ಬೆಂಗಳೂರು: ವಿಧಾನಸಭೆ ಚುನಾವಣೆಗಾಗಿ (Kazrnataka Assembly Elections 2023) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌ನಲ್ಲಿ (Congress)ಜಾತಿವಾರು ಟಿಕೆಟ್ ಲಾಬಿ ಶುರುವಾಗಿದೆ. ತಮ್ಮ-ತಮ್ಮ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡಬೇಕೆಂದು ನಾಯಕರುಗಳು ಒತ್ತಡ ಹೇರಲಾರಂಭಿಸಿದ್ದಾರೆ. ಜಾತಿವಾರು ಟಿಕೆಟ್ ಬೇಡಿಕೆ ಕಳೆದ ಬಾರಿಗಿಂತ ಈ ಸಲ ಹೆಚ್ಚಾಗಿದೆ. ಜಾತಿ ನಾಯಕರ ಸಂಖ್ಯಾ ಬಲದಿಂದ ಸಾಮಾಜಿಕ ನ್ಯಾಯದ ಹೆಸರಲ್ಲಿ ಹೆಚ್ಚುವರಿ ಟಿಕೆಟ್ ಬೇಡಿಕೆ ಹೆಚ್ಚುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ಗೆ ದೊಡ್ಡ ತಲೆಬಿಸಿ ತಂದಿಟ್ಟಿದೆ. ಹಾಗಾದ್ರೆ, ಯಾವೆಲ್ಲ ಸಮುದಾಯಗಳು ಎಷ್ಟೆಷ್ಟು ಟಿಕೆಟ್ಗೆ ಬೇಡಿಕೆ ಇಟ್ಟಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
ವೀರಶೈವ ಲಿಂಗಾಯತ ಕರ್ನಾಟಕದಲ್ಲಿ ಪ್ರಬಲ ಸಮುದಾಯ ಎನಿಸಿಕೊಂಡಿದೆ. ಕೆಲ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳೇ ನಿರ್ಣಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ 70 ಟಿಕೆಟ್ ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮನವಿ ಮಾಡಿದೆ. ಕಳೆದ ಅಂದರೆ 2028ರ ವಿಧಾನಸಭೆ ಚುನಾವಣೆಯಲ್ಲಿ 40ಕ್ಕೂ ಹೆಚ್ಚು ಟಿಕೆಟ್ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ನೀಡಲಾಗಿತ್ತು. ಇದೀಗ ಮಹಾಸಭೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾಗಿ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಲಿಂಗಾಯತ ಸಮುದಾಯದ ನಾಯಕರು ಬೆಂಗಳೂರಿನಲ್ಲಿ ಸಭೆ ಮಾಡಿದ್ದು, ಈ ಬಾರಿ ಕನಿಷ್ಠ 70 ಟಿಕೆಟ್ ಲಿಂಗಾಯತರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಬಗ್ಗೆ ಲಿಂಗಾಯತ ನಾಯಕರು ರಾಜ್ಯ ಚುನಾವಣೆ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿದ್ದಾರೆ.
ಇನ್ನು ಲಿಂಗಾಯತ ಟಿಕೆಟ್ ಬೇಡಿಕೆ ಬೆನ್ನಲ್ಲೇ ಕುರುಬ ಸಮುದಾಯ ಕೂಡಾ ತಮ್ಮ ಸಮುದಾಯಕ್ಕೆ 40 ಟಿಕೆಟ್ ಬೇಡಿಕೆ ಇಟ್ಟಿದೆ. ಈ ಬಗ್ಗೆ ಕರ್ನಾಟಕ ಪ್ರದೇಶ ಕುರುಬರ ಸಂಘ ಪತ್ರಿಕಾಗೋಷ್ಠಿ ನಡೆಸಿ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 40 ಕ್ಷೇತ್ರಗಳಲ್ಲಿ ಕುರುಬ ಸಮುದಾಯದಕ್ಕೆ ಟಿಕೆಟ್ ನೀಡಬೇಕು ಮನವಿ ಮಾಡಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕುರುಬ ಸಮುದಾಯದ 20 ಜನರಿಗೆ ಟಿಕೆಟ್ ನೀಡಿತ್ತು. 2018 ರಲ್ಲಿ 8 ಮಂದಿ ಕುರುಬ ಸಮುದಾಯದ ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 150 ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದು, ಈ ನಿಟ್ಟಿನಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆನ್ನುವುದು ಕುರುಬ ಸಮುದಾಯದ ಬೇಡಿಕೆ ಆಗಿದೆ.
ಇನ್ನು ಮುಸ್ಲಿಮ್ ನಾಯಕರು ಸಹ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಈ ಬಾರಿ ಕನಿಷ್ಠ 25 ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ನಿನ್ನೆ(ಮಾ.08) ರಾತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮುಸ್ಲಿಂ ಮೌಲ್ವಿಗಳು ಸಹ ಭೇಟಿ ಮಾಡಿ ತಮ್ಮ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಶಾಸಕರಾದ ಜಮೀರ್ ಅಹಮ್ಮದ್, ರಿಜ್ವಾನ್ ಅರ್ಷದ್, ಅಬ್ದುಲ್ ಜಬ್ಬಾರ್ ಖಾನ್ ಮತ್ತು ಮೌಲ್ವಿಗಳು ನಿನ್ನೆ(ಮಾ.08) ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆ ಸಭೆ ಮಾಡಿದ್ದು, ಟಿಕೆಟ್ ಬೇಡಿಕೆ ಸಂಬಂಧ ಚರ್ಚೆ ಮಾಡಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:51 pm, Thu, 9 March 23