ಚೆನ್ನೈ ಫೆಬ್ರುವರಿ 05: ಎಐಎಡಿಎಂಕೆ (AIADMK) ಮತ್ತು ತಮಿಳುನಾಡು (Tamil Nadu)ಬಿಜೆಪಿ (BJP) ನಡುವಿನ ಆಂತರಿಕ ಸಂಘರ್ಷ ಉತ್ತುಂಗಕ್ಕೇರಿರುವ ಸಮಯದಲ್ಲಿ, ಮಾಜಿ ಶಾಸಕರು ಸೇರಿದಂತೆ ಕನಿಷ್ಠ 11 ಎಐಎಡಿಎಂಕೆ ನಾಯಕರು ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ನ್ಯೂಸ್ 9 ವರದಿ ಮಾಡಿದೆ. ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಕರೂರ್‌ನ ಮಾಜಿ ಎಐಎಡಿಎಂಕೆ ಶಾಸಕ ಕೆ ವಡಿವೇಲ್ ಮತ್ತು ಕೊಂಗು ಪ್ರದೇಶ ಮತ್ತು ಉತ್ತರ ಜಿಲ್ಲೆಗಳ ಎಐಎಡಿಎಂಕೆ ನಾಯಕರ ಗುಂಪು ಬಿಜೆಪಿಗೆ ಸೇರ್ಪಡೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ದೀರ್ಘಕಾಲದ ಪಾಲುದಾರ ಎಐಎಡಿಎಂಕೆ ಜೊತೆಗಿನ ಸಂಬಂಧ ಕೊನೆಗೊಂಡ ನಂತರ 2024 ರ ಲೋಕಸಭೆ ಚುನಾವಣೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಹೊರತಾಗಿ ಮೂರನೇ ರಂಗವನ್ನು ರಚಿಸುವ ಧ್ಯೇಯದೊಂದಿಗೆ ಬಿಜೆಪಿ ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ಸಜ್ಜಾಗಿದೆ.
ಎಐಎಡಿಎಂಕೆಯ ಉಚ್ಛಾಟಿತ ನಾಯಕ ಓ ಪನ್ನೀರಸೆಲ್ವಂ, ಎಎಂಎಂಕೆಯ ಟಿಟಿವಿ ದಿನಕರನ್ ಮತ್ತು ಎಐಎಡಿಎಂಕೆಯ ಪ್ರಬಲ ಮಿತ್ರಪಕ್ಷಗಳಾಗಿದ್ದ ಡಿಎಂಡಿಕೆ, ಪಿಎಂಕೆ ಜತೆ ಕೈಜೋಡಿಸಿ ತಮಿಳುನಾಡಿನಲ್ಲಿ ತೃತೀಯ ರಂಗ ರಚನೆಗೆ ಬಿಜೆಪಿ ಪ್ರಯತ್ನ ನಡೆಸುತ್ತಿದೆ.
ಗಮನಿಸಬೇಕಾದ ಅಂಶವೆಂದರೆ, ಬಿಜೆಪಿ ಮತ್ತು ಎಐಎಡಿಎಂಕೆ ರಾಷ್ಟ್ರಮಟ್ಟದಲ್ಲಿ ಸೌಹಾರ್ದ ಹೊಂದಿದ್ದರೂ, ಸ್ಥಳೀಯ ಮಟ್ಟದಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವೆ ತೀವ್ರ ಸಂಘರ್ಷವಿದೆ. ಬಿಜೆಪಿ ನಾಯಕ ಅಣ್ಣಾಮಲೈ ಅವರು ಎಐಎಡಿಎಂಕೆ ಮಾಜಿ ವರಿಷ್ಠೆ ಜಯಲಲಿತಾ ಮತ್ತು ದ್ರಾವಿಡ ದಿಗ್ಗಜ ಸಿಎನ್ ಅಣ್ಣಾದೊರೈ ವಿರುದ್ಧ ಮಾಡಿದ ಕೆಲವು ಭಾಷಣಗಳಿಂದಾಗಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಸಂಘರ್ಷವು ಉತ್ತುಂಗದಲ್ಲಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಇತ್ತೀಚೆಗೆ ಪಕ್ಷದ ಸಭೆಯಲ್ಲಿ ಬಿಜೆಪಿಯೊಂದಿಗೆ ಇನ್ನು ಮುಂದೆ ಯಾವುದೇ ಮೈತ್ರಿ ಇಲ್ಲ ಎಂದು ಪುನರುಚ್ಚರಿಸಿದ್ದರು. ತಕ್ಷಣವೇ ಈ ನಿರ್ಧಾರಕ್ಕೆ ಅನುಮೋದನೆಯ ಸಂಕೇತವಾಗಿ ಸಾಮಾನ್ಯ ಪರಿಷತ್ ಸದಸ್ಯರು ಇಪಿಎಸ್ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ತಮಿಳುನಾಡು: ಚಲಿಸುತ್ತಿರುವ ಬಸ್ನಿಂದ ತಳ್ಳಿದ ಪತಿ, ಗರ್ಭಿಣಿ ಸಾವು
ಏತನ್ಮಧ್ಯೆ, ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಸೋಮವಾರ ಚೆನ್ನೈನಲ್ಲಿ ಬಿಜೆಪಿಯ ಸಂಸತ್ ಚುನಾವಣೆಯ ರಾಜ್ಯ ಪ್ರಧಾನ ಕಚೇರಿಯನ್ನು ಉದ್ಘಾಟಿಸಿದ ನಂತರ “2024 ರ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಗಳಿಲ್ಲ” ಎಂದು ಹೇಳಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ