ಮುಂಬೈ: ಭಾರತದ ಷೇರು ಮಾರುಕಟ್ಟೆಗಳು (Indian Stock Markets_ ಏಪ್ರಿಲ್ 10, ಸೋಮವಾರ ಸಕಾರಾತ್ಮಕ ಗತಿ ಪಡೆದಿವೆ. ಬಿಎಸ್ಇ ಸೆನ್ಸೆಕ್ಸ್, ಎನ್ಎಸ್ಇ ನಿಫ್ಟಿ ಮಾರುಕಟ್ಟೆಗಳು ಏರುಗತಿ ಪಡೆದಿವೆ. ಸೋಮವಾರ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 123 ಅಂಕಗಳಷ್ಟು ಗಳಿಕೆ ಮಾಡಿ 60,000 ಅಂಕಗಳ ಸಮೀಪಕ್ಕೆ ಹೋಗಿದೆ. ಇನ್ನು, ನಿಫ್ಟಿ ಮಾರುಕಟ್ಟೆಯಲ್ಲೂ ಮಿಂಚಿನ ಸಂಚಾರ ಆಗುತ್ತಿದೆ. ನಿಫ್ಟಿ 50 ಸೂಚ್ಯಂಕ 39.80 ಅಂಕಗಳ ಹೆಚ್ಚಳ ಕಂಡು 17,638.95 ಅಂಕಗಳ ಮಟ್ಟಕ್ಕೆ ಹೋಗಿದೆ. ಬ್ಯಾಂಕ್ ನಿಫ್ಟಿ, ಅಂದರೆ ನಿಫ್ಟಿ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಪ್ರಮುಖ ಬ್ಯಾಂಕುಗಳ ಷೇರುಗಳು ಹೂಡಿಕೆದಾರರಿಗೆ ಫೇವರಿಟ್ ಎನಿಸಿದೆ. ನಿಫ್ಟಿ 50 ಸೂಚ್ಯಂಕದಲ್ಲಿ ಟಾಟಾ ಮೋಟಾರ್ಸ್, ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್, ಟೈಟಾನ್ ಮತ್ತು ಓಎನ್ಜಿಸಿ ಕಂಪನಿಗಳ ಷೇರುಗಳು ಅತಿಹೆಚ್ಚು ಬೇಡಿಕೆ ಪಡೆದಿವೆ. ಇನ್ನು, ಏಷ್ಯನ್ ಪೇಂಟ್ಸ್, ಮಾರುತಿ, ಬ್ರಿಟಾನಿಯಾ, ಇಂಡಸ್ಇಂಡ್ ಬ್ಯಾಂಕ್, ಎಸ್ಬಿಐ ಲೈಫ್ ಕಂಪನಿಗಳ ಷೇರುಗಳು ಇಳಿಮುಖಗೊಂಡಿವೆ.
ವಿದೇಶೀ ಪೋರ್ಟ್ಫೋಲಿಯೋ ಇನ್ವೆಸ್ಟರ್ಗಳು ಭಾರತದ ಷೇರುಗಳ ಮೇಲೆ ಹೂಡಿಕೆ ಮಾಡಲು ಮುಗಿಬೀಳುತ್ತಿರುವುದು ಒಟ್ಟಾರೆ ಷೇರು ಮಾರುಕಟ್ಟೆಗಳ ಅಂಕ ಗಳಿಕೆಗೆ ಕಾರಣವಾಗಿದೆ. ಹಾಗೆಯೇ, 2022-23ರ ಹಣಕಾಸು ವರ್ಷ ಮುಗಿದಿರುವುದರಿಂದ ಹಲವು ಕಂಪನಿಗಳ ಲಭ ನಷ್ಟದ ವರದಿಗಳು ಬಂದು ಹೂಡಿಕೆದಾರರ ಗಮನ ಸೆಳೆದಿವೆ. ಲಾಭ ತೋರಿಸಿರುವ ಕಂಪನಿಗಳ ಷೇರುಗಳಿಗೆ ಸಹಜವಾಗಿಯೇ ಉತ್ತಮ ಬೇಡಿಕೆ ಬಂದಿದೆ. ಇಂಥ ಕೆಲ ಕಂಪನಿಯ ಷೇರುಗಳಿಗೆ ನೀವು ಈಗಲೇ ಹೂಡಿಕೆ ಮಾಡುವುದಿದ್ದರೆ ಜಾಣತನದ ನಿರ್ಧಾರವಾಗಬಹುದು. ಇಂಥ ಸ್ಟಾಕುಗಳ ಬಗ್ಗೆ ಒಂದು ಮಾಹಿತಿ ಇಲ್ಲಿದೆ….
ಟಾಟಾ ಮೋಟಾರ್ಸ್: ಈ ಕಂಪನಿಯ ಜಾಗತಿಕ ಮಾರಾಟದಲ್ಲಿ ಶೇ. 8ರಷ್ಟು ಹೆಚ್ಚಳವಾಗಿದೆ. ಅದರ ಜಾಗ್ವರ್ ಲ್ಯಾಂಡ್ ರೋವರ್ ಕಾರು ಉತ್ತಮ ಮಾರಾಟ ಕಂಡಿದೆ. ಗೋಲ್ಡ್ಮನ್ ಸಾಕ್ಸ್ ಎಂಬ ಬ್ರೋಕರೇಜ್ ಕಂಪನಿ ಟಾಟಾ ಮೋಟಾರ್ಸ್ ಷೇರಿಗೆ ‘Buy’ (ಖರೀದಿ) ಸಿಗ್ನಲ್ ಕೊಟ್ಟಿದೆ. ಇದರ ಪರಿಣಾಮವೋ ಎಂಬಂತೆ ಟಾಟಾ ಮೋಟಾರ್ಸ್ನ ಷೇರು ಬೆಲೆ ಏಪ್ರಿಲ್ 10ರಂದು ಶೇ. 8ರಷ್ಟು ಹೆಚ್ಚಾಗಿ ಹೋಗಿದೆ. ಮುಂದೆಯೂ ಇದು ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.
ಇದನ್ನೂ ಓದಿ: CashKaro: ಹನಿಮೂನ್ ವೇಳೆ ಬಂದ ಐಡಿಯಾ: ಸ್ವಾತಿ ಭಾರ್ಗವರ ಕ್ಯಾಷ್ಕರೋ ಕಂಪನಿಗೆ ಇವತ್ತು ಭರ್ಜರಿ ಆದಾಯ
ಟೈಟಾನ್: ವಾಚ್ ತಯಾರಕಾ ಕಂಪನಿ ಟೈಟಾನ್ ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ ಅವಧಿಯಲ್ಲಿ ಶೇ. 25ಕ್ಕೂ ಹೆಚ್ಚು ಆದಾಯ ವೃದ್ಧಿ ತೋರಿಸಿದೆ. ಅದರ ಪ್ರಮುಖ ಬ್ಯುಸಿನೆಸ್ ಆದ ವಾಚು ವ್ಯವಹಾರದಲ್ಲಿ ಶೇ. 41ರಷ್ಟು ವೃದ್ಧಿಯಾಗಿದೆ. ಎಮರ್ಜಿಂಗ್ ಬಿಸಿನೆಸ್ ಸೆಕ್ಟರ್ಗಳಲ್ಲಂತೂ ಟೈಟಾನ್ ಶೇ. 84ರಷ್ಟು ಆದಾಯ ಹೆಚ್ಚಿಸಿಕೊಂಡಿದೆ. ಇನ್ನು, ಆಭರಣ ಉದ್ಯಮದಲ್ಲಿ ಶೇ. 23ರಷ್ಟು ಹೆಚ್ಚು ಆದಾಯ ಮಾಡಿದೆ ಟೈಟಾನ್. ಟೈಟಾನ್ ಮಾಲೀಕತ್ವದಲ್ಲಿ ತಾನಿಷ್ಕ್ ಜಿವೆಲರ್ಸ್ ಕಂಪನಿ ಇದೆ. ಟೈಟಾನ್ ಆದಾಯ ಹೆಚ್ಚಳದ ವರ್ತಮಾನ ಬರುತ್ತಿದ್ದಂತೆಯೇ ಅದರ ಷೇರುಗಳೂ ಒಳ್ಳೆಯ ಬೇಡಿಕೆ ಪಡೆಯುತ್ತಿವೆ. ಅದರ ಒಂದು ಷೇರು ಬೆಲೆ 2,572 ರುಪಾಯಿ ಇದೆ.
ಎಲ್ ಅಂಡ್ ಟಿ: ಲಾರ್ಸನ್ ಅಂಡ್ ಟೌಬ್ರೋ (L & T) ಎಂಬ ಪ್ರಮುಖ ಎಂಜಿನಿಯರಿಂಗ್ ಕಂಪನಿ ಒಳ್ಳೆಯ ಪ್ರಾಜೆಕ್ಟ್ ಪಡೆಯುವ ಹಾದಿಯಲ್ಲಿದೆ. ನ್ಯೂ ಡೆಲ್ಲಿ ರೈಲ್ವೆ ನಿಲ್ದಾಣದ ಮರು ಅಭಿವೃದ್ಧಿಗೆ ಕರೆಯಲಾದ ಬಿಡ್ಡಿಂಗ್ನಲ್ಲಿ ಬಿಡ್ ಸಲ್ಲಿಸಿರುವವರ ಪೈಕಿ ಎಲ್ ಅಂಡ್ ಟಿ ಅತಿ ಕಡಿಮೆ ಹಣ ಕೋಟ್ ಮಾಡಿರುವುದು. ಈ ದೊಡ್ಡ ಯೋಜನೆಗೆ ಎಲ್ ಅಂಡ್ ಟಿ 8,740 ಕೋಟಿ ರೂ ಬಿಡ್ ಸಲ್ಲಿಸಿದೆ. ಬಿಡ್ ಸಲ್ಲಿಸಿದವರ ಪೈಕಿ ಇದೇ ಅತಿ ಕಡಿಮೆ ಮೊತ್ತವಾದರೂ ಕೇಂದ್ರ ಸರ್ಕಾರ ಅಂದಾಜು ಮಾಡಿದ್ದಕ್ಕಿಂತ 3,000 ಕೋಟಿ ರೂ ಹೆಚ್ಚೇ ಇದೆ.
ಈ ಯೋಜನೆಯೇನಾದರೂ ಎಲ್ ಅಂಡ್ ಟಿಗೆ ದಕ್ಕಿದ್ದೇ ಅದಲ್ಲಿ ಅದರ ಷೇರು ಬೆಲೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಷೇರುಗಳ ಮೇಲೆ ಹೂಡಿಕೆ ಮಾಡುವವರು ಎಲ್ ಅಂಡ್ ಟಿಯತ್ತಲೂ ಗಮನ ವಹಿಸುವುದು ಉತ್ತಮ. ಸದ್ಯ ಈ ಕಂಪನಿಯ ಷೇರು 2,314 ರೂ ಇದೆ. ಇಂದು ಬೆಳಗ್ಗೆಯಿದ ಎಲ್ ಅಂಡ್ ಟಿಯ ಷೇರು 40 ರೂನಷ್ಟು ಏರಿಕೆ ಕಂಡಿರುವುದು ಗಮನಾರ್ಹ.
ಅದಾನಿ ವಿಲ್ಮರ್: ಗೌತಮ್ ಅದಾನಿ ಮಾಲಿಕತ್ವದ ಅದಾನಿ ವಿಲ್ಮರ್ ಕಂಪನಿ ಕಳೆದ ಹಣಕಾಸು ವರ್ಷದಲ್ಲಿ ಶೇ. 14ರಷ್ಟು ಆದಾಯ ಹೆಚ್ಚಳ ಮಾಡಿಕೊಂಡಿದೆ. ಒಟ್ಟು ಅದರ ಆದಾಯ 55,000 ಕೋಟಿ ರೂ ಗಡಿ ದಾಟಿದೆ.
ಇತ್ತೀಚಿನ ದಿನಗಳಲ್ಲಿ ಸಕ್ಕರೆಯ ಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ಕಳೆದ ತಿಂಗಳು ಸಕ್ಕರೆ ಬೆಲೆ ಕ್ವಿಂಟಲ್ಗೆ 200 ರೂನಷ್ಟು ಹೆಚ್ಚಾಗಿದೆ. ರೀಟೇಲ್ ಸ್ಟೋರ್ಗಳಲ್ಲಿ ಸಕ್ಕರೆ ಒಂದು ಕಿಲೋಗೆ 42 ರೂ ಆಗಿದೆ. ಹೀಗಾಗಿ, ಸಕ್ಕರೆ ಕಂಪನಿಗಳಿಗೆ ಒಳ್ಳೆಯ ಲಾಭ ಆಗುವ ನಿರೀಕ್ಷೆ ಇದೆ. ಈ ವರ್ಷ ಪ್ರಮುಖ ಸಕ್ಕರೆ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ನಷ್ಟವಂತೂ ಇರುವುದಿಲ್ಲ.