ದೆಹಲಿ: ಬಿಜೆಪಿಯಿಂದ (BJP) ಮೈತ್ರಿ ಮುರಿದುಕೊಂಡ 21 ತಿಂಗಳ ಬಳಿಕ ಶಿರೋಮಣಿ ಅಕಾಲಿದಳ (Shiromani Akali Dal) ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು(Droupadi Murmu) ಅವರಿಗೆ ಬೆಂಬಲ ಘೋಷಿಸಿದೆ. ಕೃಷಿ ಕಾನೂನು, ಬಂಧಿತ ಸಿಖ್ಖರನ್ನು ಬಿಡುಗಡೆ ಮಾಡುವ ವಿಷಯ ಸೇರಿದಂತೆ ಇನ್ನೂ ಕೆಲವು ವಿಷಯದಲ್ಲಿ ಬಿಜೆಪಿ ಜತೆ ಭಿನ್ನಾಭಿಪ್ರಾಯಗಳಿದ್ದರೂ ನಾವು ಅವರ ಅಭ್ಯರ್ಥಿಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಪಕ್ಷದ ಅಧ್ಯಕ್ಷ ಸುಖ್ಬೀರ್ ಬಾದಲ್ ಹೇಳಿದ್ದಾರೆ. ಚಂಡೀಗಢದಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗೆ ನಾವು ಯಾವತ್ತೂ ಬೆಂಬಲ ನೀಡಲಾರೆವು. ಯಾಕೆಂದರೆ ಕಾಂಗ್ರೆಸ್ ಸಾವಿರಾರು ಸಿಖ್ಖರ ಹತ್ಯೆ ಮಾಡಿದೆ. ಅಕಾಲಿದಳ ಸದಾ ಸಮಾಜದಲ್ಲಿ ಹಿಂದಿಳಿದ ವಿಭಾಗದ ಜನರ ಪರವಾಗಿ ನಿಂತಿದೆ. ಮುರ್ಮು ಅವರು ಕೂಡಾ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಬಾದಲ್ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗಿನ ಸಂವಾದದ ನಂತರ ಜೆಡಿಎಸ್ ನಾಯಕ ಎಚ್‌ಡಿ ದೇವೇಗೌಡ (HD Deve Gowda) ತಮ್ಮ ಪಕ್ಷಗಳು ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಎನ್ಐ ಟ್ವೀಟ್ ಮಾಡಿದೆ.
ಬಿಜೆಪಿ ಜತೆಗಿನ ಭಿನ್ನಾಭಿಪ್ರಾಯಗಳನ್ನು ಪಟ್ಟಿ ಮಾಡಿದ ಬಾದಲ್, ಬಡತನದಿಂದ ಬಂದ ಮಹಿಳೆಯೊಬ್ಬರಿಗೆ ದೇಶದ ರಾಷ್ಟ್ರಪತಿಯಾಗುವ ಅವಕಾಶ ಸಿಕ್ಕಿದೆ . ಹಾಗಾಗಿ ನಾವು ಎಲ್ಲ ಭಿನ್ನಾಭಿಪ್ರಾಯಗಳನ್ನು ಸದ್ಯ ಪಕ್ಕಕ್ಕಿರಿಸಿದ್ದೇವೆ ಎಂದು ಹೇಳಿದ್ದಾರೆ.
ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಹೇಳಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ನಮಗೆ ಕರೆ ಮಾಡಿದ್ದರು. ಮೇಡಂ ದ್ರೌಪದಿ ಮುರ್ಮು ಕೂಡಾ ಕರೆ ಮಾಡಿ ಬೆಂಬಲ ಕೇಳಿದ್ರು. ಅವರ ಮನವಿ ಮೇರಿಗೆ ಅವರನ್ನು ಬೆಂಬಲಿಸಲು ನಾವು ತೀರ್ಮಾನಿಸಿದ್ದೇವೆ ಎಂದು ಬಾದಲ್ ಹೇಳಿದ್ದಾರೆ.
We have decided to support NDA’s presidential candidate Droupadi Murmu. We will never go with Congress because of the atrocities they have committed on the Sikh community: Shiromani Akali Dal (SAD) chief Sukhbir Singh Badal in Chandigarh pic.twitter.com/x2u3adoo80
— ANI (@ANI) July 1, 2022
ಜಾರ್ಖಂಡ್ ನ ಮಾಜಿ ರಾಜ್ಯಪಾಲರಾಗಿದ್ದ ಮುರ್ಮು ಒಡಿಶಾ ನಿವಾಸಿ.ಒಂದು ವೇಳೆ 64ರ ಹರೆಯದ ಮುರ್ಮು ಅವರು ಚುನಾವಣೆಯಲ್ಲಿ ಗೆದ್ದರೆ ದೇಶದ ರಾಷ್ಟ್ರಪತಿ ಹುದ್ದೆಯನ್ನಲಂಕರಿಸುವ ಮೊದಲ ಬುಡಕಟ್ಟು ಜನಾಂಗದ ಮಹಿಳೆಯಾಗಲಿದ್ದಾರೆ ಮುರ್ಮು.
ಆಡಳಿತಾರೂಢ ಪಕ್ಷವು ಸುಮಾರು 49 ಪ್ರತಿಶತದಷ್ಟು ಎಲೆಕ್ಟ್ರಾಲ್ ಕಾಲೇಜ್ ಹೊಂದಿದೆ. ರಾಷ್ಟ್ರಪತಿಯನ್ನು ಆಯ್ಕೆ ಮಾಡಲು 50 ಪ್ರತಿಶತದ ಗಡಿಯನ್ನು ದಾಟಬೇಕಾಗುತ್ತದೆ. ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಒತ್ತಾಯದ ಮೇರೆಗೆ ಹಲವು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ರಾಷ್ಟ್ರಪತಿ ಸ್ಥಾನಕ್ಕೆ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ.
Published On - 5:45 pm, Fri, 1 July 22