ಕೋವಿಡ್ ನಿಯಮ ಉಲ್ಲಂಘಿಸಿ ಡಿಕೆ ಶಿವಕುಮಾರ್ ಮೇಕೆದಾಟು ಪಾದಯಾತ್ರೆ; ಜೂ.2 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್‌ನ 13 ನಾಯಕರುಗಳ ಮೇಲೆ ಪ್ರಕರಣ ದಾಖಲಾಗಿತ್ತು. ಈ ಕುರಿತು 7 ಪ್ರಕರಣಗಳ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಉಪಮುಖ್ಯಂಮತ್ರಿ ಡಿಕೆ ಶಿವಕುಮಾರ್ ವಿಚಾರಣೆಯನ್ನ ಜೂ.2ಕ್ಕೆ ಹೈಕೋರ್ಟ್ ಮುಂದೂಡಿದೆ.
ಬೆಂಗಳೂರು: ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಸೇರಿ ಕಾಂಗ್ರೆಸ್‌ನ 13 ನಾಯಕರುಗಳ ಮೇಲೆ ಪ್ರಕರಣ ದಾಖಲಾಗಿತ್ತು. ಈ ಕುರಿತು 7 ಪ್ರಕರಣಗಳ ರದ್ದು ಕೋರಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ಕುರಿತು ಡಿಕೆ ಶಿವಕುಮಾರ್ ವಿಚಾರಣೆ ಮಾಡಲಾಗಿ, ಕಚೇರಿ ಆಕ್ಷೇಪಣೆ ಸರಿಪಡಿಸಲು 1 ವಾರ ಕಾಲಾವಕಾಶವನ್ನ ಹೈಕೋರ್ಟ್ ನೀಡಿದೆ. ಈ ಮೂಲಕ ಮುಂದಿನ ವಿಚಾರಣೆ ಜೂ.2 ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ 2022 ರ ಜನವರಿ 9 ರಿಂದ 10 ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ರಾಮನಗರ ತಹಶೀಲ್ದಾರ್ ಜನವರಿ 13 ರಂದು ರಾಮನಗರ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಪೊಲೀಸರು, ಫೆಬ್ರುವರಿ 9 ರಂದು ವಿಚಾರಣಾ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕ್ರಮ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಮತ್ತಿತರ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಸುನಿಲ್ ದತ್ ಯಾದವ್ ಅವರನ್ನು ಒಳಗೊಂಡ ಏಕಸದಸ್ಯಪೀಠವು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಅಷ್ಟೇ ಅಲ್ಲ ಅವರ ಜೊತೆ ಕಾಂಗ್ರೆಸ್‌ನ 13 ನಾಯಕರಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ಪರಿಹಾರ ದೊರೆತಿತ್ತು.
ಇನ್ನು ಕಾಂಗ್ರೆಸ್ ನಾಯಕರ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ, ‘ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎನ್ನುವ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ ಅನ್ವಯಿಸಬೇಕಿತ್ತು. ಆದರೆ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. ಕೋವಿಡ್ ಕುರಿತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚನೆಯನ್ನು ಹೊರಡಿಸಿಯೇ ಇಲ್ಲ ಎಂದಿದ್ದರು. ಅಲ್ಲದೆ, ಆಡಳಿತಾರೂಢ ಸರ್ಕಾರ, ಕಾಂಗ್ರೆಸ್ ಪಕ್ಷದ ವಿರುದ್ಧ ತಾರತಮ್ಯ ಎಸಗಿದೆ. ಹೀಗಾಗಿ ಕಾಯ್ದೆ ಅನ್ವಯಿಸಿರುವುದು ಕಾನೂನುಬಾಹಿರ ಎಂದು ವಾದಿಸಿದರು. ವಾದ ಆಲಿಸಿದ ಬಳಿಕ ನ್ಯಾಯಾಲಯ ಕಾಂಗ್ರೆಸ್ ನಾಯಕರ ವಿರುದ್ಧದ ಕೇಸ್‌ಗೆ ಹೈಕೋರ್ಟ್ ತಡೆ ಜಾರಿಗೊಳಿಸಿತ್ತು. ಇದೀಗ 7 ಪ್ರಕರಣಗಳ ರದ್ದು ಕೋರಿ ಉಪಮುಖ್ಯಂಮತ್ರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಗೆ ಕಚೇರಿ ಆಕ್ಷೇಪಣೆ ಸರಿಪಡಿಸಲು 1 ವಾರ ಕಾಲಾವಕಾಶವನ್ನ ನೀಡುವ ಮೂಲಕ ವಿಚಾರಣೆಯನ್ನ ಜೂ.2 ಕ್ಕೆ ಮುಂದೂಡಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Fri, 26 May 23