RSSಗೆ ಕೈ ಹಾಕಿದ್ರೆ ಕಾಂಗ್ರೆಸ್ ಇರಲ್ಲ: ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು
ಭಾರತದಲ್ಲಿ RSS ಎಂಬ ವಿಚ್ಛಿದ್ರಕಾರಿ ಸಂಘಟನೆ ಈಗಾಗಲೇ 3 ಬಾರಿ ನಿಷೇಧಕ್ಕೊಳಪಟ್ಟಿತ್ತು. ಕಾಂಗ್ರೆಸ್ ಆಗಲೂ ಇತ್ತುಈಗಲೂ ಇದೆ, ಮುಂದೆಯೂ ಇರಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಬೆಂಗಳೂರು: ಆರ್ಎಸ್ಎಸ್ (RSS) ಗೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ ಎಂಬ ಬಿಜೆಪಿ ರಾಜ್ಯಾಧಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದರು. ಸದ್ಯ ಈ ಹೇಳಿಕೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಭಾರತದಲ್ಲಿ RSS ಎಂಬ ವಿಚ್ಛಿದ್ರಕಾರಿ ಸಂಘಟನೆ ಈಗಾಗಲೇ 3 ಬಾರಿ ನಿಷೇಧಕ್ಕೊಳಪಟ್ಟಿತ್ತು. ಕಾಂಗ್ರೆಸ್ ಆಗಲೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ ಎಂದು ತಿರುಗೇಟು ನೀಡಿದೆ. ಸರ್ದಾರ್ ಪಟೇಲರೇ ಭಾರತ ವಿರೋಧಿ ಸಂಘಟನೆ ಎಂದಿದ್ದರು. ಸರ್ಕಾರಿ ಹಾಗೂ ಅನುದಾನಿತ ಶಾಲಾ ಆವರಣದಲ್ಲಿ RSS ಚಟುವಟಿಕೆಗಳನ್ನು ತಡೆಯುವ ಕುರಿತು ವಿಮರ್ಶಿಸಲಾಗುವುದು ಎಂದು ಟ್ವೀಟ್ ಮೂಲಕ ಕಿಡಿಕಾರಲಾಗಿದೆ.
ಪ್ರಿಯಾಂಕ್ ಖರ್ಗೆ ಹೇಳಿಕೆ ಕಟೀಲ್ ಕಿಡಿ
ಆರ್ಎಸ್ಎಸ್ ನಿಷೇಧ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ, ಕೇಂದ್ರ ಸಚಿವರು, ನಾವೆಲ್ಲರೂ RSSನಿಂದ ಬಂದವರು. ಆರ್ಎಸ್ಎಸ್ ಈ ದೇಶದಲ್ಲಿ ರಾಷ್ಟ್ರ ಭಕ್ತಿ ಕಲಿಸಿದೆ. ನೆಹರೂ, ಇಂದಿರಾ ಎಲ್ಲರೂ ನಿಷೇಧಕ್ಕೆ ಕೈಹಾಕಿ ಕೈಸುಟ್ಟುಕೊಂಡಿದ್ದಾರೆ. ನಿಷೇಧದ ಕೆಲಸ ಮಾಡಿದಾಗ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿಲ್ಲ. ಬಜರಂಗದಳ, RSS ನಿಷೇಧಕ್ಕೆ ಕೈಹಾಕಿದರೆ ಕಾಂಗ್ರೆಸ್ ಇರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಿಎಫ್ಐ ಜೊತೆ ಬಜರಂಗದಳ, ಆರ್ಎಸ್ಎಸ್ ಹೋಲಿಸಿ ಸಮಸ್ಯೆ ಮೈಗೆಳೆದುಕೊಳ್ಳಬೇಡಿ: ಖರ್ಗೆಗೆ ಮಹೇಶ್ ಟೆಂಗಿನಕಾಯಿ ತಿರುಗೇಟು
ಮೆರವಣಿಗೆ, ವಿಜಯೋತ್ಸವ ವೇಳೆ ಪಾಕ್ ಪರ ಘೋಷಣೆ ಕೂಗಿದ್ದಾರೆ. ಅದು ಬಿಟ್ಟು ರಾಜ್ಯವನ್ನ ವಿಭಜನಾವಾದದ ಮೂಲಕ ಕಟ್ಟೋದು ಬೇಡ. ಬಜರಂಗದಳ, ಆರ್ಎಸ್ಎಸ್ ನಿಷೇಧ ಮಾಡಲು ನಿಮಗೆ ಹಕ್ಕಿಲ್ಲ. RSS ರಾಷ್ಟ್ರಭಕ್ತಿ ಸಂಕೇತ ಅಂತಾ ಕಾಂಗ್ರೆಸ್ಸಿಗರೇ ಹೇಳಿದ್ದಾರೆ. ಕಾಂಗ್ರೆಸ್ನವರ ಜಗಳ ಹೊರ ಬಾರದಂತೆ ಮಾಡಲು ಇದು ಷಡ್ಯಂತ್ರ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಆರ್ಎಸ್ಎಸ್ ನಿಷೇಧ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನಾನು ಸವಾಲು ಹಾಕುತ್ತೇನೆ, RSS ನಿಷೇಧಿಸಲಿ ನೋಡೋಣ. ಯಾವುದೇ ಸಂಘಸಂಸ್ಥೆ ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಒಂದು ಸಮುದಾಯದ ತುಷ್ಟೀಕರಣಕ್ಕೆ ಇಂತಹ ಹೇಳಿಕೆ ಕೊಡ್ತಿದ್ದಾರೆ.
ಇದನ್ನೂ ಓದಿ: ಒಲ್ಲದ ಗಂಡನಿಗೆ ನೂರಾರು ಕುಂಟುನೆಪ; ಗ್ಯಾರಂಟಿ ಜಾರಿಮಾಡದ ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
RSS, ಬಜರಂಗದಳ ನಿಷೇಧ ಬಗ್ಗೆ ಸಿಎಂ ನಿಲುವು ಸ್ಪಷ್ಪಪಡಿಸಲಿ. ಸಚಿವರ ಹೇಳಿಕೆಗೆ ಸಿಎಂ ಬೆಂಬಲ ಇದೆಯಾ ಅಂತಾ ಜನರಿಗೆ ತಿಳಿಸಲಿ. ಆರ್ಎಸ್ಎಸ್ ನಿಷೇಧ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.