ಬೆಂಗಳೂರು, ಅಕ್ಟೋಬರ್ 12: ತೆರಿಗೆ ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ತಾರತಮ್ಯವಾಗಿದೆ. ತೆರಿಗೆ ತಾರತಮ್ಯ ಖಂಡಿಸಿ “ನಮ್ಮ ತೆರಿಗೆ ನಮ್ಮ ಹಕ್ಕು” (Namma Terige Namma Hakku) ಎಂದು ಪ್ರತಿಭಟನೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತಿಹೆಚ್ಚು ತೆರಿಗೆ ಪಾವತಿಸುವ ನಮಗೆ ತಾರತಮ್ಯವಾಗುತ್ತಿದೆ. ನಮ್ಮ ತೆರಿಗೆ ಹಣ ಉತ್ತರ ಪ್ರದೇಶ, ದೆಹಲಿ, ಬಿಹಾರಕ್ಕೆ ಕೊಡುತ್ತಿದ್ದಾರೆ. ಆಂಧ್ರಕ್ಕಿಂತಲೂ ಕಡಿಮೆ ಹಣ ನಮಗೆ ನೀಡಿದ್ದಾರೆ. ಅವರಿಗಿಂತ ಕೀಳಾಗಿದ್ದೇವಾ? ಎಂದು ಪ್ರಶ್ನಿಸಿದರು.
ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರ ಸರ್ಕಾರದಲ್ಲಿ ಐವರು ಸಚಿವರು ನಮ್ಮವರೇ ಇದ್ದಾರೆ. ನಮ್ಮಲ್ಲೇ ಇದ್ದುಕೊಂಡು ಈಗ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಜಾಹೀರಾತಿಗೆ ವಿಪಕ್ಷಗಳು ಆಕ್ಷೇಪ ಎತ್ತಿರುವ ವಿಚಾರವಾಗಿ ಮಾತನಾಡಿದ ಅವರು, ನಮಗಿರುವ ಮಾಹಿತಿಯನ್ನು ಜಾಹಿರಾತು ರೂಪದಲ್ಲಿ ನೀಡಿದ್ದೇವೆ. ನಾವು ಮುನ್ನಡೆಯುತ್ತಿರುವ ದಾರಿಯ ಆಧಾರದ ಮೇಲೆ ಮತ್ತು ನಮ್ಮ ಭಾವನೆಗಳ ಮೇಲೆ ಜಾಹೀರಾತು ನೀಡಿದ್ದೇವೆ. ನಮ್ಮ ಸರ್ಕಾರದ ಸಾಧನೆ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡುತ್ತೇವೆ ಎಂದರು.
ಇದನ್ನೂ ಓದಿ: ನವೆಂಬರ್ 1 ರಂದು ಐಟಿಬಿಟಿ ಕಂಪನಿಗಳು ಕನ್ನಡ ಬಾವುಟ ಹಾರಿಸುವುದು ಕಡ್ಡಾಯ: ಡಿಕೆ ಶಿವಕುಮಾರ್
ಈ ವರ್ಷ ದಸರಾ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಮಳೆ-ಬೆಳೆ ಕೊಟ್ಟಿದ್ದಾಳೆ. ತಮಿಳುನಾಡಿನ ಹೋರಾಟ ಕಡಿಮೆಯಾಗಿದೆ. ಎಲ್ಲ ಡ್ಯಾಂಗಳು ತುಂಬಿವೆ. ಕಟ್ ಆಗಿದ್ದ ತುಂಗಭದ್ರಾ ಡ್ಯಾಂನ ಗೇಟ್ ಅನ್ನು ಆರು ದಿನದಲ್ಲೇ ಕೂರಿಸಿ ನೀರು ಪೋಲಾಗುತ್ತಿದ್ದದ್ದನ್ನು ನಿಲ್ಲಿಸಿದ್ದೇವೆ. ಅ.16 ಬೆಂಗಳೂರಿಗೆ ವಿಶೇಷ ದಿನವಾಗಿದೆ. ಐದನೇ ಹಂತದ ಕುಡಿಯುವ ಯೋಜನೆ ಚಾಲನೆ ಸಿಗಲಿದೆ. ಇದರಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮೈಸೂರಿನ ದಸರಾ ಲೈಟಿಂಗ್ಸ್ ಇನ್ನು ಸ್ವಲ್ಪ ದಿನಗಳ ಕಾಲ ಹಾಗೆ ಇರಲಿದೆ. ಕೋಟ್ಯಂತರ ರೂಪಾಯಿ ಅದಕ್ಕೆ ಖರ್ಚು ಮಾಡಿದ್ದೇವೆ. ನಾನು ಆ ರೀತಿಯ ಲೈಟಿಂಗ್ಸ್ ಇಲ್ಲಿವರೆಗೆ ಎಲ್ಲೂ ನೋಡಿಲ್ಲ. ಲೈಟಿಂಗ್ಸ್ ನೋಡಿ ರಾಜ್ಯದ ಜನತೆ ಸಂತೋಷ ಪಡಬೇಕು. ಸಾಂಸ್ಕೃತಿಕ ಹಬ್ಬವನ್ನ ಆಚರಿಸಬೇಕು ಎಂದು ಕರೆ ಕೊಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ