ಒಲ್ಲದ ಗಂಡನಿಗೆ ನೂರಾರು ಕುಂಟುನೆಪ; ಗ್ಯಾರಂಟಿ ಜಾರಿಮಾಡದ ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಒಲ್ಲದ ಗಂಡನಿಗೆ ನೂರಾರು ಕುಂಟುನೆಪ ಎಂಬಂತೆ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಈಗ ಚುನಾವಣಾಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಗಳ ಜಾರಿಗೆ ನೆಪ ಹೇಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಒಲ್ಲದ ಗಂಡನಿಗೆ ನೂರಾರು ಕುಂಟುನೆಪ ಎಂಬಂತೆ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ (Congress) ಈಗ ಚುನಾವಣಾಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಗಳ ಜಾರಿಗೆ ನೆಪ ಹೇಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಯಾದರೂ ಗ್ಯಾರಂಟಿಗಳನ್ನು ಘೋಷಣೆ ಮಾಡಿಲ್ಲ. ಮುಂದಿನ ಸಂಪುಟ ಸಭೆಯಯಲ್ಲಿ ಭರವಸೆ ಈಡೇರಿಸುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಏನು ಮಾಡುತ್ತೋ ನೋಡೋಣ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಹೇಳಿದ್ದಾರೆ. ಈಗ ಉಚಿತ ಪ್ರಯಾಣದ ಬಗ್ಗೆ ನೆಪಗಳು ಹೇಳುತ್ತಿದ್ದಾರೆ. ತಮಿಳುನಾಡಿನಿಂದ ಬರುವವರಿಗೆ ನಿಯಮ ಅನ್ವಯಿಸಲ್ಲ ಎಂದಿದ್ದಾರೆ. ಇವರು ತಮಿಳುನಾಡಿನವರು ಎಂದು ಹೇಗೆ ಗುರುತಿಸುತ್ತಾರೆ? ಒಲ್ಲದ ಗಂಡನಿಗೆ ನೂರಾರು ಕುಂಟುನೆಪ ಎಂಬಂತಿದೆ ಸರ್ಕಾರದ ನಡೆ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಚುನಾವಣಾಪೂರ್ವದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅವುಗಳನ್ನು ಜಾರಿಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ, ಮೊದಲ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಸ್ಕೀಮ್ಗೆ ತಾತ್ವಿಕ ಅನುಮೋದನೆ ನೀಡಲಾಗಿತ್ತು.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ಗೆ ಫುಲ್ ಡಿಮ್ಯಾಂಡ್: ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಮುಂದಾದ ಜನ
ಆದರೆ, ಎರಡನೇ ಸಚಿವ ಸಂಪುಟ ಸಭೆಯ ಬಳಿಕ ಗ್ಯಾರಂಟಿಗಳ ಜಾರಿಗೆ ವಿಸ್ತೃತ ಮಾರ್ಗಸೂಚಿ ಹೊರಡಿಸುವುದಾಗಿ ನಂತರ ಹೇಳಿತ್ತು. ಇದೀಗ ಸಂಪುಟ ವಿಸ್ತರಣೆ ಗೊಂದಲ ಮುಂದುವರಿದಿದ್ದು, ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಹೈಕಮಾಂಡ್ ಜತೆ ಲಾಬಿ ಮುಂದುವರಿಸಿದ್ದಾರೆ. ಈ ಮಧ್ಯೆ, ವಿದ್ಯುತ್ ಬಿಲ್ ಪಾವತಿಗೆ ಜನ ನಿರಾಕರಿಸುತ್ತಿರುವ ಹಲವು ಪ್ರಕರಣಗಳು ರಾಜ್ಯದಾದ್ಯಂತ ವರದಿಯಾಗಿವೆ.
ಗ್ಯಾರಂಟಿ ಜಾರಿಗೆ ಸಿದ್ದರಾಮಯ್ಯ, ಡಿಕೆಶಿ ಸಭೆ
ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿಗಳನ್ನು ಜಾರಿ ಮಾಡುವ ವಿಚಾರವಾಗಿ ಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮೇ 23ರಂದು ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಇತರೆ ಇಲಾಖೆ ಅಧಿಕಾರಿಗಳ ಜತೆ ಸಭೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಾರ್ಷಿಕ 50 ಸಾವಿರ ಕೋಟಿ ಅಂದಾಜು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Fri, 26 May 23