
ದೆಹಲಿ: ಉಪ ರಾಷ್ಟ್ರಪತಿ ಚುನಾವಣೆಯ (Vice Presidential election) ಮತದಾನದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗುರುವಾರ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಉಪ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವ(Margaret Alva), ಇಂಥಾ ವಿಷಯಗಳಿಗೆ, ಅಹಂಕಾರ ಅಥವಾ ಸಿಟ್ಟಿಗೆ ಪ್ರತಿಕ್ರಿಸುವ ಸಮಯ ಇದಲ್ಲ ಎಂದು ಹೇಳಿದ್ದಾರೆ. ಉಪರಾಷ್ಟ್ರಪತಿ ಚುನಾವಣಾ ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂಬ ಟಿಎಂಸಿಯ (TMC) ನಿರ್ಧಾರ ಬೇಸರದ ಸಂಗತಿ. ಇದು ಆರೋಪ, ಪ್ರತ್ಯಾರೋಪ, ಅಹಂಕಾರ ಅಥವಾ ಸಿಟ್ಟಿಗೆ ಪ್ರತಿಕ್ರಿಯಿಸುವ ಸಮಯವಲ್ಲ. ಇದು ಧೈರ್ಯ, ನಾಯಕತ್ವ ಮತ್ತು ಐಕ್ಯತೆಯ ಹೊತ್ತು. ಧೈರ್ಯದ ದ್ಯೋತಕವಾಗಿರುವ ಮಮತಾ ಬ್ಯಾನರ್ಜಿ ವಿಪಕ್ಷಗಳ ಜತೆ ನಿಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಆಳ್ವ ಟ್ವೀಟ್ ಮಾಡಿದ್ದಾರೆ.
ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಂಗಾಳದ ಮಾಜಿ ಗವರ್ನರ್ ಜಗದೀಪ್ ಧನ್ ಖರ್ ಕಣದಲ್ಲಿದ್ದಾರೆ, ಮಮತಾ ಬ್ಯಾನರ್ಜಿ ಇತ್ತೀಚೆಗೆ ಧನ್ಖರ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಅವರನ್ನು ಭೇಟಿಯಾಗಿದ್ದರು. ವಿಪಕ್ಷಗಳಾಗ ಶಿವಸೇನಾ ಮತ್ತು ಜೆಎಂಎಂ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ ಬೆನ್ನಲ್ಲೇ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷ ಅಭ್ಯರ್ಥಿಗೆ ತಮ್ಮ ಬೆಂಬಲವಿಲ್ಲ ಎಂಬ ಧಾಟಿಯಲ್ಲಿ ಟಿಎಂಸಿ ಮತದಾನದಿಂದ ದೂರವಿರಲು ನಿರ್ಧರಿಸಿದೆ.
Published On - 5:40 pm, Fri, 22 July 22