ಮುಂಬೈ: ಬಿಎಸ್ಇ ಷೇರುಪೇಟೆಯಲ್ಲಿ ಪೇಟಿಎಂ ಷೇರು (Paytm shares) ಮೌಲ್ಯ ಗುರುವಾರ ಶೇಕಡಾ 9ರಷ್ಟು ಕುಸಿದಿದೆ. ಸುಮಾರು 21.5 ಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ‘ಒನ್ 97 ಕಮ್ಯೂನಿಕೇಷನ್ಸ್ಗೆ (One97 Communications)’ ಮಾರಾಟ ಮಾಡುವುದಾಗಿ ಸಾಫ್ಟ್ಬ್ಯಾಂಕ್ (Softbank) ಘೋಷಿಸಿದ್ದೇ ಷೇರು ಮೌಲ್ಯದಲ್ಲಿ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಇದರ ಬೆನ್ನಲ್ಲೇ ಹೂಡಿಕೆದಾರರು ಪೇಟಿಎಂ ಷೇರುಗಳ ಮಾರಾಟಕ್ಕೆ ಮುಗಿಬಿದ್ದಿದ್ದಾರೆ. ಸದ್ಯ ಪೇಟಿಎಂ ಷೇರು 560 ರೂ. ಮುಖಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ಒಟ್ಟು 2.9 ಕೋಟಿ ಷೇರುಗಳು ಇಂದಿನ (ಗುರುವಾರ) ವಹಿವಾಟಿನಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ತನ್ನ ಘಟಕ ವಿಷನ್ ಫಂಡ್ (Vision Fund) ಕಳೆದ ಆರು ತಿಂಗಳುಗಳಲ್ಲಿ ಸುಮಾರು 50 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದರಿಂದ ಸಾಫ್ಟ್ಬ್ಯಾಂಕ್ ಷೇರುಗಳ ಮಾರಾಟ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಪೇಟಿಎಂನ ಐಪಿಒ (ಇನಿಷಿಯಲ್ ಪಬ್ಲಿಕ್ ಆಫರಿಂಗ್) ಲಾಕ್ ಇನ್ ಪಿರಿಯಡ್ ಮುಗಿದ ಬೆನ್ನಲ್ಲೇ ಷೇರುಗಳ ಮಾರಾಟದ ಮಾಹಿತಿ ಬಹಿರಂಗವಾಗಿದೆ. ‘ಒನ್ 97 ಕಮ್ಯೂನಿಕೇಷನ್ಸ್’ ಷೇರುಗಳು ಬುಧವಾರ ಶೇಕಡಾ 4ರಷ್ಟು ಕುಸಿತವಾಗಿ 601 ರೂ.ನಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇಂಟ್ರಾಡೇ ಸೆಷನ್ನಲ್ಲಿ ಇದು 5 ತಿಂಗಳ ಕನಿಷ್ಠಕ್ಕೆ ಕುಸಿದಿದೆ. ಪೇಟಿಎಂ ಷೇರಿನ ಆರಂಭಿಕ ದರ 2,150 ರೂ. ಆಗಿತ್ತು. ಆದರೆ, ಅದೀಗ ಶೇಕಡಾ 72ರಷ್ಟು ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.
ಮುಂದಿನ ಹಣಕಾಸು ವರ್ಷದಲ್ಲಿ ಚೇತರಿಸಲಿದೆ ಪೇಟಿಎಂ
ಮೊದಲಿನಿಂದಲೂ ಪೇಟಿಎಂ ಷೇರುಗಳು ಕುಸಿತದ ಹಾದಿಯಲ್ಲೇ ಇದ್ದರೂ ಐಸಿಐಸಿಐ ಸೆಕ್ಯುರಿಟೀಸ್ ಅಭಿಪ್ರಾಯದ ಪ್ರಕಾರ, 24ನೇ ಹಣಕಾಸು ವರ್ಷದ ಆರಂಭದ ವೇಳೆ ಷೇರುಗಳ ಮೌಲ್ಯದಲ್ಲಿ ಚೇತರಿಕೆಯಾಗುವ ಸಾಧ್ಯತೆ ಇದೆ.
ಉತ್ತಮ ಗಳಿಕೆಯೊಂದಿಗೆ ಮಾರ್ಜಿನ್ ಪ್ರೊಫೈಲ್ನಲ್ಲಿ ಸ್ಥಿರವಾದ ಸುಧಾರಣೆಯು ಮುಂದಿನ ವರ್ಷ ಲಾಭದಾಯಕ ವಹಿವಾಟು ನಡೆಸಬಹುದು ಎಂಬ ಸುಳಿವು ನೀಡಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ಹೇಳಿದೆ. 1,285ರ ಟಾರ್ಗೆಟ್ ದರದೊಂದಿಗೆ ಷೇರುಗಳನ್ನು ಖರೀದಿಸಬಹುದು. ಇದು ಬುಧವಾರದ ಕ್ಲೋಸಿಂಗ್ ಅವಧಿಯ ಮುಖಬೆಲೆ 601.45 ರೂ.ಗಿಂತ ಶೇಕಡಾ 113.65ರಷ್ಟು ಹೆಚ್ಚಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಷೇರುಪೇಟೆಯಲ್ಲಿ ಅನಿಶ್ಚಿತತೆ
ಷೇರುಪೇಟೆಯಲ್ಲಿ ಕಳೆದ ಕೆಲವು ದಿನಗಳಿಂದ ಅನಿಶ್ಚಿತತೆ ಮುಖಮಾಡಿದೆ. ಬುಧವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 62 ಸಾವಿರ ಗಡಿ ದಾಟಿತ್ತು. ಆದರೆ ಮತ್ತೆ ಇಳಿಕೆಯೊಂದಿಗೆ ವಹಿವಾಟು ಮುಗಿಸಿತ್ತು. ನಿಫ್ಟಿಯೂ ಕುಸಿತ ಕಂಡಿತ್ತು. ವಿದೇಶಿ ಹೂಡಿಕೆದಾರರು ಒಮ್ಮೆ ದೇಶೀಯ ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಮತ್ತೆ ಹೂಡಿಕೆ ವಾಪಸ್ ಪಡೆಯುತ್ತಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಈ ಏರಿಳಿತದ ಟ್ರೆಂಡ್ ಕೆಲವು ದಿನಗಳ ಮಟ್ಟಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದಿದ್ದಾರೆ ಮಾರುಕಟ್ಟೆ ತಜ್ಞರು. ಕೆಲವು ದಿನಗಳ ಹಿಂದಷ್ಟೇ ಎಲ್ಐಸಿ ಷೇರು ಮೌಲ್ಯದಲ್ಲಿ ಜಿಗಿತವಾಗಿದ್ದನ್ನು ಗಮನಿಸಬಹುದು. ಐಪಿಒ ಆದಾಗಿನಿಂದಲೂ ಕಂಪನಿಯ ಷೇರುಗಳ ಮೌಲ್ಯದಲ್ಲಿ ಏರಿಕೆಯೇ ಕಂಡುಬಂದಿರಲಿಲ್ಲ. ತಿಂಗಳುಗಳ ಬಳಿಕ ಮೊದಲ ಬಾರಿಗೆ ಷೇರು ಮೌಲ್ಯದಲ್ಲಿ ಹೆಚ್ಚಳ ಕಂಡುಬಂದಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ