ಹುಬ್ಬಳ್ಳಿ: ಕಾಂಗ್ರೆಸ್ನ (Congress) ಆಪರೇಷನ್ ಹಸ್ತ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಬಿಜೆಪಿ (BJP) ಮತ್ತು ಜೆಡಿಎಸ್ನ ಕೆಲ ನಾಯಕರು ಘರವಾಪಸಿ ಮಾಡುತ್ತಾರೆ ಎಂಬ ವಂದತಿ ಹರಡಿದೆ. ಈ ಮಧ್ಯೆ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಮತ್ತು ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿದ್ದು, ಬಿಜೆಪಿ ಪಾಳಯದಲ್ಲಿ ಕೋಲಾಹಲ ಎಬ್ಬಿಸಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಲಿಂಗಾಯತ ಮತಗಳೇ ಇದ್ದು, ಇಲ್ಲಿ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರನ್ನು ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಹವಣಿಸುತ್ತಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಮುಂದಾಳತ್ವ ವಹಿಸುವ ಸಾಧ್ಯತೆಯೂ ಇದೆ.
ಕಳೆದ ವಿಧಾನಸಭೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಕಮಲ ನಾಯಕರ ವಿರುದ್ಧ ಸಮರಸಾರಿದ್ದಾರೆ. ಅಲ್ಲದೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ, ಮಾಜಿ ಶಾಸಕ ಎಸ್ಐ ಚಿಕ್ಕನಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಶೆಟ್ಟರ್ ಗಾಳ ಹಾಕಿದ್ದು, ಇದು ಬಹುತೇಕ ಯಶಸ್ವಿಯಾಗಿದೆ. ಈ ನಡುವೆಯೇ ರಾಜಕೀಯ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶೆಟ್ಟರ್ಗೆ ಕರೆ ಮಾಡಿದ್ದಾರೆ. ನಿನ್ನೆ (ಆ.25) ಸಂಜೆ ಅಮಿತ್ ಶಾ ಕರೆ ಮಾಡಿದ್ದು, ಮನವೊಲಿಸಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮಿತ್ ಶಾ, ಜಗದೀಶ್ ಶೆಟ್ಟರ್ಗೆ ಕರೆ ಮಾಡಿ 10 ನಿಮಿಷ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶೆಟ್ಟರ್ ಆಪ್ತ ಮೂಲಗಳಿಂದ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಸೇರಲ್ಲ ಎಂದ ಮರುದಿನವೇ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಶಿವರಾಮ್ ಹೆಬ್ಬಾರ್
ಇನ್ನು ಏಳೆಂಟು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲ್ಲಿದ್ದು, ಇದಕ್ಕೂ ಮುನ್ನ ಪಕ್ಷ ಬಿಟ್ಟು ಹೋದ ನಾಯಕರ ಮನವೊಲಿಕೆಗೆ ಬಿಜೆಪಿ ಕೇಂದ್ರ ನಾಯಕರೇ ಮುಂದಾಗಿದ್ದಾರೆ. ಇತ್ತೀಚಿಗೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಜಗದೀಶ್ ಶೆಟ್ಟರ್ ಮತ್ತು ಶಾಸಕ ಲಕ್ಷ್ಮಣ ಸವದಿ ಅವರಿಗೆ ಪರೋಕ್ಷವಾಗಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು.
ಯಾರೇ ಪಕ್ಷ ಬಿಟ್ಟಿದ್ದರು ಅವರಿಗೆ ಪ್ರಧಾನಿ ಮೋದಿಗಾಗಿ ಸ್ವಾಗತವಿದೆ. ಪಕ್ಷ ಬಿಟ್ಟವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ಮೋದಿಯಂತ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ನಮ್ಮ ದೇಶದ ನಾಯಕನನ್ನು ಇಂದು ಪ್ರಪಂಚ ಒಪ್ಪುತ್ತಿದೆ. ಅವರನ್ನು ಮತ್ತೆ ಪ್ರಧಾನಿ ಮಾಡಲು ಯಾರೇ ಪಾರ್ಟಿ ಬಿಟ್ಟಿದ್ದರೂ ವಾಪಸ್ ಬರಲು ವಿನಂತಿ ಮಾಡುತ್ತೇನೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Sat, 26 August 23