ಸಚಿವ ನಾರಾಯಣಗೌಡ ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ: ಸಚಿವ ಅಶ್ವತ್ಥ್ ನಾರಾಯಣ
ಸಚಿವ ನಾರಾಯಣಗೌಡರನ್ನು ಬಹುದ್ದೂರ್ ಗಂಡು ಅಂತಾ ಕರೆಯುತ್ತೇನೆ. ಅವರು ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದರು.
ಮಂಡ್ಯ: ಸಚಿವ ನಾರಾಯಣಗೌಡರನ್ನು (Narayana Gowda) ಬಹುದ್ದೂರ್ ಗಂಡು ಅಂತಾ ಕರೆಯುತ್ತೇನೆ. ಅವರು ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ (Ashwath Narayan) ಹೇಳಿದರು. ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ವಿನೂತನ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಅನ್ನು ಸಿಡಿ ಪಾರ್ಟಿ ಅಂತಾನೇ ಕರೆಯುತ್ತಾರೆ. ಕಾಂಗ್ರೆಸ್ ನಾಯಕರಿಗೆ ಜನ 5 ರೂಪಾಯಿ ಕಿಮ್ಮತ್ತೂ ಕೊಡುವುದಿಲ್ಲ. ಸಿಡಿ ಸ್ಟಾಕ್ ಇದ್ದರೆ ಬಿಡೋಕೆ ಹೇಳಿ ಇಟ್ಟುಕೊಂಡರೆ ವೇಸ್ಟ್ ಆಗುತ್ತದೆ. ಸಿಡಿ ಬ್ಲ್ಯಾಕ್ಮೇಲ್ ಎಲ್ಲವೂ ವರ್ಕೌಟ್ ಆಗಲ್ಲ ಎಂದು ಹೇಳಿದರು. ಸುಮಲತಾ ಬಿಜೆಪಿ ಬೆಂಬಲ ಕುರಿತು ಪ್ರತಿಕ್ರಿಯೆ ನೀಡಿದ್ದು, ಸುಮಲತಾ ಬೆಂಬಲದಿಂದ ನಮ್ಮ ಪಕ್ಷಕ್ಕೆ ಅನುಕೂಲ ಮತ್ತು ಬಲ ಸಿಕ್ಕಂತಾಗಿದೆ ಎಂದರು. ಯಡಿಯೂರಪ್ಪ ವಿರುದ್ಧ ವಿ.ಸೋಮಣ್ಣ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಆಂತರಿಕ ಇಲ್ಲ ಬಾಹ್ಯವೂ ಇಲ್ಲ, ನಾನು ಪಕ್ಷದ ಸದಸ್ಯ ಎಂದಿದ್ದಾರೆ ಎಂದು ತಿಳಿಸಿದರು.
ರಾಮಮಂದಿರ ನಿರ್ಮಾಣಕ್ಕೆ ಕಾತುರರಾಗಿದ್ದೇವೆ
ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರವಾಗಿ ಅವರು ಮಾತನಾಡಿ, ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾತುರರಾಗಿದ್ದೇವೆ. ಡಿಪಿಆರ್ ಅನುಮತಿ ಇನ್ನು ಸಿಕ್ಕಿಲ್ಲ. ಅನುಮತಿಗಾಗಿ ಕಾಯುತ್ತಿದ್ದೇವೆ. ಅನುಮತಿ ಸಿಕ್ಕತಕ್ಷಣವೇ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮಾರ್ಚ್ 19 ಕೇವಲ ಸರ್ಕಾರಿ ಕಾರ್ಯವಿದೆ ಅಷ್ಟೇ ಎಂದರು.
ಇದನ್ನೂ ಓದಿ: ಸಿಟಿ ರವಿ ವಿರುದ್ಧ ಸಿಡಿದೆದ್ದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಕಂಡಲ್ಲಿ ಮುತ್ತಿಗೆ ಹಾಕಲು ಕರೆ
ಉರಿಗೌಡ, ನಂಜೇಗೌಡ ನಮ್ಮ ಅಭಿಮಾನದ ಸಂಕೇತ
ಇನ್ನು ಬಹು ಚರ್ಚಿತ ವಿಷಯವಾಗಿರುವ ಉರಿಗೌಡ, ನಂಜೇಗೌಡ ಕುರಿತು ಪ್ರತಿಕ್ರಿಯೆ ನೀಡಿದ್ದು, ಅವರು ಇತಿಹಾಸದಲ್ಲಿ ಇದ್ದರು ಅನ್ನೋದು ನಮ್ಮ ನಂಬಿಕೆ. ಉರಿಗೌಡ, ನಂಜೇಗೌಡ ನಮ್ಮ ಅಭಿಮಾನದ ಸಂಕೇತ. ಟಿಪ್ಪುನಂತಹ ಹಂತಕ, ಮತಾಂಧನಿಂದ ನಮ್ಮ ಮೈಸೂರು ಸಂಸ್ಥಾನವನ್ನ ರಕ್ಷಣೆ ಮಾಡಿದ್ದು ನಮ್ಮ ಹೆಮ್ಮೆ. ರಾಣಿ ಲಕ್ಷ್ಮೀ ಅಮ್ಮಣ್ಣಿಯ ರಕ್ಷಣೆ ದಳದಲ್ಲಿದ್ದವರು. ಚುನಾವಣಾ ಸಂದರ್ಭದಲ್ಲಿ ಮತವನ್ನ ಲೆಕ್ಕಕ್ಕೆ ತೆಗೆದುಕೊಂಡು ಈ ರೀತಿ ಕೀಳು ಮಟ್ಟಕ್ಕೆ ಇಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಉರಿಗೌಡ ನಂಜೇಗೌಡ ನಮ್ಮ ಹೆಮ್ಮೆ, ಗೌರವ, ಸಂತೋಷ. ಮೈಸೂರು ಸಂಸ್ಥಾನದಲ್ಲಿ ಕೆಲಸಕ್ಕೆ ಇದ್ದವನು ಸಂಸ್ಥಾನಕ್ಕೆ ದ್ರೋಹ ಮಾಡಿ ಅಧಿಕಾರ ಪಡೆದವನು ಟಿಪ್ಪು. ನಿಮಗೆ ನಾಲ್ವಡಿಯವರು ಬೇಕಾ, ಇಲ್ಲಾ ಟಿಪ್ಪು ಬೇಕಾ ಎಂದು ಪ್ರಶ್ನಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆ ಸಾಕಷ್ಟಿದೆ. ವಿಶ್ವಕ್ಕೆ ಮಾದರಿ ಆದವರನ್ನು ಯಾಕೆ ನೆನಪು ಮಾಡಿಕೊಳ್ಳುವುದಿಲ್ಲ. ಬರಿ ಇವರಿಗೆ ಟಿಪ್ಪು ಸುಲ್ತಾನನೇ ನೆನಪಾಗುತ್ತಾನೆ. ಟಿಪ್ಪು ಪದೇ ಪದೇ ಯಾಕೆ ನೆನಪಾಗುತ್ತಾನೆಂದು ನಮಗೂ ಗೊತ್ತಿದೆ ನಿಮಗೂ ಗೊತ್ತಿದೆ ಎಂದರು.
ಇದನ್ನೂ ಓದಿ: ನಮ್ಮ ನಾಯಕರು ಗೊಂದಲ ನಿವಾರಣೆ ಮಾಡಿದ್ದಾರೆ, ಎಲ್ಲವೂ ಸುಖಾಂತ್ಯವಾಗಿದೆ -ವಿ ಸೋಮಣ್ಣ
ಸಿದ್ಧರಾಮಯ್ಯ ವಿರುದ್ಧ ನಾರಾಯಣಗೌಡ ಕಿಡಿ
ಟಿಪ್ಪು ಪರ ಘಂಟಾ ಗೋಷವಾಗಿ ಹೇಳುತ್ತಾರಲ್ಲ ಅದೇ ನಮಗೆ ಆಶ್ಚರ್ಯ. ಮತದಾರನಿಗೆ ಜಾಗೃತಿ ಇದೆ. ತಿಳಿವಳಿಕೆ, ಸ್ವಾಭಿಮಾನ ಇಟ್ಟುಕೊಂಡು ಉತ್ತರ ಕೊಡುತ್ತಾರೆ. ಟಿಪ್ಪು ಕುಟುಂಬಕ್ಕೆ ಬ್ರಿಟಿಷರು ಪಿಂಚಣಿ ನೀಡಿದ ವಿಚಾರವಾಗಿ ಮಾತನಾಡಿ, ಅದು ಅವರಿಗೆ ಬಿಟ್ಟಿದ್ದು. ನಮಗೆ ಅದರ ಬಗ್ಗೆ ಪ್ರಶ್ನೆಯಿಲ್ಲ. ನಮ್ಮದು ಟಿಪ್ಪು ಮಾಡಿದ ಅನ್ಯಾಯವನ್ನ ಖಂಡಿಸುತ್ತೇವೆ. ಸಾವರ್ಕರ್ ನಮ್ಮ ದೇಶದ ಹೆಮ್ಮೆ. ಈಗಿನ ರಾಜಕಾರಣಿ ಒಂದು ದಿನ ಅಂಡಮಾನ್ನಲ್ಲಿ ಇದ್ಥು ಬರಲಿ ಗೊತ್ತಾಗುತ್ತೆ. ಯಾವತ್ತಾದರು ಸಿದ್ದರಾಮಯ್ಯನವರು ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ. ಕೇವಲ ಆ ಭಾಗ್ಯ ಕೊಟ್ಟೆ, ಈ ಭಾಗ್ಯ ಕೊಟ್ಟೆ ಅಂತ ಮಾತನಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:04 pm, Thu, 16 March 23