಾತನಾಡಿದ್ದಾರಾ? ಬಿಕೆ ಹರಿಪ್ರಸಾದ್ ಪ್ರಶ್ನೆ
ಸಚಿವ ಪ್ರಲ್ಹಾದ್ ಜೋಶಿ ಏನು ಹೇಳಿದರು ತೊಂದರೆ ಇಲ್ಲಾ. ಅವರು ಏನಾದರೂ ಹೇಳಿಕೆ ನೀಡಿ ಅವರಿಗೆ ಮುಂದಿನ ಬಾರಿ ಟಿಕೆಟ್ ಸಿಗುತ್ತೆ ಅಂತಾ ಇದ್ದರೆ ಸಂತೋಷ ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಹಾವೇರಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಗ್ಗೆ ಒಂದು ದಿನವಾದರೂ ಪ್ರಲ್ಹಾದ್ ಜೋಶಿ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಹಾವೇರಿ, ಡಿಸೆಂಬರ್ 24: ಕರ್ನಾಟಕದ ಬಗ್ಗೆ ಒಂದು ದಿನವಾದರೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದ್ದಾರಾ? ಚುನಾವಣೆ ಸಂದರ್ಭದಲ್ಲಿ ಮಹದಾಯಿ ಬಗ್ಗೆ ಬಹಳ ಕೂಗಾಡಿದರು. ಕೊನೆಗೆ ಏನಾದರೂ ನೀರು ಬಿಟ್ಟಿದ್ದಾರಾ ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ (bk hariprasad) ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಹೇಳಿಕೆ ನೀಡಿದರೆ ಮುಂದಿನ ಬಾರಿ ಟಿಕೆಟ್ ಸಿಕ್ಕರೇ ಸಂತೋಷ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಬಹಳಷ್ಟು ನಾಯಕರು ಈಗಾಗಲೇ ಮಾರ್ಗದರ್ಶನ ಮಂಡಳಿಗೆ ಹೋಗುತ್ತಿದ್ದಾರೆ. ಉದಾಸಿ, ನಾರಾಯಣಸ್ವಾಮಿ, ಡಿವಿಎಸ್ ಚುನಾವಣೆ ನಿಲ್ಲಲ್ಲ ಅಂದಿದ್ದಾರೆ. ಕಳೆದ ಬಾರಿ ಮುಖ್ಯಮಂತ್ರಿ ಆಗಲು ಸಚಿವ ಪ್ರಲ್ಹಾದ್ ಜೋಶಿ ಶತಪ್ರಯತ್ನ ಮಾಡಿದ್ದರು. ಬಿಜೆಪಿ ಹೀನಾಯ ಸ್ಥಿತಿಗೆ ತರಲು ಕಾರಣ ಯಾರೆಂದು ಅವರನ್ನೇ ಕೇಳಿ. ಯಾವುದೋ ಸಂತೋಷದ ಗುಂಪಿನ ಜೊತೆಗೆ ಸೇರಿಕೊಂಡಿದ್ದರು. ಅದರಿಂದಲೇ ರಾಜ್ಯದಲ್ಲಿ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಶಾಸಕ ಯತ್ನಾಳ್ ಹೇಳಿಕೆಗೆ ಮೊದಲು ಉತ್ತರ ಕೊಡಲಿ: ವಿಜಯೇಂದ್ರಗೆ ತಿರುಗೇಟು
ವಿಜಯೇಂದ್ರ ಮೊದಲು ಶಾಸಕ ಯತ್ನಾಳ್ ಹೇಳಿಕೆಗೆ ಉತ್ತರ ಕೊಡಲಿ. ಆಗ ಜನಸಾಮಾನ್ಯರು, ಬಿಜೆಪಿ ಕಾರ್ಯಕರ್ತರು ನೆಮ್ಮದಿಯಿಂದ ಇರ್ತಾರೆ ಎಂದು ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ನಮಗೆ ಟಿಪ್ಪು ಸುಲ್ತಾನ್ ಪರ ಎನ್ನುವವರು ಬ್ರಿಟಿಷರ ಬೂಟು ನೆಕ್ಕೋರು: ಬಿಕೆ ಹರಿಪ್ರಸಾದ್
ಶಾಸಕ ಯತ್ನಾಳ್ ಹೇಳಿಕೆಗೆ ಒಂದೇ ಒಂದು ಹೇಳಿಕೆ ಕೊಡಲು ಆಗಲಿಲ್ಲ. ಇವರೇನು ನನ್ನ ಹೇಳಿಕೆಗೆ ಉತ್ತರ ನೀಡ್ತಾರೆ. ನಮ್ಮದು ಸೈದ್ಧಾಂತಿಕ ಹೋರಾಟ, ಈ ಬಗ್ಗೆ ಧೈರ್ಯದಿಂದ ಉತ್ತರಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ಅವರು ಮೊದಲು ಸ್ವಾತಂತ್ರ್ಯ ಹೋರಾಟಗಾರ ಇತಿಹಾಸ ತಿಳಿದುಕೊಳ್ಳಲಿ
ಜನಸಂಘದವರು ಸಹ ಸ್ವಾತಂತ್ರ್ಯ ಹೋರಾಟದಲ್ಲಿದ್ದರು ಎನ್. ರವಿಕುಮಾರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜನಸಂಘ ಸ್ಥಾಪನೆಯಾಗಿದ್ದೆ 1951ರಲ್ಲಿ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನಸಂಘ ಇರಲಿಲ್ಲಾ. ಬಿಜೆಪಿ ಅವರು ಮೊದಲು ಸ್ವಾತಂತ್ರ್ಯ ಹೋರಾಟಗಾರದ ಬಗ್ಗೆ ಇತಿಹಾಸ ತಿಳಿದುಕೊಳ್ಳಲಿ. ವಾಟ್ಸಪ್ ಯುನಿವರ್ಸಿಟಿ ಕಥೆಯನ್ನ ಜನಸಾಮಾನ್ಯರ ಮುಂದೆ ಹೇಳುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ವರದಿ: ರವಿ ಹೂಗಾರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.