ಬೆಂಗಳೂರು/ತುಮಕೂರು, (ಡಿಸೆಂಬರ್ 06): ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ಮೇಲೆ ಮುನಿಸಿಕೊಂಡಿರುವ ವಿ ಸೋಮಣ್ಣ(V Somanna) ಡಿಸೆಂಬರ್ 6 ನಂತರ ತಮ್ಮ ನಡೆ ಘೋಷಿಸುವುದಾಗಿ ಹೇಳಿದ್ದರು. ಇದೀಗ ಆ ದಿನಗಳು ಬಂದಿದ್ದು, ಇಂದು ಸಿದ್ಧಗಂಗಾ ಮಠದಲ್ಲಿ(siddaganga matha) ತಾವು ನಿರ್ಮಿಸಿರುವ ಗುರುಭವನವನ್ನು ಇಂದು (ಡಿಸೆಂಬರ್ 06) ಉದ್ಘಾಟನೆ ಮಾಡಲಿದ್ದಾರೆ. ಸಿದ್ಧಗಂಗಾ ಮಟದಲ್ಲಿ ನಡೆಯಲಿರುವ ಈ ಉದ್ಘಾಟನಾ ಕಾರ್ಯಕ್ರಮದಲ್ಲೇ ಸೋಮಣ್ಣ ಅವರು ತಮ್ಮ ಮುಂದಿನ ರಾಜಕೀಯ ನಡೆ ಘೋಷಣೆ ಮಾಡಲಿದ್ದಾರಾ ಎನ್ನುವ ಕುತೂಹಲ ಮೂಡಿಸಿದೆ.
ತುಮಕೂರಿನ ಸಿದ್ಧಗಂಗಾ ಮಠದ ಹಳೇ ಮಠದ ಆವರಣದಲ್ಲಿ ಸೋಮಣ್ಣ ಅವರು ತಮ್ಮ ಸ್ವಂತ ಖರ್ಚಿನಲ್ಲೇ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಗುರುಭವನ ನಿರ್ಮಿಸಿದ್ದು, ಇಂದು ಬೆಳಗ್ಗೆ 10.30ಕ್ಕೆ ಅವರೇ ಲೋಕಾರ್ಪಣೆ ಮಾಡಲಿದ್ದಾರೆ. ಲಿಂಗೈಕ್ಯ ಶಿವಕುಮಾರಸ್ವಾಮೀಜಿ ಗದ್ದುಗೆ ಪಕ್ಕದಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ದೇಗುಲ ಮಠದ ಮುಮ್ಮಡಿ ನಿರ್ವಾಣ ಶ್ರೀಗಳು, ಗೃಹ ಸಚಿವ ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, MLC ರಾಜೇಂದ್ರ ಸೇರಿದಂತೆ ಇತರೆ ನಾಯಕರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಡಿ. 6ರ ನಂತರ ನನ್ನ ಮನಸ್ಸಿನ ಭಾವನೆ ಹೇಳುತ್ತೇನೆ: ಸಂಚಲನ ಮೂಡಿಸಿದ ಸೋಮಣ್ಣ ನಡೆ
ಇಂದು ಕಾರ್ಯಕ್ರಮದ ನಂತರ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸೋಮಣ್ಣ ಹೇಳಿದ್ದು, ಗುರುಭವನ ಉದ್ಘಾಟನೆ ಬಳಿಕ ದೆಹಲಿಗೆ ತೆರಳಲಿದ್ದಾರೆ. ಕೇವಲ ಸೋಮಣ್ಣ ಮಾತ್ರವಲ್ಲದೇ ಅವರ ಜೊತೆಗೆ ಇನ್ನುಳಿದ ಅಸಮಾಧಾನಿತ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಅರವಿಂದ್ ಲಿಂಬಾವಳಿ, ರಮೇಶ್ ಜಾರಕಿಹೊಳಿ ಸಹ ದೆಹಲಿಗೆ ಪಯಾಣ ಬೆಳೆಸಲಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ನಡೆ ರಾಜ್ಯ ರಾಜಕಾರನದಲ್ಲಿ ಸಂಚಲನ ಮೂಡಿಸಿದೆ.
ಇನ್ನು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಸೋಮಣ್ಣ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸ್ವತಃ ತಾವೇ ನಿರ್ಮಿಸಿರುವ ಗುರುಭವನ ಉದ್ಘಾಟನೆಗೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದಾರೆ. ಅಲ್ಲದೇ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ವಿ.ಸೋಮಣ್ಣ ತುಮಕೂರು ಮೇಲೆ ಕಣ್ಣಿಟ್ಟಿರುವುದು ಇದೇ ಮೊದಲಲ್ಲ. ವಿಧಾನಸಭೆ ಚುನಾವಣೆಗೆ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಪುತ್ರ ಅರುಣ್ ಸೋಮಣ್ಣ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆಯೂ ಗಂಭೀರ ಚರ್ಚೆ ನಡೆದಿತ್ತು. ಆದರೆ ಅದು ಫಲಪ್ರದವಾಗಿರಲಿಲ್ಲ. ಈಗ ಸ್ವತಃ ಸೋಮಣ್ಣ ಕಾಂಗ್ರೆಸ್ ಮೂಲಕ ಜಿಲ್ಲೆ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ವಿ.ಸೋಮಣ್ಣ ತುಮಕೂರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗೆ ಪೂರಕ ಸನ್ನಿವೇಶ ಸೃಷ್ಟಿಯಾಗುತ್ತಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ