ಮಂಡ್ಯ: ನನ್ನ ಪ್ರಕಾರ ಅವಧಿಗೂ ಮುನ್ನ ಚುನಾವಣೆ ಬರಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಸೇರಿ ಹಲವರು ಹೇಳಿದ್ದಾರೆ. ಅವಧಿಗೂ ಮುನ್ನ ಚುನಾವಣೆ ಬಂದರೆ ನಾವು ಸಿದ್ಧರಿದ್ದೇವೆ. ಜನರು ನಮ್ಮ ಪರವಾಗಿದ್ದಾರೆ ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಎಷ್ಟು ಜನ ಬರುತ್ತಾರೆ ಕಾದುನೋಡಿ. ಕಾಂಗ್ರೆಸ್ ತೊರೆದು ಯಾರೂ ಬಿಜೆಪಿ ಸೇರಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಜಿ.ಟಿ.ದೇವೆಗೌಡ ನನ್ನ ಜತೆ ಮಾತಾಡಿದ್ದಾರೆ. ಅವರು ಮತ್ತು ಅವರ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ. ನಾನು ಇನ್ನೂ ಹೈಕಮಾಂಡ್ ಜತೆ ಈ ವಿಚಾರ ಮಾತನಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಪಕ್ಷವನ್ನು ತೊರೆದ ವಿಚಾರವಾಗಿ ಮಾತನಾಡಿದ ಅವರು ಪಕ್ಷವನ್ನು ಬಿಡ್ತಾ ಇರೋದ್ರಿಂದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಿ.ಎಂ. ಇಬ್ರಾಹಿಂಗೆ ಎಲ್ಲವನ್ನೂ ಕೊಟ್ಟಿದೆ. ಮನುಷ್ಯನಿಗೆ ಆಸೆ ಇರಬೇಕು ದುರಾಸೆ ಇರಬಾರದು. ಹಾಲಿ ಶಾಸಕ ಸಂಗಮೇಶ್‌ಗೆ ಟಿಕೆಟ್ ತಪ್ಪಿಸಿ ಕೊಟ್ಟಿದ್ದೆವು. ಭದ್ರಾವತಿಯಲ್ಲಿ ಸಿ.ಎಂ. ಇಬ್ರಾಹಿಂಗೆ ಟಿಕೆಟ್ ಕೊಟ್ಟಿದ್ದೆವು. ಅಲ್ಲಿಯೂ ಆತ ಸೋತ. ಅದಾದ ಮೇಲೆ ಸಿ.ಎಂ. ಇಬ್ರಾಹಿಂರನ್ನ ಎಂಎಲ್‌ಸಿ ಮಾಡಿದ್ವಿ. ಆದ್ರೂ ಸಹ ಪಕ್ಷ ಬಿಟ್ಟೋಗಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ, ಜೆಡಿಎಸ್ ಮಧ್ಯೆ ಹೊಂದಾಣಿಕೆ ರಾಜಕಾರಣ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿಯನ್ನಾದ್ರೂ ಮಾಡಿಕೊಳ್ಳಲಿ. ಹೊಂದಾಣಿಕೆ, ಮ್ಯಾಚ್ ಫಿಕ್ಸಿಂಗ್ ಏನಾದ್ರೂ ಮಾಡಿಕೊಳ್ಳಲಿ. ನಾವು ತಲೆಕೆಡಿಸಿಕೊಳ್ಳಲ್ಲ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ. ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲು ಹೇಳುತ್ತಿದ್ದಾರೆ. ಆದ್ರೆ ನಾನು ಎಲ್ಲಿ ನಿಲ್ಲಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಈ ಬಗ್ಗೆ ಯೋಚನೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಜಿಟಿಡಿಗಾಗಿ ಕ್ಷೇತ್ರ ತ್ಯಾಗ ಮಾಡಲು ಮುಂದಾದ್ರಾ ಸಿದ್ದರಾಮಯ್ಯ? ಎಂಬ ಪ್ರಶ್ನೆ ಕೇಳಿಬಂದಿದೆ. ಕಾಂಗ್ರೆಸ್ ಸೇರುವುದಾಗಿ ಜಿ.ಟಿ.ದೇವೇಗೌಡ ಹೇಳಿಕೊಂಡಿದ್ದಾರೆ. ಹೀಗಾಗಿ ಹಳೇ ಸ್ನೇಹಿತನಿಗಾಗಿ ಕ್ಷೇತ್ರ ಬಿಡಲು ಸಿದ್ದರಾಮಯ್ಯ ಮುಂದಾದ್ರಾ ಎಂಬ ಪ್ರಶ್ನೆ ಕೇಳಿಬಂದಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸ್ತೇನೆ ಎಂದು ತೀರ್ಮಾನಿಸಿಲ್ಲ ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಬ್ರಿಟೀಷರಿಗಿಂತ ಕೆಟ್ಟ ಕೆಲಸ ಮಾಡಿದವ್ರು ಕಾಂಗ್ರೆಸ್ನವರು: ಕಾಂಗ್ರೆಸ್ ವಿರುದ್ಧ ಗೋವಿಂದ ಕಾರಜೋಳ ಭಾರೀ ಟೀಕೆ
ಇದನ್ನೂ ಓದಿ: ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಗೆ ಮಾಡಿಸಿದ ಕಾರ್ಯಕರ್ತರಿಗೆ ಗಿಫ್ಟ್; ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಂಪರ್ ಆಫರ್!