ನವದೆಹಲಿ, ಡಿಸೆಂಬರ್ 23: ಕರ್ನಾಟಕ ಕಾಂಗ್ರೆಸ್ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ (Hijab Row) ಆದೇಶವನ್ನು ಹಿಂಪಡೆಯವುದಾಗಿ ಘೋಷಣೆ ಮಾಡಿರುವ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ (Giriraj Singh) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಉದ್ದೇಶ ಕೇವಲ ಶಿಕ್ಷಣ ಸಂಸ್ಥೆಗಳಲ್ಲಿನ ಹಿಜಾಬ್ ನಿಷೇಧ ವಾಪಸ್ ಪಡೆಯುವುದಲ್ಲ. ಬದಲಿಗೆ ಷರಿಯಾ ಕಾನೂನನ್ನು ಜಾರಿಗೆ ತರುವುದಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಷರಿಯಾ ಕಾನೂನು ಜಾರಿಯಾಗಲಿದೆ ಎಂದು ಅವರು ಟೀಕಿಸಿದ್ದಾರೆ.
‘ಇದು ಕೇವಲ ಹಿಜಾಬ್ ಮೇಲಿನ ನಿಷೇಧವನ್ನು ತೆಗೆದುಹಾಕುವುದಲ್ಲ. ರಾಜ್ಯದಲ್ಲಿ ಷರಿಯಾ ಕಾನೂನನ್ನು ಸ್ಥಾಪಿಸುವ ಸಂಚು ಈ ನಿರ್ಧಾರದ ಹಿಂದಿದೆ. ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಸರ್ಕಾರ ರಚಿಸಿದರೆ, ನಂತರ ಇಸ್ಲಾಮಿಕ್ ಷರಿಯಾ ಕಾನೂನು ಜಾರಿಗೆ ಬರಲಿದೆ’ ಎಂದು ಗಿರಿರಾಜ್ ಸಿಂಗ್ ‘ಎಎನ್ಐ’ ಸುದ್ದಿಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.
#WATCH | On no hijab ban in Karnataka announced by CM Siddaramaiah, Union minister Giriraj Singh says,”…This is not merely lifting of the ban on hijab but the establishment of Sharia law in the state. If Rahul Gandhi, Congress and INDI alliance form govt in the country, then… pic.twitter.com/jdCyI0WB5Y
— ANI (@ANI) December 23, 2023
ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಮುಸ್ಲಿಂ ಸಮುದಾಯವನ್ನು ಮೆಚ್ಚಿಸಲು ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ, ಇದನ್ನು ಕೂಡಲೇ ಹಿಂಪಡೆಯಬೇಕು. ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸಾರ್ವಜನಿಕರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಟಿಪ್ಪುವಿನ ಅವತಾರವೇ ಸಿದ್ದರಾಮಯ್ಯ: ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಸಿದ್ದರಾಮಯ್ಯ ಅವರ ನಿರ್ಧಾರವನ್ನು ಖಂಡಿಸಿದ್ದಾರೆ. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಸಿದ್ದರಾಮಯ್ಯ ಅವರನ್ನು ಎರಡನೇ ಟಿಪ್ಪು ಸುಲ್ತಾನ್ ಎಂದು ಟೀಕಿಸಿದ್ದು, ಟಿಪ್ಪುವಿನ ಅವತಾರವೇ ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ