AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಬ್ರಿಯಲ್ಲಿ ಭೂ ಅವ್ಯವಹಾರ, ಸುನಿಲ್ ಕುಮಾರ್ ಕೈವಾಡ ಶಂಕೆ; ಲೋಕಾಯುಕ್ತಕ್ಕೆ ಮುತಾಲಿಕ್ ದೂರು

ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಿರುವ ಸಂಶಯ ಇದೆ. ಈ ಅಕ್ರಮದ ಹಿಂದೆ ಸ್ಥಳೀಯ ಶಾಸಕ, ಪ್ರಭಾವಿ ಮಂತ್ರಿ ಕೈವಾಡ ಇರುವ ಶಂಕೆ ಇದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

ಹೆಬ್ರಿಯಲ್ಲಿ ಭೂ ಅವ್ಯವಹಾರ, ಸುನಿಲ್ ಕುಮಾರ್ ಕೈವಾಡ ಶಂಕೆ; ಲೋಕಾಯುಕ್ತಕ್ಕೆ ಮುತಾಲಿಕ್ ದೂರು
ಪ್ರಮೋದ್ ಮುತಾಲಿಕ್ (ಸಂಗ್ರಹ ಚಿತ್ರ)
Ganapathi Sharma
|

Updated on:Mar 02, 2023 | 3:27 PM

Share

ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದ (Karkala) ಹೆಬ್ರಿ (Hebri) ತಾಲೂಕಿನಲ್ಲಿ ಭಾರೀ ಭೂ ಅವ್ಯವಹಾರ ನಡೆದಿದೆ. ಇದರ ಹಿಂದೆ ಸ್ಥಳೀಯ ಶಾಸಕ, ಪ್ರಭಾವಿ ಸಚಿವರ ಕೈವಾಡ ಇದೆ ಎಂದು ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik)  ಆರೋಪಿಸಿದ್ದಾರೆ. ಈ ಮೂಲಕ ಅವರು, ಕಾರ್ಕಳ ಶಾಸಕ, ಸಚಿವ ಸುನಿಲ್ ಕುಮಾರ್ ಹೆಸರು ಉಲ್ಲೇಖಿಸದೆಯೇ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಜತೆಗೆ, ಈ ವಿಚಾರವಾಗಿ ಉಡುಪಿಯ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮುತಾಲಿಕ್ ಈ ಆರೋಪ ಮಾಡಿದ್ದು ರಾಜಕೀಯವಾಗಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಪ್ರತಿಪಕ್ಷಗಳೂ ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ಹೆಬ್ರಿ ತಾಲೂಕಿನಲ್ಲಿ ರೈತರಿಂದ 67.94 ಎಕರೆ ಕೃಷಿ ಭೂಮಿಯನ್ನು ಸಚಿವರ ಆಪ್ತರಾದ ವಿದ್ಯಾ ಸುವರ್ಣ-ಗಜಾನಂದ ದಂಪತಿ ಖರೀದಿಸಿದ್ದಾರೆ. 4.15 ಕೋಟಿ ರೂಪಾಯಿಗೆ ಜಮೀನು ಖರೀದಿಸಲಾಗಿದೆ. ಇದೇ ಪ್ರದೇಶದಲ್ಲಿ ರಾಜ್ಯ ಸರ್ಕಾರವು ಕೈಗಾರಿಕಾ ಉದ್ದೇಶಕ್ಕೆ ಭೂಮಿ ಖರೀದಿಸಲು ಚಿಂತನೆ ನಡೆಸಿದೆ. ಒಂದು ವೇಳೆ ಸರ್ಕಾರವು ಈ ಜಮೀನಿನ ಖರೀದಿ ಪ್ರಕ್ರಿಯೆ ನಡೆಸಿದರೆ ಬೊಕ್ಕಸಕ್ಕೆ ನಷ್ಟವಾಗಲಿದೆ. ಜಮೀನು ಕೊಟ್ಟ ರೈತರಿಗೆ ದೊಡ್ಡ ಅನ್ಯಾಯ, ನಷ್ಟವಾಗಲಿದೆ. ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಿರುವ ಸಂಶಯ ಇದೆ. ಈ ಅಕ್ರಮದ ಹಿಂದೆ ಸ್ಥಳೀಯ ಶಾಸಕ, ಪ್ರಭಾವಿ ಮಂತ್ರಿ ಕೈವಾಡ ಇರುವ ಶಂಕೆ ಇದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

ಪ್ರಮೋದ್ ಮುತಾಲಿಕ್ ಕಾರ್ಕಳ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವುದು ಸುನೀಲ್ ಕುಮಾರ್ ಮತ್ತು ಅವರ ನಡುವಣ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಲಿದೆ. ನೀವು ಆಮಿಷಕ್ಕೆ ಒಳಗಾಗಿ ಚುನಾವಣೆಯಲ್ಲಿ ಸ್ಪರ್ಧೆಗೆ ಬಯಸಿದ್ದೀರಿ. ನಿಮ್ಮ ನಡೆ ಬಗ್ಗೆ ನಮಗೆ ಮೊದಲೇ ಅನುಮಾವಿತ್ತು, ಈಗ ನಿಜವಾಗಿದೆ ಎಂದು ಮುತಾಲಿಕ್ ಅವರನ್ನು ಉದ್ದೇಶಿಸಿ ಸುನೀಲ್ ಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಒಂದು ಹಿಂದು ಹುಡುಗಿ ಹೋದ್ರೆ, ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ: ನಿಮಗೆ ರಕ್ಷಣೆ ನಮ್ಮದು ಎಂದ ಮುತಾಲಿಕ್

ಮುತಾಲಿಕ್ ಸ್ಪರ್ಧೆಯ ಉದ್ದೇಶ ಕಾರ್ಕಳ ಕ್ಷೇತ್ರದ ಹಿತವಲ್ಲ, ಹಿಂದುತ್ವದ ಹಿತ ಅಲ್ಲ, ಜನತೆಯ ಹಿತವಲ್ಲ, ಅವರ ಸ್ಪರ್ಧೆ ನೋಟಿಗಾಗಿ ಎಂಬುದು ಅವರ ಹೇಳಿಕೆಯಿಂದಲೇ ಸ್ಪಷ್ಪವಾಗಿದೆ ಎಂದು ಸುನೀಲ್ ಟೀಕಿಸಿದ್ದರು. ಮುತಾಲಿಕ್ ಕಾರ್ಕಳದಿಂದ ಸ್ಪರ್ಧಿಸುತ್ತಿರುವುದು ಹಿಂದೂ ಪರ ರಾಜಕೀಯ ಪಕ್ಷಕ್ಕೆ ಹಿನ್ನೆಡೆಯಾಗಲಿದೆ. ಇದನ್ನು ಅವರು ತಿಳಿದುಕೊಳ್ಳಬೇಕು ಎಂದೂ ಅವರು ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇದೀಗ ಮುತಾಲಿಕ್ ಭೂ ಅವ್ಯವಹಾರದ ಆರೋಪ ಮಾಡಿ, ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Thu, 2 March 23