Paytm shares: ಪಾತಾಳಕ್ಕೆ ಕುಸಿದ ಪೇಟಿಎಂ ಷೇರು ಮೌಲ್ಯ; ಸಂಕಷ್ಟದಲ್ಲಿ ಡಿಜಿಟಲ್ ಪಾವತಿ ಕಂಪನಿ

| Updated By: Ganapathi Sharma

Updated on: Nov 24, 2022 | 2:25 PM

ಐಪಿಒ ಮಾರುಕಟ್ಟೆಯು ಟೆಕ್ ಸ್ಟಾರ್ಟ್​ಅಪ್​ಗಳಿಂದ ಆಕರ್ಷಿತವಾಗುತ್ತಿರುವ ಈ ಸಂದರ್ಭದಲ್ಲೇ ಪೇಟಿಎಂ ಷೇರು ಮೌಲ್ಯ ಪಾತಾಳಕ್ಕಿಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ಹೊಸದಾಗಿ ಐಪಿಒಕ್ಕೆ ಮುಂದಾಗಿರುವ ಟೆಕ್ ಸ್ಟಾರ್ಟ್​ಅಪ್​ಗಳ ಆತ್ಮವಿಶ್ವಾಸ ಕುಂದಿಸುವ ಭೀತಿ ಸೃಷ್ಟಿಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Paytm shares: ಪಾತಾಳಕ್ಕೆ ಕುಸಿದ ಪೇಟಿಎಂ ಷೇರು ಮೌಲ್ಯ; ಸಂಕಷ್ಟದಲ್ಲಿ ಡಿಜಿಟಲ್ ಪಾವತಿ ಕಂಪನಿ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಪೇಟಿಎಂ (Paytm) ಷೇರು ಮೌಲ್ಯದಲ್ಲಿ ಶೇಕಡಾ 75ರಷ್ಟು ಕುಸಿತವಾಗಿದೆ. ಇದು ದೇಶದ ಅತಿದೊಡ್ಡ ಡಿಜಿಟಲ್ ಪಾವತಿ ಸೇವೆ ಒದಗಿಸುತ್ತಿರುವ ಪೇಟಿಎಂ ಒಡೆತನ ಹೊಂದಿರುವ ‘ಒನ್ 97 ಕಮ್ಯೂನಿಕೇಷನ್ಸ್​ (One97 Communications)’ ಅನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆಯ (IPO) ಮೂಲಕ ಷೇರುಗಳ ಮಾರಾಟ ಮಾಡಿದ್ದ ‘ಒನ್ 97 ಕಮ್ಯೂನಿಕೇಷನ್ಸ್​’ಗೆ ಲಾಕ್​ ಇನ್ ಅವಧಿ (ಐಪಿಒದಲ್ಲಿ ಖರೀದಿಸಿದ ಷೇರುಗಳ ಮಾರಾಟಕ್ಕೆ ನಿರ್ದಿಷ್ಟ ಅವಧಿಗೆ ನೀಡಿರುವ ತಡೆ) ಮುಗಿಯುತ್ತಿದ್ದಂತೆ ಕಷ್ಟದ ದಿನಗಳು ಆರಂಭವಾಗಿದೆ.

ಪೇಟಿಎಂ ಷೇರು ಮೌಲ್ಯ ಒಂದು ವರ್ಷದ ಹಿಂದಿನ ಅದರ ಮಾರುಕಟ್ಟೆ ಮೌಲ್ಯಕ್ಕಿಂತ ಶೇಕಡಾ 75ರಷ್ಟು ಇಳಿಕೆಯಾಗಿದೆ. ಒಂದು ವರ್ಷದ ಹಿಂದೆ 2.4 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಕಂಪನಿ ಮಾರಾಟ ಮಾಡಿತ್ತು. ಇದು ಜಾಗತಿಕ ಮಟ್ಟದಲ್ಲೇ ಅತಿದೊಡ್ಡ ಕುಸಿತ ಎಂದು ‘ಬ್ಲೂಮ್​ಬರ್ಗ್’ ವರದಿ ಉಲ್ಲೇಖಿಸಿದೆ. ಐಪಿಒ ಲಾಕ್ ಇನ್ ಅವಧಿ ಮುಗಿದ ಬೆನ್ನಲ್ಲೇ ಸ್ಪೇನ್​ನ ಬ್ಯಾಂಕಿಯಾ ಎಸ್​ಎ ಷೇರು ಮೌಲ್ಯದಲ್ಲಿ 2012ರಲ್ಲಿ ಶೇಕಡಾ 82ರಷ್ಟು ಕುಸಿತವಾಗಿತ್ತು.

ಟೆಕ್ ಸ್ಟಾರ್ಟ್​ಅಪ್​ಗಳಿಗೆ ಆತಂಕ

ಐಪಿಒ ಮಾರುಕಟ್ಟೆಯು ಟೆಕ್ ಸ್ಟಾರ್ಟ್​ಅಪ್​ಗಳಿಂದ ಆಕರ್ಷಿತವಾಗುತ್ತಿರುವ ಈ ಸಂದರ್ಭದಲ್ಲೇ ಪೇಟಿಎಂ ಷೇರು ಮೌಲ್ಯ ಪಾತಾಳಕ್ಕಿಳಿದಿದೆ. ಇದು ಹೊಸದಾಗಿ ಐಪಿಒಕ್ಕೆ ಮುಂದಾಗಿರುವ ಟೆಕ್ ಸ್ಟಾರ್ಟ್​ಅಪ್​ಗಳ ಆತ್ಮವಿಶ್ವಾಸ ಕುಂದಿಸಲಿದೆ. ಅವುಗಳನ್ನು ಆತಂಕಕ್ಕೀಡುಮಾಡಲಿದೆ ಎಂದು ವರದಿ ತಿಳಿಸಿದೆ.

ಕಳೆದ ವಾರವೇ ಆರಂಭವಾಗಿದ್ದ ಕುಸಿತದ ಟ್ರೆಂಡ್

ಪೇಟಿಎಂ ಷೇರು ಮೌಲ್ಯ ಕುಸಿತದ ಟ್ರೆಂಡ್ ಕಳೆದ ವಾರವೇ ಆರಂಭವಾಗಿತ್ತು. ಸುಮಾರು 21.5 ಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡುವುದಾಗಿ ಜಪಾನ್​ನ ಸಾಫ್ಟ್​ಬ್ಯಾಂಕ್ ಘೋಷಿಸಿತ್ತು. ಇದರ ಬೆನ್ನಲ್ಲೇ ಹೂಡಿಕೆದಾರರು ಪೇಟಿಎಂ ಷೇರುಗಳ ಮಾರಾಟಕ್ಕೆ ಮುಗಿಬಿದ್ದಿದ್ದರು. ಇದು ಷೇರುಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಮೌಲ್ಯ ಮತ್ತಷ್ಟು ಕುಸಿಯಲು ಕಾರಣವಾಗಿತ್ತು. ಸದ್ಯ ಐಪಿಒ ದರ 2,150 ರೂ.ಗೆ ತುಲನೆ ಮಾಡಿದರೆ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 79ರಷ್ಟು ಕುಸಿತವಾಗಿದೆ ಎಂದು ವರದಿ ಹೇಳಿದೆ.

ಒಳ್ಳೆಯದ ದಿನಗಳು ಮುಂದಿವೆ!

ಪೇಟಿಎಂ ಷೇರು ಮೌಲ್ಯ ಸತತವಾಗಿ ಕುಸಿಯುತ್ತಲೇ ಇದ್ದರೂ ಕಂಪನಿಯ ಬಗ್ಗೆ ಹೂಡಿಕೆ ಸಲಹಾ ಕಂಪನಿ ಐಸಿಐಸಿಐ ಸೆಕ್ಯುರಿಟೀಸ್ ಇತ್ತೀಚೆಗೆ ಭರವಸೆ ವ್ಯಕ್ತಪಡಿಸಿತ್ತು. ಮೊದಲಿನಿಂದಲೂ ಪೇಟಿಎಂ ಷೇರುಗಳು ಕುಸಿತದ ಹಾದಿಯಲ್ಲೇ ಇವೆ. ಆದರೆ, 24ನೇ ಹಣಕಾಸು ವರ್ಷದ ಆರಂಭದ ವೇಳೆ ಷೇರುಗಳ ಮೌಲ್ಯದಲ್ಲಿ ಚೇತರಿಕೆಯಾಗುವ ಸಾಧ್ಯತೆ ಇದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ