ಚಿಕ್ಕಮಗಳೂರು: ರಾಜಕೀಯ ಭಿನ್ನಮತಗಳನ್ನ ದೂರವಿಟ್ಟು ಲೋಕಸಭಾ ಚುನಾವಣೆಯಲ್ಲಿ (Loka Sabha Elections) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬೆಂಬಲ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸುವ ಬಗ್ಗೆ ಜಿಲ್ಲೆಯಲ್ಲಿ ಮಾತನಾಡಿದ ಅವರು, ಅನೇಕ ಪಕ್ಷಗಳು ಬೆಂಬಲಿಸುತ್ತಿದ್ದು, ಜೆಡಿಎಸ್ನಿಂದಲೂ ನಾವು ಅಪೇಕ್ಷೆ ಮಾಡುತ್ತೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಬೇಕು. ಇಂದು ಭಾರತಕ್ಕೆ ಎದ್ದುನಿಂತ್ತು ಗೌರವ ನೀಡುತ್ತಿದ್ದಾರೆ ಎದರೆ ಅದಕ್ಕೆ ಪ್ರಧಾನಿ ಮೋದಿ ಅವರೇ ಕಾರಣ. ಹೀಗಾಗಿ ರಾಜಕೀಯ ಭಿನ್ನಮತಗಳನ್ನ ದೂರ ಬಿಟ್ಟು ಬೆಂಬಲ ಕೊಡಬೇಕು. ಇಂತಹ ಅಪೇಕ್ಷೆ ಅನೇಕ ರಾಜಕೀಯ ಪಾರ್ಟಿಯಲ್ಲೂ ಇದೆ. ಈ ಅಪೇಕ್ಷೆಯನ್ನ ಜೆಡಿಎಸ್ನಿಂದಲೂ ನಿರೀಕ್ಷೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷರಿಗೆ ಶ್ರೀಗಂಧದ ಸಿತಾರ್ ಉಡುಗೊರೆ ನೀಡಿದ ಪ್ರಧಾನಿ ಮೋದಿ; ಇತರ ಗಣ್ಯರಿಗೂ ವಿಶಿಷ್ಟ ಉಡುಗೊರೆ
ದೇಶದ ಉನ್ನತಿ ಬಗ್ಗೆ ಯೋಚಿಸುವ ರಾಜಕೀಯ ಪಕ್ಷಗಳು ಪ್ರಧಾನಿ ಮೋದಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿವೆ ಎಂದು ಹೇಳಿದ ಶೋಭಾ ಕರಂದ್ಲಾಜೆ, ನೂರನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಭಾರತ ವಿಶ್ವದಲ್ಲೇ ನಂಬರ್ ಓನ್ ಆಗಿರಬೇಕು ಎಂಬುದು ಮೋದಿ ಅವರ ಆಸೆ ಎಂದರು.
ಸರ್ಕಾರ ಆರ್ಎಸ್ಎಸ್ಗೆ ನೀಡಿದ್ದ ಭೂಮಿ ತಡೆ ಹಿಡಿದ ವಿಚಾರವಾಗಿ ಮಾತನಾಡಿದ ಶೋಭಾ ಕರಂದ್ಲಾಜೆ, ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ನಿಂದ ದ್ವೇಷದ ರಾಜಕಾರಣ ಆರಂಭವಾಗಿದೆ. ಆರ್ಎಸ್ಎಸ್ಗೆ ನೀಡಿದ್ದ ಭೂಮಿ ಸರ್ಕಾರ ವಾಪಸ್ ಪಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಆರ್ಎಸ್ಎಸ್ ಯಾವುದೇ ಜಾತಿ, ಧರ್ಮದ ಪರ ಮತ್ತು ವಿರೋಧವಾಗಿ ಇಲ್ಲ. ರಾಷ್ಟ್ರದ ಜೊತೆ ಕೆಲಸ ಮಾಡುವುದು ಆರ್ಎಸ್ಎಸ್ನ ಉದ್ದೇಶವಾಗಿದೆ. ಸಾಮಾಜಿಕ ಚಟುವಟಿಕೆಗಳ ಮೂಲಕ ಉತ್ತಮ ಶಿಕ್ಷಣ ನೀಡುತ್ತಿದೆ. ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಎಸ್ಎಸ್ ಸೇವೆ ನೀಡುತ್ತದೆ. ಕಾಂಗ್ರೆಸ್ ಸರ್ಕಾರ ಇಂತಹ ದ್ವೇಷದ ರಾಜಕಾರಣ ಮಾಡಬಾರದು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ