ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ಸಂಪುಟಕ್ಕೆ ಸೇರುವ 24 ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಅಂತಿಮಗೊಳಿಸಿದೆ ಎಂದು ಕಾಂಗ್ರೆಸ್ (Congress) ಮೂಲಗಳಿಂದ ಮಾಹಿತಿ ದೊರೆತಿದೆ. ಮೊದಲ ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ 8 ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದು, ಇದೀಗ ನಾಳೆ (ಮೇ.27) ರಂದು ರಾಜಭವನದ ಗಾಜಿನಮನೆಯಲ್ಲಿ ಬೆಳಿಗ್ಗೆ 11:30 ನಿಮಿಷಕ್ಕೆ 24 ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಜೋಡೆತ್ತು ಸರ್ಕಾರದ ಸಚಿವ ಸಂಪುಟ ರಚನೆಯಾಗಲಿದೆ.
ಹಲವು ಆಕಾಂಕ್ಷಿಗಳ ಒತ್ತಡ ಹಾಗೂ ಬೆಂಬಲಿಗರಿಗೆ ಅವಕಾಶ ಕೊಡಿಸುವ ನಾಯಕರ ಪ್ರಯತ್ನದಿಂದಾಗಿ ಕಳೆದ ಎರಡು ದಿನಗಳಿಂದ ಹೊಸ ಸಚಿವರ ಯಾದಿ ಅಂತಿಮಗೊಳಿಸುವ ಕಸರತ್ತು ನಡೆಯಿತು. ಜತೆಗೆ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂದು ಸರಕಾರ ಆರಂಭದಲ್ಲೇ ಜಬರ್‌ದಸ್ತ್ ಟೇಕಾಫ್ ಆಗಿದೆ ಸಂದೇಶ ನೀಡಲು ಎಲ್ಲ 24 ಸ್ಥಾನಗಳನ್ನೂ ಭರ್ತಿ ಮಾಡಲು ಹೈಕಮಾಂಡ್ ಸೂಚಿಸಿದೆ.
ಇದನ್ನೂ ಓದಿ: ನಿಮ್ಮದು ಪ್ರೇಮ ರಾಜಕಾರಣವೇ; ಅಶ್ವತ್ಥನಾರಾಯಣಗೆ ಕಾಂಗ್ರೆಸ್ ಪ್ರಶ್ನೆ
ಜಾತಿ, ಪ್ರದೇಶ, ಹಿರಿತನ ಒಳಗೊಂಡು ನಾನಾ ಮಾನದಂಡಗಳಡಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯೇಕ ಪಟ್ಟಿ ಹಿಡಿದುಕೊಂಡು ಬುಧವಾರ ಸಂಜೆ ದೆಹಲಿಗೆ ಹಾರಿದ್ದರು. ಇನ್ನು ದೆಹಲಿಗೆ ಬಂದಿದ್ದ ನಾಯಕರೊಂದಿಗೆ ಕೆ.ಸಿ.ವೇಣುಗೋಪಾಲ್ ತಡರಾತ್ರಿ ಒಂದು ಸುತ್ತಿನ ಸಭೆ ನಡೆಸಿದ್ದರು. ಗುರುವಾರ ಮತ್ತೆ ವೇಣುಗೋಪಾಲ್ ನಿವಾಸದಲ್ಲಿ 2ನೇ ಸುತ್ತಿನ ಸಭೆ ನಡೆಯಿತು.
ಈ ಬಳಿಕ ಇಂದು ಮೇ. 26 ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಚರ್ಚೆ ಬಳಿಕ 24 ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಯಿತು.
ಇನ್ನು ಸಚಿವರ ಯಾದಿ ಕಸರತ್ತು ಪೂರ್ಣಗೊಂಡ ಬಳಿಕ ರಾಜ್ಯಪಾಲರ ಲಭ್ಯತೆಯ ಬಗ್ಗೆ ಸರಕಾರ ಮಾಹಿತಿ ಕೇಳಿ ಪಡೆದುಕೊಂಡಿದೆ. ಭಾನುವಾರ ನೂತನ ಪಾರ್ಲಿಮೆಂಟ್ ಕಟ್ಟಡ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಶನಿವಾರ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Fri, 26 May 23