Bikaji Share Price: ಷೇರುಪೇಟೆಯಲ್ಲಿ ಬಿಕಾಜಿ ಫುಡ್ಸ್ ಉತ್ತಮ ಆರಂಭ; ಇಲ್ಲಿದೆ ವಿವರ
Bikaji Foods International: ಎನ್ಎಸ್ಇಯಲ್ಲಿ ಬಿಕಾಜಿ ಫುಡ್ಸ್ ಇಂಟರ್‌ನ್ಯಾಷನಲ್ ಮೊದಲ ವಹಿವಾಟಿನಲ್ಲೇ ಶೇಕಡಾ 8ರಷ್ಟು ಹೆಚ್ಚಳವಾಗಿ 322.80 ರೂ.ನಲ್ಲಿ ವಹಿವಾಟು ನಡೆಸಿದೆ. ಬಿಎಸ್ಇಯಲ್ಲಿ ಶೇಕಡಾ 7ರ ಮೌಲ್ಯ ವೃದ್ಧಿಯೊಂದಿಗೆ 321.15 ರೂ.ನಲ್ಲಿ ವಹಿವಾಟು ನಡೆಸಿದೆ.
ನವದೆಹಲಿ: ಬಿಕಾಜಿ ಫುಡ್ಸ್ ಇಂಟರ್‌ನ್ಯಾಷನಲ್ (Bikaji Foods International) ಕಂಪನಿಯ ಷೇರುಗಳು ಬುಧವಾರ ಇನೀಷಿಯಲ್ ಪಬ್ಲಿಕ್ ಆಫರಿಂಗ್ (IPO) ದರಕ್ಕಿಂತಲೂ ಉತ್ತಮ ವಹಿವಾಟು ದಾಖಲಿಸುವ ಸುಳಿವು ನೀಡಿದೆ. ಕಂಪನಿಯ ಷೇರಿಗೆ 300 ರೂ. ಐಪಿಒ ದರ ನಿಗದಿಪಡಿಸಲಾಗಿತ್ತು. ಎನ್ಎಸ್ಇಯಲ್ಲಿ ಇದು ಮೊದಲ ವಹಿವಾಟಿನಲ್ಲೇ ಶೇಕಡಾ 8ರಷ್ಟು ಹೆಚ್ಚಳವಾಗಿ 322.80 ರೂ.ನಲ್ಲಿ ವಹಿವಾಟು ನಡೆಸಿದೆ. ಬಿಎಸ್ಇಯಲ್ಲಿ ಶೇಕಡಾ 7ರ ಮೌಲ್ಯ ವೃದ್ಧಿಯೊಂದಿಗೆ 321.15 ರೂ.ನಲ್ಲಿ ವಹಿವಾಟು ನಡೆಸಿದೆ.
ಷೇರುಪೇಟೆಯಲ್ಲಿ ಲಿಸ್ಟಿಂಗ್ಗೆ ಬರುವುದಕ್ಕೂ ಮುನ್ನ, ಬಿಕಾಜಿ ಫುಡ್ಸ್ ಇಂಟರ್‌ನ್ಯಾಷನಲ್‌ನ ಷೇರುಗಳು ಗ್ರೇ ಮಾರ್ಕೆಟ್ನಲ್ಲಿ 25-30 ರೂ. ಪ್ರೀಮಿಯಂನಲ್ಲಿ ವಹಿವಾಟು ನಡೆಸಿದ್ದವು. ಬಿಕಾಜಿ ಫುಡ್ಸ್ ಇಂಟರ್‌ನ್ಯಾಷನಲ್ ಭಾರತದ ಮೂರನೇ ಅತಿದೊಡ್ಡ ತಿಂಡಿ ತಯಾರಿಕಾ ಕಂಪನಿಯಾಗಿದೆ. ಕಂಪನಿಯು ಪ್ಯಾಕೇಜ್ಡ್ ಸ್ವೀಟ್ಸ್, ಹಪ್ಪಳ, ಪಾಶ್ಚಿಮಾತ್ಯ ಶೈಲಿಯ ತಿಂಡಿಗಳು ಹಾಗೂ ಇತರ ತಿನಿಸುಗಳನ್ನು ಮಾರಾಟ ಮಾಡುತ್ತಿದೆ.
881 ಕೋಟಿ ರೂ. ಮೊತ್ತದ ಐಪಿಒ
ಬಿಕಾಜಿ ಫುಡ್ಸ್ ಇಂಟರ್‌ನ್ಯಾಷನಲ್ ಸುಮಾರು 881 ಕೋಟಿ ರೂ. ಮೊತ್ತದ ಐಪಿಒ ಹಮ್ಮಿಕೊಂಡಿದೆ. ಪ್ರತಿ ಷೇರು 285-300 ರೂ.ನಂತೆ ಮಾರಾಟಕ್ಕೆ ಇಡಲಾಗಿದೆ. 2,93,73,984 ಈಕ್ವಿಟಿ ಷೇರುಗಳ ಮಾರಾಟಕ್ಕೆ ಕಂಪನಿ ನಿರ್ಧರಿಸಿದೆ. ಇದಕ್ಕೆ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಗುತ್ತಿದೆ.
ಬಿಕಾಜಿ ಆದಾಯ ಹೆಚ್ಚಳ
ಬಿಕಾಜಿ ಫುಡ್ಸ್ ಇಂಟರ್‌ನ್ಯಾಷನಲ್‌ನ ಪ್ರಸಕ್ತ ಹಣಕಾಸು ವರ್ಷದ ಆದಾಯ ಶೇಕಡಾ 23ರಷ್ಟು ಹೆಚ್ಚಾಗಿ 1,610.96 ಕೋಟಿ ಆಗಿದೆ. ಕಳೆದ ವರ್ಷ ಕಂಪನಿಯ ಆದಾಯ 1,310.75 ಕೋಟಿ ಆಗಿತ್ತು. ಜೂನ್ 30ಕ್ಕೆ ಕೊನೆಗೊಂಡಂತೆ ಮೂರು ತಿಂಗಳ ಕಾರ್ಯಾಚರಣೆ ಆದಾಯ 419.16 ಕೋಟಿ ಆಗಿತ್ತು. ನಿವ್ವಳ ಲಾಭ 15.7 ಕೋಟಿ ರೂ. ಆಗಿತ್ತು.
ಎಷ್ಟು ಷೇರುಗಳಿಗೆ ಸಲ್ಲಿಕೆಯಾಗಿದೆ ಬಿಡ್?
ಎನ್ಎಸ್ಇಯಲ್ಲಿ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಒಟ್ಟು 881.22 ಕೋಟಿ ರೂ. ಮೊತ್ತದ 2,06,36,790 ಷೇರುಗಳನ್ನು ಐಪಿಒಗೆ ಇಡಲಾಗಿದೆ. ಆದರೆ, ಈಗಾಗಲೇ 55,04,00,900 ಷೇರುಗಳಿಗೆ ಬಿಡ್ಡಿಂಗ್ ಸಲ್ಲಿಕೆಯಾಗಿದೆ. ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಮೀಸಲಾಗಿರುವ ಕೋಟಾದಲ್ಲಿಯೂ ನಿಗದಿಗಿಂತ 80.63 ಪಟ್ಟು ಬೇಡಿಕೆ ದಾಖಲಾಗಿದೆ. ರಿಟೇಲ್ ಇಂಡಿವಿಜುವಲ್ ಇನ್ವೆಸ್ಟರ್ಗಳು 4.77 ಪಟ್ಟು ಹೆಚ್ಚು ಷೇರುಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:09 am, Wed, 16 November 22