ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯ: ಮಾಧ್ಯಮ ಪ್ರಕಟಣೆ ಮೂಲಕ ಹೋರಾಟಕ್ಕೆ ಕರೆಕೊಟ್ಟ ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಂದಿನಿಂದಲೂ ಸಿಎಂ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಆರೋಪಿಸುತ್ತಲೇ ಇದ್ದಾರೆ. ಹಲವು ಬಾರಿ ವಿವಿಧ ರೀತಿಯಲ್ಲಿ ಪ್ರತಿಭಟನೆಗಳನ್ನೂ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ.

ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯ: ಮಾಧ್ಯಮ ಪ್ರಕಟಣೆ ಮೂಲಕ ಹೋರಾಟಕ್ಕೆ ಕರೆಕೊಟ್ಟ ಸಿಎಂ ಸಿದ್ದರಾಮಯ್ಯ
ಮುಡಾ ತನಿಖೆಗೆ ಅನುಮತಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಸಿದ್ದರಾಮಯ್ಯImage Credit source: PTI
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on: Oct 12, 2024 | 4:50 PM

ಬೆಂಗಳೂರು, ಅಕ್ಟೋಬರ್ 12: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತೆರಿಗೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ, ಹೋರಾಟಕ್ಕೆ ಕರೆ ನೀಡಿದ್ದಾರೆ. ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಆ ಮೂಲಕ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.

ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಕನ್ನಡಿಗರೆಲ್ಲರೂ ದನಿ ಎತ್ತಬೇಕಾಗಿದೆ. ಕೇಂದ್ರದ ಎನ್​​ಡಿಎ ಸರ್ಕಾರ ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡುತ್ತಾ ಬಂದಿರುವ ಅನ್ಯಾಯಕ್ಕೆ ಇತ್ತೀಚಿನ ತೆರಿಗೆ ಪಾಲಿನ ಹಂಚಿಕೆಯ ವಿವರಗಳೇ ಸಾಕ್ಷಿ ಎಂದು ಹೇಳಿರುವ ಸಿದ್ದರಾಮಯ್ಯ, ಅದಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನೂ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂ.

28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂಪಾಯಿ ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ನೀಡಿರುವುದು ಕೇವಲ 6,498 ಕೋಟಿ ರೂಪಾಯಿ. ಈ ಅನ್ಯಾಯದ ವಿರುದ್ಧ ಜಾತಿ-ಧರ್ಮ, ಪಕ್ಷ – ಪಂಥದ ಭೇದವಿಲ್ಲದೆ ದನಿ ಎತ್ತುವ ಶಪಥವನ್ನು ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕಾಗಿದೆ. ಇಂತಹದ್ದೊಂದು ಪ್ರಮಾಣ ವಚನ ಸ್ವೀಕಾರಕ್ಕೆ ಅನ್ಯಾಯದ ವಿರುದ್ಧ ನ್ಯಾಯದ ಗೆಲುವಿನ ಸಂಕೇತವಾದ ವಿಜಯದಶಮಿಯ ಶುಭ ದಿನ ಸಾಕ್ಷಿಯಾಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಬಿಮಾರು ರಾಜ್ಯಗಳಿಗೇಕೆ ಕರ್ನಾಟಕದ ಜನರ ಬೆವರ ಹಣ?’

ಕರ್ನಾಟಕವನ್ನು ಕಡೆಗಣಿಸುವಂತಹ ಅನ್ಯಾಯವನ್ನು ನಾವೇನು ಮಾಡಿದ್ದೇವೆ? ಎಂದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನೂ ಕೇಂದ್ರ ಸರ್ಕಾರವನ್ನು ಕೇಳಬೇಕಾಗಿದೆ. ಬಿಮಾರು ರಾಜ್ಯಗಳೆಂದೇ ಕುಖ್ಯಾತಿ ಪಡೆದಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ 31,962 ಕೋಟಿ ರೂ, ಬಿಹಾರಕ್ಕೆ 17,921 ಕೋಟಿ ರೂ, ಮಧ್ಯಪ್ರದೇಶಕ್ಕೆ 13,987 ಕೋಟಿ ರೂ. ಮತ್ತು ರಾಜಸ್ಥಾನಕ್ಕೆ 10,737 ಕೋಟಿ ರೂಪಾಯಿಯಷ್ಟು ತೆರಿಗೆ ಪಾಲನ್ನು ನೀಡಲಾಗಿದೆ. ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಅಭಿವೃದ್ಧಿ ಪಥದಲ್ಲಿ ಹಿಮ್ಮುಖವಾಗಿ ಸಾಗುತ್ತಿರುವ ಈ ರಾಜ್ಯಗಳಿಗಾಗಿ ಕನ್ನಡಿಗನ ಬೆವರ ಗಳಿಕೆ ಯಾಕೆ ಪೋಲಾಗಬೇಕು ಎನ್ನುವುದು ನಮ್ಮ ಪ್ರಶ್ನೆಯಾಗಿದೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ 17.93, ಬಿಹಾರಕ್ಕೆ 10.05, ರಾಜದ್ಥಾನಕ್ಕೆ 6.02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಕೇವಲ ಶೇ 3.6. ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ. ಅಭಿವೃದ್ಧಿಶೀಲ ರಾಜ್ಯವನ್ನು ಶಿಕ್ಷಿಸಿ, ದುರಾಡಳಿತ ನಡೆಸುತ್ತಿರುವ ರಾಜ್ಯಗಳನ್ನು ಪುರಸ್ಕರಿಸುವ ತೆರಿಗೆ ಹಂಚಿಕೆ ಮಾನದಂಡವನ್ನೇ ಬದಲಾಯಿಸಬೇಕೆಂದು ನಾವು ಒತ್ತಾಯಿಸುತ್ತಲೇ ಬಂದಿದ್ದರೂ ಕೇಂದ್ರ ಸರ್ಕಾರ ಕಿವುಡಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ವಿರುದ್ಧ ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ: ಡಿಕೆ ಶಿವಕುಮಾರ್​

15 ನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.713 ಎಂದು ನಿಗದಿಪಡಿಸಿತ್ತು. ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.647ಕ್ಕೆ ಇಳಿಸಿತು. ಇದರಿಂದ 2021-26 ರವರೆಗಿನ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು 62,275 ಕೋಟಿ ರೂಪಾಯಿಯನ್ನು ಕರ್ನಾಟಕ ಕಳೆದುಕೊಂಡಿದೆ. ಈ ಅನ್ಯಾಯವನ್ನು ಪರಿಗಣಿಸಿದ್ದ ಹಣಕಾಸು ಆಯೋಗ ವಿಶೇಷ ಅನುದಾನದ ರೂಪದಲ್ಲಿ 5,495 ಕೋಟಿ ರೂ. ನೀಡುವಂತೆ ಶಿಫಾರಸು ಮಾಡಿತ್ತು. ಇದನ್ನು ಕೂಡಾ ಕೇಂದ್ರ ಸರ್ಕಾರ ನೀಡದೆ ಅನ್ಯಾಯ ಎಸಗಿದೆ. ಈ ಎಲ್ಲ ನಷ್ಟಗಳನ್ನು ಸೇರಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ 79,770 ಕೋಟಿ ರೂ. ನಷ್ಟವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ