ಸಾರಿಗೆ ಸಚಿವ ಶ್ರೀರಾಮುಲು ಒಬ್ಬ ಪೆದ್ದ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

| Updated By: ganapathi bhat

Updated on: Sep 26, 2021 | 3:17 PM

ಸುಳ್ಳು ಹೇಳುವುದೇ ಬಿಜೆಪಿಯ ಕೆಲಸ. ಹಿಟ್ಲರ್ ಸರ್ಕಾರ ಇದು, ಹಿಟ್ಲರ್ ರೀತಿ ಸುಳ್ಳು ಹೇಳ್ತಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಾರಿಗೆ ಸಚಿವ ಶ್ರೀರಾಮುಲು ಒಬ್ಬ ಪೆದ್ದ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ, ಶ್ರೀರಾಮುಲು
Follow us on

ಬೆಂಗಳೂರು: ಸಾರಿಗೆ ಸಚಿವ ಶ್ರೀರಾಮುಲು ಒಬ್ಬ ಪೆದ್ದ. ಕೊವಿಡ್‌ನಿಂದ ಮೃತರ ಕುಟುಂಬಕ್ಕೆ ಹಣ ಕೊಟ್ಟಿದ್ದೇವೆ ಎಂದ. ಎಲ್ಲಪ್ಪಾ ದಾಖಲೆ ತೋರಿಸಿ ಅಂದ್ರೆ ತಬ್ಬಿಬ್ಬು ಆಗಿಬಿಟ್ಟ. ಯಾರಿಗೂ ಹಣ ಕೊಟ್ಟಿಲ್ಲ ಎಂದು ಬಿ.ಎಸ್‌. ಯಡಿಯೂರಪ್ಪ ಸತ್ಯ ಹೇಳಿದ್ರು. ಸುಳ್ಳು ಹೇಳುವುದೇ ಬಿಜೆಪಿಯ ಕೆಲಸ. ಹಿಟ್ಲರ್ ಸರ್ಕಾರ ಇದು, ಹಿಟ್ಲರ್ ರೀತಿ ಸುಳ್ಳು ಹೇಳ್ತಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಆರ್​ಎಸ್​ಎಸ್​ನವ್ರು ಇದೀಗ ಚಡ್ಡಿ ಬಿಟ್ಟು ಪ್ಯಾಂಟ್ ಹಾಕಿದ್ದಾರೆ. ಆರ್​ಎಸ್​ಎಸ್​ನಲ್ಲಿ ಯಾರು ದೇಶ ಭಕ್ತರು ಇಲ್ಲ. ಆರ್​ಎಸ್​ಎಸ್​​ನಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿ, ಆರ್​ಎಸ್​ಎಸ್​ನವ್ರು ದೇಶಕ್ಕಾಗಿ ಒಬ್ಬರು ಸತ್ತಿಲ್ಲ. ಸುಮ್ಮನೆ ಭಾರತ್ ಮಾತಾಕೀ ಜೈ ಅಂತ ಹೇಳ್ತಾರೆ. ಬಿಜೆಪಿ ತಮ್ಮ ಕಚೇರಿಯಲ್ಲಿ ಮೊದಲು ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೊ ಸಹ ಹಾಕ್ತಿರಲಿಲ್ಲ. ಈಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಹಾಕ್ತಾರೆ. ಬಿಜೆಪಿ ಅವ್ರು ಬಡವರ ವಿರೋಧಿಗಳು ಎಂದು ಸಿದ್ದರಾಮಯ್ಯ ಬಿಜೆಪಿಯನ್ನು ಟೀಕಿಸಿದ್ದಾರೆ.

ಮಹಿಳೆಯರು, ರೈತರು, ಬಡವರು, ಯಾರಿಗೂ ರಕ್ಷಣೆಯಿಲ್ಲ. ದೇಶದ ಎಲ್ಲಾ ಆಸ್ತಿಯನ್ನು ಒಂದೊಂದಾಗಿ ಮಾರುತ್ತಿದ್ದಾರೆ. ಆದರೂ ಯುವಕರು ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. 11,000 ಕೋಟಿ ಜನ ಇದ್ದ ಕೆಲಸವನ್ನೂ ಕಳೆದುಕೊಂಡಿದ್ದಾರೆ. ಮೋದಿ ಆಡಳಿತದಲ್ಲಿ 80 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇವರು ಅಧಿಕಾರದಲ್ಲಿ ಮುಂದುವರಿಯಬೇಕ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿದ್ಯಾವಂತರು ಕೆಲಸ ಕೇಳಿದರೆ ಪಕೋಡ ಮಾರಿ ಅಂತಾರೆ. ಪಕೋಡ ಸಿದ್ಧಪಡಿಸಲು ಎಣ್ಣೆ ಬೆಲೆಯೂ ದುಬಾರಿಯಾಗಿದೆ. ದೇಶ ಒಡೆಯುವುದು, ಜಗಳ ತಂದಿಡುವುದು ಬಿಜೆಪಿ ಕೆಲಸ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, ಆರೆಸ್ಸೆಸ್​ನವರು ಸತ್ತಿದ್ರಾ? ಬಿಜೆಪಿಯವರು ದೇಶ ಮಾರಾಟ ಮಾಡಲು ಹೊರಟಿದ್ದಾರೆ. ಎಲ್ಲಾ ವಿಭಾಗಗಳನ್ನು ಖಾಸಗಿಯವರಿಗೆ ನೀಡುತ್ತಿದ್ದಾರೆ. ಬಿಜೆಪಿಯವರ ಬಣ್ಣದ ಮಾತುಗಳಿಗೆ ಜನ ಮರುಳಾಗಬೇಡಿ. ದೇಶ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು ಎಂದು ಕಾಂಗ್ರೆಸ್​ ಕಾರ್ಯಕರ್ತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಬೆಂಗಳೂರಿನಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಹನುಮಂತೇಗೌಡ, ಟಿ.ಜಿ.ಚಂದ್ರು ಕಾಂಗ್ರೆಸ್​ಗೆ ಸೇರ್ಪಡೆ ಆಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆ ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಮುಖಂಡರು ಇಂದು ಕೈ ಪಕ್ಷಕ್ಕೆ ಸೇರಿದ್ದಾರೆ. ಬ್ಯಾಟರಾಯನಪುರ ಅಭ್ಯರ್ಥಿಯಾಗಿದ್ದ ಹನುಮಂತೇಗೌಡ, ಹೆಬ್ಬಾಳ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿದ್ದ ಟಿ.ಜಿ. ಚಂದ್ರು, ಮಾಜಿ ಉಪ ಮೇಯರ್ ಎಂ.ಆನಂದ್​ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಕುವೆಂಪು ಮೈದಾನದಲ್ಲಿ ಕಾರ್ಯಕ್ರಮದಲ್ಲಿ ಕೃಷ್ಣ ಭೈರೇಗೌಡ, ಭೈರತಿ ಸುರೇಶ್​ ಸೇರಿದಂತೆ ಹಲವರು ಭಾಗಿ ಆಗಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಹೊಸ ಪರ್ವ ಆರಂಭವಾಗಿದೆ ಎಂದು ಜೆಡಿಎಸ್​ ನಾಯಕರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಜಾತಿ ಗಣತಿ ಬಿಡುಗಡೆ ಮಾಡಲು ಹೆಚ್​ಡಿ ಕುಮಾರಸ್ವಾಮಿ ಬಿಡಲಿಲ್ಲ: ಸಿದ್ದರಾಮಯ್ಯ ಆರೋಪ

ಇದನ್ನೂ ಓದಿ: ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರ ಮರು ನೇಮಕ; ಸಿಹಿ ಸುದ್ದಿ ಕೊಟ್ಟ ಶ್ರೀರಾಮುಲು

Published On - 2:36 pm, Sun, 26 September 21