AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಅಧ್ಯಕ್ಷತೆಯಲ್ಲಿ ಪ್ರತಿಪಕ್ಷಗಳ ವರ್ಚ್ಯುವಲ್ ಸಭೆ: ಒಗ್ಗಟ್ಟು ಉಳಿಸಿಕೊಳ್ಳಲು ಪ್ರಯತ್ನ

ಸೋನಿಯಾಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಶಿವಸೇನೆಯ ಉದ್ಧವ್ ಠಾಕ್ರೆ, ಜೆಎಂಎಂನ ಹೇಮಂತ್ ಸೋರೆನ್ ಸೇರಿದಂತೆ ಪ್ರಮುಖರನ್ನು ಸಭೆಗೆ ಆಹ್ವಾನಿಸಲಾಗಿದೆ.

ಸೋನಿಯಾ ಅಧ್ಯಕ್ಷತೆಯಲ್ಲಿ ಪ್ರತಿಪಕ್ಷಗಳ ವರ್ಚ್ಯುವಲ್ ಸಭೆ: ಒಗ್ಗಟ್ಟು ಉಳಿಸಿಕೊಳ್ಳಲು ಪ್ರಯತ್ನ
ಸೋನಿಯಾ ಗಾಂಧಿ
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Aug 12, 2021 | 10:22 PM

Share

ದೆಹಲಿ: ಕಾಂಗ್ರೆಸ್ ಪಕ್ಷವು ಸಂಸತ್ ಅಧಿವೇಶನ ಮುಗಿದ ಬಳಿಕವೂ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಆಗಸ್ಟ್ 20ರಂದು ವಿರೋಧ ಪಕ್ಷಗಳ ನಾಯಕರ ವರ್ಚ್ಯುವಲ್ ಸಭೆ ನಡೆಸಲು ನಿರ್ಧರಿಸಿದೆ. ಸೋನಿಯಾಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಶಿವಸೇನೆಯ ಉದ್ಧವ್ ಠಾಕ್ರೆ, ಜೆಎಂಎಂನ ಹೇಮಂತ್ ಸೋರೆನ್ ಸೇರಿದಂತೆ ಪ್ರಮುಖರನ್ನು ಸಭೆಗೆ ಆಹ್ವಾನಿಸಲಾಗಿದೆ.

ಸಂಸತ್‌ನಲ್ಲಿ ಈ ಬಾರಿ ಸೋನಿಯಾಗಾಂಧಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಲೋಕಸಭೆಯಲ್ಲಿ ಒಬಿಸಿ ಮಸೂದೆ ಚರ್ಚೆ ವೇಳೆ ಅಧಿವೇಶನಕ್ಕೆ ಹಾಜರಾಗಿದ್ದರು. ಬಳಿಕ ಲೋಕಸಭಾ ಸ್ಪೀಕರ್ ಓಂಬಿರ್ಲಾ ಕರೆದಿದ್ದ ಚಹಾಕೂಟದಲ್ಲಿ ಭಾಗಿಯಾಗಿದ್ದರು. ವಿರೋಧ ಪಕ್ಷಗಳ ಗದ್ದಲದ ಪರಿಣಾಮವಾಗಿ ಸಂಸತ್‌ನ ಉಭಯ ಸದನಗಳ ಕಲಾಪ ವ್ಯರ್ಥವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ, ಬಿಜೆಪಿ ಗದ್ದಲ ಎಬ್ಬಿಸುವುದು, ಬಿಜೆಪಿ ಅಧಿಕಾರಕ್ಕೆ ಬಂದಾಗ, ಕಾಂಗ್ರೆಸ್ ಸದನದಲ್ಲಿ ಗದ್ದಲ ಎಬ್ಬಿಸುವುದು ಸಾಮಾನ್ಯ ಎನಿಸಿದೆ. ಸಂಸತ್‌ ಅಧಿವೇಶನದಲ್ಲಿ 14 ವಿರೋಧ ಪಕ್ಷಗಳು ಒಗ್ಗೂಡಿ ಗದ್ದಲ ಎಬ್ಬಿಸಿದ್ದವು. ಸಂಸತ್ ಅಧಿವೇಶನದ ವೇಳೆಯೇ ಮೋದಿ ವಿರೋಧಿ ಕ್ಯಾಂಪ್‌ನ ನಾಯಕರಾಗಲು ಕೆಲವರು ಪ್ರಯತ್ನ ಕೂಡ ನಡೆಸಿದ್ದರು. ದೇಶದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದರೆ, ವಿರೋಧ ಪಕ್ಷಗಳು ಪ್ರಬಲವಾಗಿರುತ್ತವೆ ಎಂಬ ಅಭಿಪ್ರಾಯ ವಿರೋಧ ಪಕ್ಷಗಳ ಪಾಳಯದಿಂದಲೇ ವ್ಯಕ್ತವಾಗಿದೆ.

ಸಂಸತ್ ಅಧಿವೇಶನದ ವೇಳೆ ವಿರೋಧ ಪಕ್ಷಗಳಿಂದ ಒಗ್ಗಟ್ಟು ವ್ಯಕ್ತವಾಯಿತು. ಈ ಒಗ್ಗಟ್ಟು ಕಾಪಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಇದಕ್ಕಾಗಿ ಈಗ ಆಗಸ್ಟ್ 20ರಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ವಿರೋಧ ಪಕ್ಷಗಳ ನಾಯಕರ ವರ್ಚ್ಯವಲ್ ಸಭೆ ಕರೆದಿದ್ದಾರೆ. ಈ ಸಭೆಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ, ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸೇರಿದಂತೆ 14 ವಿರೋಧ ಪಕ್ಷಗಳ ಪ್ರಮುಖ ನಾಯಕರನ್ನು ವರ್ಚ್ಯುವಲ್ ಸಭೆಗೆ ಕಾಂಗ್ರೆಸ್ ಆಹ್ವಾನಿಸಿದೆ.

ದೇಶದ ಪ್ರಸಕ್ತ ಸಮಸ್ಯೆಗಳು, ಅವುಗಳ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿನ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ. ಪೆಗಾಸಸ್ ಸ್ಪೈವೇರ್ ಬಳಕೆ, ರೈತರಿಗೆ ಸಂಬಂಧಿಸಿದ ಕೃಷಿ ಕಾಯ್ದೆ ಜಾರಿ, ಕೋವಿಡ್ ನಿರ್ವಹಣೆ, ಲಸಿಕೆಯ ಕೊರತೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಈ ಸಭೆಯ ಬಳಿಕ ದೆಹಲಿಯಲ್ಲಿ ವಿರೋಧ ಪಕ್ಷಗಳ ನಾಯಕರ ಭೋಜನಕೂಟವನ್ನು ಕಾಂಗ್ರೆಸ್ ಆಯೋಜಿಸುವ ಸಾಧ್ಯತೆಯೂ ಇದೆ. ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಯತ್ನಿಸುತ್ತಿರುವ ಕಾಂಗ್ರೆಸ್, ವಿರೋಧ ಪಕ್ಷಗಳನ್ನು ಮುನ್ನಡೆಸಲು ಪ್ರಯತ್ನಿಸುತ್ತದೆಯೇ ಎಂಬ ಪ್ರಶ್ನೆ ಕೂಡ ದೇಶದ ರಾಜಕೀಯ ವಲಯದಲ್ಲಿದೆ. ಆದರೆ, ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಸೋನಿಯಾ ಪುತ್ರ ರಾಹುಲ್ ಗಾಂಧಿ, ದಿಢೀರನೇ ಸಕ್ರಿಯರಾಗಿ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಭಾಗಿಯಾಗಿದ್ದರು. ಆಗಸ್ಟ್​ 12ರಂದು ಸಹ ಸಂಸತ್‌ನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಚೇರಿಯಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ನಡೆಸಿದ್ದರು. ಬಳಿಕ ಸಂಸತ್‌ನಿಂದ ವಿಜಯ್ ಚೌಕ್​ವರೆಗೆ ಪಾದಯಾತ್ರೆ ಬಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ, ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮನೆಯಲ್ಲಿ ಎಸ್​ಪಿ, ಬಿಎಸ್​ಪಿ, ನ್ಯಾಷನಲ್ ಕಾನ್ಫರೆನ್ಸ್, ಆಪ್, ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಭೋಜನಕೂಟಕ್ಕೆ ಸೇರಿದ್ದರು. ಈ ಸಭೆಯಲ್ಲಿ ಮಾತನಾಡಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿದ್ದಾಗ, ವಿರೋಧ ಪಕ್ಷಗಳು ಕೂಡ ಪ್ರಬಲವಾಗಿರುತ್ತಾವೆ. ಆದರೆ, ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದರು. ಅಕಾಲಿದಳ ಪಕ್ಷದ ನಾಯಕ ನರೇಶ್ ಗುಜ್ರಾಲ್, ಕಾಂಗ್ರೆಸ್ ಪಕ್ಷವು ಗಾಂಧಿ ಪರಿವಾರದ ಹಿಡಿತದಿಂದ ಹೊರಬರದೇ, ಪಕ್ಷವನ್ನು ಬಲಪಡಿಸುವುದು ಕಷ್ಟ ಎಂದು ಹೇಳಿದ್ದರು.

(Virtual Meeting of Opposition Parties Called by Congress Leader Sonia Gandhi)

Published On - 10:20 pm, Thu, 12 August 21