ಸನಾತನ ಧರ್ಮ ಬಗ್ಗೆ ಹೇಳಿಕೆ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ಗೆ ಕರ್ನಾಟಕ ಕೋರ್ಟ್ ಸಮನ್ಸ್
ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿದ ಹೇಳಿಕೆಗಳ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ, ರಾಜ್ಯ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ಮಾರ್ಚ್ 4 ರಂದು ಕರ್ನಾಟಕ ಪ್ರತಿನಿಧಿ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಕಳೆದ ವರ್ಷ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಈ ವಿಷಯ ದೊಡ್ಡ ಚರ್ಚೆಯಾಗಿತ್ತು.
ಬೆಂಗಳೂರು ಫೆಬ್ರುವರಿ 02: ಕಳೆದ ವರ್ಷ ಸನಾತನ ಧರ್ಮದ (Sanatana Remark) ಹೇಳಿಕೆಗಳಿಗೆ ಸಂಬಂಧಿಸಿದಂತೆ ತಮಿಳುನಾಡು ಸಚಿವ (Tamil Nadu Minister) ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ವಿಚಾರಣೆಗೆ ಹಾಜರಾಗುವಂತೆ ಕರ್ನಾಟಕ ನ್ಯಾಯಾಲಯ ಅವರಿಗೆ ಸಮನ್ಸ್ ನೀಡಿದೆ. ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿದ ಹೇಳಿಕೆಗಳ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರರೂ ಆಗಿರುವ ರಾಜ್ಯ ಕ್ರೀಡಾ ಸಚಿವರನ್ನು ಮಾರ್ಚ್ 4 ರಂದು ಕರ್ನಾಟಕ ರೆಪ್ರಸೆಂಟೇಟಿವ್ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಕಳೆದ ವರ್ಷ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಈ ವಿಷಯ ದೊಡ್ಡ ಚರ್ಚೆಯಾಗಿತ್ತು.
ಪರಮೇಶ್ ಎಂಬ ವ್ಯಕ್ತಿ ಜೂನಿಯರ್ ಸ್ಟಾಲಿನ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. 46ರ ಹರೆಯದ ಸ್ಟಾಲಿನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು ಕಾನೂನಾತ್ಮಕವಾಗಿ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಹೇಳಿದರು.
“ನಾನು ಮಾತನಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ನಾವು ಪ್ರಕರಣವನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ನಾನು ನನ್ನ ನಿಲುವನ್ನು ಬದಲಾಯಿಸುವುದಿಲ್ಲ. ನಾನು ನನ್ನ ಸಿದ್ಧಾಂತದ ಬಗ್ಗೆ ಮಾತ್ರ ಮಾತನಾಡಿದ್ದೇನೆ” ಎಂದು ಅವರು ಕಳೆದ ವರ್ಷ ಸುದ್ದಿಗಾರರಿಗೆ ತಿಳಿಸಿದರು.
ಸೆಪ್ಟೆಂಬರ್ 2023 ರಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು.‘ಸನಾತನ ಧರ್ಮ’ವು ಡೆಂಗ್ಯೂ, ಮಲೇರಿಯಾ, ಕೊರೊನಾ ಇದ್ದಂತೆ. ಕೇವಲ ಸನಾತನ ಧರ್ಮವನ್ನು ವಿರೋಧಿಸಿದರೆ ಸಾಲದು ಅದನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಮಲೇರಿಯಾ, ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಅದನ್ನು ತೊಡೆದುಹಾಕಬೇಕು, ಹಾಗೆಯೇ ಸನಾತನ ಧರ್ಮವನ್ನೂ ಕೂಡ ವಿರೋಧಿಸಿ ಅದನ್ನು ನಾಶ ಮಾಡಬೇಕು ಎಂದು ಹೇಳಿದ್ದರು.
ಅರ್ಜಿದಾರ ಪರಮೇಶ್ ಪರ ವಾದ ಮಂಡಿಸಿದ ವಕೀಲ ಧರ್ಮಪಾಲ್, ”ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ವಿರೋಧಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಡೆಂಗ್ಯೂ, ಮಲೇರಿಯಾದಂತೆ ಓಡಿಸಬೇಕು ಎಂದು ಸನಾತನ ಧರ್ಮದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಎಲ್ಲೆಂದರಲ್ಲಿ ಪ್ರಕಟವಾಗಿದ್ದು, ಬಳಿಕ ನಿಲುವಿಗೆ ಅಂಟಿಕೊಂಡು ಅದೇ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಅದನ್ನು ನ್ಯಾಯಾಲಯದಲ್ಲಿಯೂ ಎದುರಿಸುವುದಾಗಿ ಹೇಳಿದರು.
ಇದನ್ನೂ ಓದಿ:ಸನಾತನ ಧರ್ಮ ವಿರುದ್ಧದ ಹೇಳಿಕೆ, ನನ್ನ ನಿಲುವು ಬದಲಾಗದು ಎಂದ ಉದಯನಿಧಿ ಸ್ಟಾಲಿನ್
ರಾಮಮಂದಿರ ಉದ್ಘಾಟನೆಯೊಂದಿಗೆ ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಶ್ರದ್ಧೆ, ಜಾಗೃತಿ ಮೂಡಿದೆ.ಇಂತಹ ಸಮಯದಲ್ಲಿ ಈ ರೀತಿಯ ಹೇಳಿಕೆಗಳು ಹಿಂದೂ ಧರ್ಮವನ್ನು ಅನುಸರಿಸುವವರ ಭಾವನೆಗೆ ಧಕ್ಕೆ ತಂದಿದೆ ಎಂದು ಪರಮೇಶ್ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:31 pm, Fri, 2 February 24