ಮುಂದಿನ ರಾಜಕೀಯ ನಡೆ ಘೋಷಿಸುವ ಬಗ್ಗೆ ಅಭಿಮಾನಿಗಳೊಂದು ಸಂದೇಶ ರವಾನಿಸಿದ ಸುಮಲತಾ!

|

Updated on: Apr 02, 2024 | 4:44 PM

ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಹೀಗಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್ ಅವರಿಗೆ ನಿರಾಸೆಯಾಗಿದೆ. ಹೀಗಾಗಿ ಮೌನಕ್ಕೆ ಜಾರಿರುವ ಸುಮಲತಾ ಅಂಬರೀಶ್ ಅವರು ರಾಜಕೀಯ ಬದ್ಧ ವೈರಿ ಎಚ್​ಡಿ ಕುಮಾರಸ್ವಾಮಿಗೆ ಬೆಂಬಲಿಸಲಿದ್ದಾರಾ? ಅಥವಾ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ನಾಳೆ (ಏಪ್ರಿಲ್ 03) ತಮ್ಮ ನಡೆ ಏನು ಎನ್ನುವುದನ್ನು ಸುಮಲತಾ ಘೋಷಣೆ ಮಾಡಲಿದ್ದಾರೆ. ಇದರಿಂದ ನಾಳೆ ರಾಜಕೀಯಕ್ಕೆ ಹೊಸ ಚಿತ್ರಣ ಸಿಗಲಿದೆ. ಅದಕ್ಕೂ ಮುನ್ನ ಸುಮಲತಾ ಅವರು ತಮ್ಮ ಅಭಿಮಾನಿಗಳಿಗೊಂದು ಸಂದೇಶ ರವಾನಿಸಿದ್ದಾರೆ.

ಮುಂದಿನ ರಾಜಕೀಯ ನಡೆ ಘೋಷಿಸುವ ಬಗ್ಗೆ ಅಭಿಮಾನಿಗಳೊಂದು ಸಂದೇಶ ರವಾನಿಸಿದ ಸುಮಲತಾ!
ಸುಮಲತಾ ಅಂಬರೀಶ್
Follow us on

ಮಂಡ್ಯ, (ಏಪ್ರಿಲ್ 02): ಈ ಬಾರಿ ಮತ್ತೆ ಮಂಡ್ಯ(Mandya) ಲೋಕಸಭಾ ಚುನಾವಣೆ (Loksabha Elections 2024) ಭಾರೀ ಸದ್ದು ಮಾಡುತ್ತಿದೆ. ಮಂಡ್ಯದಲ್ಲಿ ಈ ಬಾರಿ ಜೆಡಿಎಸ್ ವರ್ಸಸ್​​ ಕಾಂಗ್ರೆಸ್​​ ನೇರ ಹಣಾಹಣಿ ಇರುತ್ತಾ? ಈ ಹಣಾಹಣಿ ಏನಾದ್ರೂ ತ್ರಿಕೋನ ಸ್ಪರ್ಧೆಗೆ ತಿರುಗುತ್ತಾ? ತ್ರಿಕೋನ ಕದನವಾಗಲು ಸುಮಲತಾ ಅಂಬರೀಶ್ (Sumalatha Amabareesh) ಸ್ಪರ್ಧಿಸಬೇಕು. ಹಾಗಾದ್ರೆ ಸುಮಲತಾ ಸ್ಪರ್ಧಿಸುತ್ತಾರಾ? ಇಲ್ವಾ? ಸ್ವಾಭಿಮಾನಿಯ ಮುಂದಿನ ನಡೆ ಏನು? ಈ ಪ್ರಶ್ನೆಗಳ ಸುತ್ತವೇ ರಾಜಕೀಯ ಸುತ್ತುತ್ತಿದೆ. ಈ ಸುತ್ತುವ ಪ್ರಶ್ನೆಗಳಿಗೆ ನಾಳೆ (ಏಪ್ರಿಲ್ 03) ಉತ್ತರ ಸಿಗಲಿದೆ. ಈ ಮೂಲಕ ಸುಮಲತಾ ಅವರ ನಡೆ ಮೇಲೆ ರಾಜಕೀಯ ಚಿತ್ರಣ ಸಿಗಲಿದೆ. ಇನ್ನು ಅಂತಿಮ ನಿರ್ಧಾರ ಕೈಗೊಳ್ಳುವ ಸಲುವಾಗಿ ಸುಮಲತಾ ಅಂಬರೀಶ್ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದು, ನಾಳಿನ ಮಹತ್ವದ ಸಭೆಗೆ ಆಹ್ವಾನಿಸಿದ್ದಾರೆ. ಹಾಗಾದ್ರೆ ಸುಮಲತಾ ಅಂಬರೀಶ್ ಅವರು ತಮ್ಮ ಅಭಿಮಾನಿಗಳಿಗೆ ಬರೆದ ಸಂದೇಶ ಪತ್ರದಲ್ಲೇನಿದೆ ಎನ್ನುವುದು ಈ ಕೆಳಗಿನಂತಿದೆ.

ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ,

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಲದ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಸಿಕ್ತಾ ರಾಜಕೀಯ ಬದ್ಧ ವೈರಿಯ ಬೆಂಬಲ? ಸುಮಲತಾ ಆಡಿದ ಆ ಒಂದು ಮಾತಿನಿಂದ ಎಚ್​ಡಿಕೆ ಫುಲ್ ಖುಷ್

ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಏನೇ ನಿರ್ಧಾರ ತಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ ಎಂದು ಹೇಳಿದ್ದೇನೆ.


ನಿಮ್ಮ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ನಿಮ್ಮ ಸಮಯವನ್ನು ನನಗೆ ಕೊಟ್ಟು ಮನೆವರೆಗೂ ಬಂದಿದ್ದೀರಿ. ಕೆಲವರು ತಾವು ಇದ್ದಲ್ಲೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ದೊಡ್ಡದು. ಯಾವತ್ತೂ ಅದು ಹಾಗೆಯೇ ಇರಲಿ ಎಂದು ಆಶಿಸುವೆ.

ನಾಳೆ (ಏಪ್ರಿಲ್ 3) ಬೆಳಗ್ಗೆ 10 ಗಂಟೆಗೆ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲೇ ನನ್ನ ಮತ್ತು ನಿಮ್ಮೆಲ್ಲರ ನಿಲುವನ್ನು ಸ್ಪಷ್ಟ ಪಡಿಸುವ ಹಾಗೂ ಮಂಡ್ಯ ಲೋಕಸಭೆ ಚುನಾವಣೆ ಕುರಿತಂತೆ ನನ್ನ ನಿರ್ಧಾರವನ್ನು ನಿಮ್ಮೆಲ್ಲರ ಮುಂದೆಯೇ ಪ್ರಕಟಿಸುತ್ತಿದ್ದೇನೆ. ಅಂದು ನಮ್ಮೊಂದಿಗೆ ನಮ್ಮೆಲ್ಲರ ಪ್ರೀತಿಯ ದರ್ಶನ್, ಅಭಿಷೇಕ್ ಅಂಬರೀಶ್ ಇರಲಿದ್ದಾರೆ. ತಮ್ಮ ಸಲಹೆ ಮತ್ತು ಸೂಚನೆ ಹಾಗೂ ಭಾವನೆಗಳಿಗೆ ಯಾವತ್ತೂ ನಾನು ನೋವು ತರಲಾರೆ. ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಬನ್ನಿ, ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಏಪ್ರಿಲ್ 3 ರಂದು ತಮ್ಮ ನಿರ್ಧಾರ ಪ್ರಕಟಿಸಲು ಸುಮಲತಾ ಮುಂದಾಗಿದ್ದು, ಯಾವ .ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:42 pm, Tue, 2 April 24