ಕಾಂಗ್ರೆಸ್ ಟೀಕಿಸುವ ಬರದಲ್ಲಿ ಗುಳಿಗನನ್ನು ಅವಹೇಳನ ಮಾಡಿದ್ರಾ ಗೃಹಸಚಿವರು?: ಆರಗ ಜ್ಞಾನೇಂದ್ರ ಸ್ಪಷ್ಟನೆ ಹೀಗಿದೆ

|

Updated on: Mar 16, 2023 | 3:19 PM

ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಬರದಲ್ಲಿ ಕರಾವಳಿಯ ಕಾರ್ಣಿಕ ದೈವ ಗುಳಿನ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೈವ ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೆ ಎಚ್ಚೆತ್ತ ಗೃಹಸಚಿವರು ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ಟೀಕಿಸುವ ಬರದಲ್ಲಿ ಗುಳಿಗನನ್ನು ಅವಹೇಳನ ಮಾಡಿದ್ರಾ ಗೃಹಸಚಿವರು?: ಆರಗ ಜ್ಞಾನೇಂದ್ರ ಸ್ಪಷ್ಟನೆ ಹೀಗಿದೆ
ಆರಗ ಜ್ಞಾನೇಂದ್ರ ಮತ್ತು ಶಿವದೂತೆ ಗುಳಿಗೆ ಪೋಸ್ಟರ್
Follow us on

ಶಿವಮೊಗ್ಗ: ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಬರದಲ್ಲಿ ಕರಾವಳಿಯ ಕಾರ್ಣಿಕ ದೈವ ಗುಳಿಗನ ಬಗ್ಗೆ ಅವಹೇಳನಕಾರಿಯಾಗಿ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅದರಲ್ಲೂ ಕರಾವಳಿ ಭಾಗದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಟೀಕೆಗೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತ ಗೃಹಸಚಿವರು ಶಿವಮೊಗ್ಗದಲ್ಲಿ ಸ್ಪಷ್ಟನೆ ನೀಡಿದ್ದು, ನನ್ನ ವಿರುದ್ಧ ಟೀಕೆ ಮಾಡುವವರು ಯಾರು? ನನಗೆ ಗುಳಿಗ, ಪಂಜುರ್ಲಿ ಕುರಿತು ಗೌರವ ಭಕ್ತಿ ಇದೆ ಎಂದರು. ಅಲ್ಲದೆ, ಈ ದೈವದ ಬಗ್ಗೆ ಮೂಡನಂಬಿಕೆ, ನಂಬಿಕೆಯಿಲ್ಲ, ವಿಶ್ವಾಸ ಇಲ್ಲ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದವರು ನಿನ್ನೆ ತೀರ್ಥಹಳ್ಳಿಯಲ್ಲಿ ನಾಟಕವಾಡಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಜನರ ಭಾವನೆಗಳನ್ನು ರಾಜಕಾರಣಕ್ಕೆ ಕಾಂಗ್ರೆಸ್ ದುರುಪಯೋಗ ಮಾಡಿದ್ದಾರೆ ಎಂದು ನಾನು ಹೇಳಿದ್ದಾಗಿ ಸ್ಪಷ್ಟನೆ ನೀಡಿದರು. ನಾನು ಎಲ್ಲಿಯೂ ಗುಳಿಗ ಬಗ್ಗೆ ಟೀಕೆ ಮಾಡಲಿಲ್ಲ ಎಂದರು.

ಮಾತ್ರವಲ್ಲದೆ ಸರಣಿ ಟ್ವೀಟ್ ಮಾಡಿದ ಗೃಹಸಚಿವರು, “ತುಳುನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಆರಾಧಿಸುವ ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಬಗ್ಗೆ ನನಗೆ ಅಪಾರ ಭಕ್ತಿ, ಮೆಚ್ಚುಗೆ ಇದೆ. ದೈವಗಳ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ್ದೇನೆ” ಎಂದಿದ್ದಾರೆ. ಅಲ್ಲದೆ, “ರಂಗಭೂಮಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಪ್ರದರ್ಶನ ನೀಡುತ್ತಿರುವ ಕಲಾವಿದರು ಹಾಗೂ ವಿಶೇಷವಾಗಿ ನಿರ್ದೇಶಕ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಸೃಜನಶೀಲತೆ ಬಗ್ಗೆ ಅಭಿಮಾನ ಇದೆ. ಆದರೆ, ಜನರ ವಿಶ್ವಾಸ ಕಳೆದುಕೊಂಡ ತೀರ್ಥಹಳ್ಳಿಯ ಕಾಂಗ್ರೆಸ್ ನಾಯಕರು, ರಾಜಕೀಯ ದುರುದ್ದೇಶದಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಮಾಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Hassan: ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಾವಲು ವಾಹನ ಡಿಕ್ಕಿ: ಬೈಕ್​ ಸವಾರ ಸ್ಥಳದಲ್ಲೇ ಸಾವು

“ಈ ಮೂಲಕ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹತಾಶ ಪ್ರಯತ್ನ ಮಾಡಿರುವುದನ್ನು ಪ್ರಸ್ತಾಪಿಸಿದ್ದೇನೆಯೇ ಹೊರತು, ನಾಟಕದ ಬಗ್ಗೆ ಅಥವಾ ದೈವದ ವಿರುದ್ಧ ಮಾತನಾಡಿಲ್ಲ. ನಾನಾಡಿದ ಮಾತುಗಳಿಗೆ ಅಪಾರ್ಥ ಕಲ್ಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವ ಕುಹಕಿಗಳ ಉದ್ದೇಶ ಈಡೇರುವುದಿಲ್ಲ” ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ಮಿಥುನ್ ರೈ ತಮ್ಮ ಫೇಸ್​ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. “ಗೃಹಸಚಿವ ಆರಗ ಜ್ಞಾನೇಂದ್ರ ಅವರೇ ನಮ್ಮ ತುಳು ಸಂಸ್ಕೃತಿ ಎಂದರೆ ನಮ್ಮ ಬದುಕು ನಮ್ಮ ನಂಬಿಕೆ. ನಿಮ್ಮ ರಾಜಕೀಯಕ್ಕಾಗಿ ನಮ್ಮ ಸಂಸ್ಕೃತಿಯನ್ನು ಎಳೆದುತರಬೇಡಿ. ನಿಮ್ಮ ಪಕ್ಷದವರು ತುಳು ಸಂಸ್ಕೃತಿಗೆ ಅವಮಾನ ಮಾಡಿದರೆ ಸುಮ್ಮನಿರಬಹುದು. ಆದರೆ ತುಳುನಾಡಿನ ಆರಾಧ್ಯ ದೈವ ಗುಳಿಗನಿಗೆ ಆದ ಅವಮಾನವನ್ನು ತುಳುನಾಡಿನ ಜನರು ಸಹಿಸಲಾರರು” ಎಂದು ಹೇಳಿದ್ದಾರೆ.

ಗೃಹಸಚಿವರ ಅವಹೇಳಕಾರಿ ಮಾತುಗಳು ಕರಾವಳಿಯ ದೈವ ಭಕ್ತರನ್ನು ಕೆರಳಿಸಿದ್ದು, ಟ್ವೀಟರ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿ ಮುಲ್ಕಿ ಎಂಬವರು ವಿಡಿಯೋ ಹಂಚಿಕೊಂಡು “ಗುಳಿಗ ತೂವೊನಡ್” (ಗುಳಿಗ ನೋಡಿಕೊಳ್ಳಲಿ) ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ತೀರ್ಥಹಳ್ಳಿ ತುಳುನಾಡಿನ ಸಮೀಪವಿರುವ ಪ್ರದೇಶ, ತುಳುನಾಡಿನ ಮೂಲ ನಿವಾಸಿಗಳಾದ ಆದಿ ದ್ರಾವಿಡರು, ಮುಂಡಾಲರು, ಬಿರುವ ಜನಾಂಗದವರು ಅಲ್ಲಿಗೆ ಕೆಲಸಕ್ಕೆ ಹೋಗಿ ಅಲ್ಲೇ ಇದ್ದು ತುಳುನಾಡಿನ ದೈವಗಳನ್ನು ನಂಬಿಕೊಂಡಿದ್ದಾರೆ. ಗುಳಿಗ ದೈವ ಘಟ್ಟದಲ್ಲೂ ಇದೆ” ಎಂದು ಹೇಳಿದ್ದಾರೆ.

ಗೃಹಸಚಿವರು ಹೇಳಿದ್ದೇನು?

ತೀರ್ಥಹಳ್ಳಿಯ ಬಾಳೆಬೈಲಿನಲ್ಲಿ ನಿನ್ನೆ (ಮಾರ್ಚ್ 15) ನಡೆದ ಜಿಲ್ಲಾ ಮಟ್ಟದ ರೈತ ಸಮಾವೇಶ ಹಾಗೂ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹಸಚಿವರು, “ಇಲ್ಲಿ ನಾನು ಎಂತದ್ದೋ ನೀಡಿದೆ ಗುಳಿಗೆ ಗುಳಿಗೆ ಅಂತ ಪೋಸ್ಟರ್​ನಲ್ಲಿ ಹಾಕಲಾಗಿದೆ. ಬಹಳ ಅಪಾಯ, ಅವರು ಯಾವ ಗುಳಿಗೆ ಕೊಡುತ್ತಾರೆ ಎಂದು ಗೊತ್ತಿಲ್ಲ. ಜಾಪಾಳ ಮಾತ್ರೆ ಕೊಟ್ಟರೂ ಕೊಡಬಹುದು. ಹೇಳಲು ಸಾಧ್ಯವಿಲ್ಲ. ಏಕೆಂದರೆ ಇವರು ಹೊಸ ಹೊಸ ನಾಟವನ್ನು ಮಾಡಲು ಆರಂಭಿಸಿದ್ದಾರೆ” ಎಂದು ಹೇಳಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Thu, 16 March 23