ಹಾಸನ: ಜೆಡಿಎಸ್ (JD(S)) ನಾಯಕತ್ವದಲ್ಲಿ ಇನ್ನೂ ನಾನು ಮುಂದುವರಿಯುವುದು ಕಷ್ಟ. ಎರಡು ದಿನಗಳಲ್ಲಿ ಕಾರ್ಯಕರ್ತರ ಸಭೆ ಕರೆದು ತೀರ್ಮಾನಿಸುತ್ತೇನೆ. ನನ್ನ ಕಾರ್ಯಕರ್ತರ ತೀರ್ಮಾನವೇ ಅಂತಿಮ ಎಂದು JDS ಶಾಸಕ ಶಿವಲಿಂಗೇಗೌಡ (ShivalingeGowda) ಹೇಳಿದರು. ಜಿಲ್ಲೆಯ ಅರಸೀಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅರಸೀಕೆರೆಗೆ ಬಾಣಾವರ್ ಅಶೋಕ್ ಅಭ್ಯರ್ಥಿ ಅಂತಾ 6 ತಿಂಗಳ ಹಿಂದೆ ಹೇಳಿದ್ದಾರೆ. ಕಾರ್ಯಕರ್ತರಿಗೆ ಹಣ ಹಂಚಿ ಇಂದು ಸಮಾವೇಶಕ್ಕೆ ಕರೆ ತಂದಿದ್ದಾರೆ. ಹೆಚ್.ಡಿ.ದೇವೇಗೌಡರ ಆರೋಗ್ಯ ವಿಚಾರಿಸಲು 2 ಬಾರಿ ಹೋಗಿದ್ದೇನೆ ಎಂದು ಹೇಳಿದರು. ಇನ್ನು ಶಿವಲಿಂಗೇಗೌಡ 100% ಕಾಂಗ್ರೆಸ್ಗೆ ಬರ್ತಾರೆಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಅರಸೀಕೆರೆ ಜೆಡಿಎಸ್ ಸಮಾವೇಶಕ್ಕೆ ನನಗೆ ಆಹ್ವಾನ ನೀಡಿಲ್ಲ. ನಾನು JDS ಶಾಸಕ, ನನ್ನ ಗಮನಕ್ಕೆ ತರದೇ ಸಮಾವೇಶ ಆಯೋಜನೆ ಮಾಡಲಾಗಿದೆ. ತಿಂಗಳ ಹಿಂದೆಯೇ ಬೇರೆ ಅಭ್ಯರ್ಥಿಯನ್ನು ವರಿಷ್ಠರು ಗುರುತಿಸಿದ್ದಾರೆ. ಬ್ಯಾನರ್ನಲ್ಲಿ ನಾಮಕಾವಸ್ತೆಗೆ ನನ್ನ ಹೆಸರು ಹಾಕಿದ್ದಾರೆ ಅಷ್ಟೇ. ನನ್ನನ್ನು ಕೇಳದೆ ಕಾಂಗ್ರೆಸ್ನಿಂದ ಬಂದವರನ್ನು ಸೇರಿಸಿಕೊಂಡಿದ್ದಾರೆ. ಈಗಾಗಲೇ ಒಬ್ಬ ವ್ಯಕ್ತಿ ಟಿಕೆಟ್ ಘೋಷಣೆಯಾಗಿದೆ ಅಂತಾ ಹೇಳ್ತಿದ್ದಾನೆ. ನನ್ನ ಕ್ಷೇತ್ರದ ಜನರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಸಿದ್ಧ. ಇಂದು ಅರಸೀಕೆರೆ ಕ್ಷೇತ್ರದ JDS ಅಭ್ಯರ್ಥಿ ಘೋಷಿಸಲಿದ್ದಾರೆ ಎಂದು ಟಿವಿ9ಗೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಇದನ್ನೂ ಓದಿ: ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಮುಗಿಸಲು ಯತ್ನ: ಹಾಲಿ ಶಾಸಕ ಶಿವಲಿಂಗೇಗೌಡ ವಿರುದ್ಧ ಸೆಡ್ಡು ಹೊಡೆದ ಕುಮಾರಸ್ವಾಮಿ
ಅರಸೀಕೆರೆ ಜೆಡಿಎಸ್ ಅಭ್ಯರ್ಥಿಯನ್ನಾಗಿ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವರ ಅಶೋಕ್ ಹೆಸರನ್ನು ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಕಾಂಗ್ರೆಸ್ ಸೇರಲು ಶಾಸಕ ಶಿವಲಿಂಗೇಗೌಡ ಸಜ್ಜಾಗಿದ್ದು, ಬಾಣಾವರ ಅಶೋಕ್ಗೆ ಟಿಕೆಟ್ ನೀಡುವ ಮೂಲಕ ಶಿವಲಿಂಗೇಗೌಡ ವಿರುದ್ಧ ಹೆಚ್ಡಿಕೆ ಸೆಡ್ಡು ಹೊಡೆದಿದ್ದಾರೆ. ಪರೋಕ್ಷವಾಗಿ ಅಶೋಕ್ ಅರಸೀಕೆರೆ ಅಭ್ಯರ್ಥಿ ಎಂದು ಹೆಚ್ಡಿಕೆ ಘೋಷಣೆ ಮಾಡಿದ್ದು, ಇದೀಗ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರ್ತಾರಾ? ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರಾ? ಎನ್ನುವುದೇ ಕಾದುನೋಡಬೇಕಿದೆ. ಮೂಲಗಳ ಪ್ರಕಾರ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.
ಅರಸೀಕೆರೆ ಕ್ಷೇತ್ರದ ಶಾಸಕ K.M.ಶಿವಲಿಂಗೇಗೌಡಗೆ ನಿಮ್ಮ ಮುಂದಿನ ನಿರ್ಧಾರ ತಿಳಿಸಿ ಎಂದು ರೇವಣ್ಣ ಅವಕಾಶ ನೀಡಿದ್ದರು. ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ, ಯೋಜನೆಗಳನ್ನು ನೀಡಿದ್ದೆವು. JDSನಿಂದ ಗೆದ್ದು ಶಿವಲಿಂಗೇಗೌಡ ನಮ್ಮ ವಿರುದ್ಧವೇ ಹೇಳಿಕೆ ನೀಡ್ತಿದ್ದಾರೆ. ಹೆಚ್ಡಿಡಿ, ಹೆಚ್ಡಿಕೆ ಮುಖ ನೋಡಿ ವೋಟ್ ಹಾಕ್ತಾರಾ ಎನ್ನುತ್ತಿದ್ದಾರೆ ಎಂದು K.M.ಶಿವಲಿಂಗೇಗೌಡ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.