Adhunika Shakuntala Kathana | ಆಧುನಿಕ ಶಕುಂತಲಾ ಕಥನ : ಸ್ನಾತಕೋತ್ತರ ಪದವಿಗೆ ಬೇಕಾದಷ್ಟು ಅಂಕಗಳಿದ್ದು ಸೀಟು ಸಿಗದಿದ್ದಾಗ ಹೋರಾಟ ಮಾಡಿ ಪ್ರವೇಶ ಪಡೆದುಕೊಂಡಾಗ, ಆಮೇಲೆ ಪಿಎಚ್ಡಿ ಗುರುಗಳ ಆರಂಭಿಕ ಅಸಹಕಾರ, ತದನಂತರ ಮಹಾಪ್ರಬಂಧ ಬರೆಯುವಾಗ ಆದ ಆಡಚನೆಗಳನ್ನು ನಿವಾರಿಸಿಕೊಂಡಾಗ, ಹೆಜ್ಜೆಹೆಜ್ಜೆಗೂ ಅನುಭವಿಸಿದ ತೊಂದರೆ, ನಿರಾಶೆ, ನನ್ನ ಹಕ್ಕುಗಳಿಗಾಗಿ, ನಡೆಸಿದ ಹೋರಾಟ ಇವೆಲ್ಲ ನನಗಾದ ತುಂಬಾ ದೊಡ್ಡ ಅನ್ಯಾಯಗಳು ಅಂದುಕೊಂಡಿದ್ದೆ. ಆದರೆ ಕೆಲಸಕ್ಕೆ ಸೇರಿದ ಮೇಲೆ ಬೇರೆಯೇ ತರಹದ ಕಾರ್ಪಣ್ಯಗಳನ್ನ ಅನುಭವಿಸಬೇಕಾಗುತ್ತೆ ಅಂದುಕೊಂಡಿರಲಿಲ್ಲ. ಸಂಶೋಧನಾ ಕ್ಷೇತ್ರದಲ್ಲೇ ಕೆಲಸ ಸಿಕ್ಕಿದ ಸಂಭ್ರಮ ತುಂಬಾ ದಿನ ಉಳಿಯಲಿಲ್ಲವಾದರೂ ದಿಗಂತದಲ್ಲಿ ಆಗಾಗ್ಗೆ ಕಾಮನಬಿಲ್ಲು ಇಣುಕುತ್ತಿತ್ತು. ನನ್ನ ಬಾಳಿನಲ್ಲಿ ಅಡಚಣೆಗಳೂ, ಅವಕಾಶಗಳೂ ಒಟ್ಟೊಟ್ಟಿಗೆ, ಇಲ್ಲ ಒಂದರ ಹಿಂದೆ ಒಂದರಂತೆ ನಡೆದುಹೋಗಿವೆ. ನನ್ನ ಜೀವನ ಚರಿತ್ರೆಯನ್ನು ಬಿಚ್ಚಿಡ್ತಾ ಹೋದಂತೆ ಅದು ನಿಮಗೆ ಅರ್ಥವಾಗುತ್ತೆ. ನಮ್ಮ ದೇಶದ ಹವಾಮಾನದಂತೆ ನನ್ನ ಬಾಳು ಅದೃಷ್ಟದ, ಸಾಧನೆಯ, ಮನ್ನಣೆಗಳ ಅತಿವೃಷ್ಟಿ ಇಲ್ಲವೆ ಲಿಂಗ ತಾರತಮ್ಯ, ವೃತ್ತಿಯಲ್ಲಿ ಕಿರುಕುಳವೆಂಬ ಅನಾವೃಷ್ಟಿಯಿಂದ ತುಂಬಿಹೋಗಿತ್ತು.
ಡಾ. ಶಕುಂತಲಾ ಶ್ರೀಧರ, ಮೂಷಿಕ ತಜ್ಞೆ
(ಕಥನ 18)
1973 ರ ನವೆಂಬರ್ ತಿಂಗಳಿನಲ್ಲಿ ನಾನು ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದೆ. ಫೋರ್ಡ್ ಫೌಂಡೇಶನ್ ಪ್ರಾಜೆಕ್ಟ್ನಡಿ ನಾವು ವ್ಯವಸಾಯ ಕ್ಷೇತ್ರದಲ್ಲಿ ಇಲಿ, ಹೆಗ್ಗಣಗಳಿಂದಾಗುವ ನಷ್ಟದ ಪ್ರಮಾಣ, ಅದನ್ನು ತಡೆಗಟ್ಟುವ ವಿಧಾನಗಳನ್ನು ಕಂಡುಹಿಡಿಯಬೇಕಾಗಿತ್ತು. ಈ ಬಗೆಯ ಕೆಲಸ ಆದುವರೆಗೂ ನಮ್ಮ ದೇಶದಲ್ಲಿ, ಸ್ವಲ್ಪ ಮಟ್ಟಿಗೆ ಪಂಜಾಬ್ ಮತ್ತು ರಾಜಸ್ಥಾನಗಳನ್ನ ಬಿಟ್ಟರೆ ಬೇರೆ ಕಡೆ ನಡದೇ ಇರಲಿಲ್ಲ. ಪಂಜಾಬ್ನಲ್ಲಿ ಗೋಧಿ, ಭತ್ತದಲ್ಲಿ ಮೂರ್ನಾಲ್ಕು ವರ್ಷಗಳ ಸಂಶೋಧನೆಯ ನಂತರ ಈ ಕೆಲಸ ನಿಂತುಹೋಗಿತ್ತು. ರಾಜಸ್ಥಾನದಲ್ಲಿ ಬೆಳೆ ಹಾನಿಗಿಂತ ಇಲಿಗಳಿಂದ ಮರುಭೂಮೀಕರಣದ ಬಗ್ಗೆ ಒಂದಷ್ಟು ಕೆಲಸ ನಡೆದಿತ್ತು. ಏಕೆಂದರೆ ಇಲಿಗಳು ಮರುಭೂಮಿಯಲ್ಲಿ ಬಿಲ ತೋಡುವಾಗ ಸಾಕಷ್ಟು ಪ್ರಮಾಣದಲ್ಲಿ ಮರಳು ಹೊರ ಹಾರಾಡಿ, ಹೀಗೆ ಬಿಡಿಬಿಡಿಯಾಗಿ ಹರಡಿದ ಮರಳನ್ನು ಮರುಭೂಮಿಯಲ್ಲಿ ನಿಯಮಿತವಾಗಿ ಬೀಸುವ ಬಿರುಗಾಳಿ ಸಮತಟ್ಟಿನ ನೆಲದ ಮೇಲೆ ಹರಡಿ ಮತ್ತಷ್ಟು ಭೂಮಿಯನ್ನು ಇಷ್ಟಿಷ್ಟೇ ಮರುಭೂಮಿಯಾಗಿ ಪರಿವರ್ತಿಸುತ್ತಿತ್ತು. ನಾನು ಕಪ್ಪೆಗಳ ಸ್ನಾಯುಗಳ ಮೇಲೆ ಕೆಲಸ ಮಾಡಿದವಳು. ಇಲಿಗಳ ಬಗ್ಗೆ ಅವುಗಳಿಗೆ ನಿರಂತರವಾಗಿ ಬೆಳೆಯುವ ಕೋರೆ ಹಲ್ಲುಗಳಿರುತ್ತವೆ, ಮತ್ತೆ ಮುಳ್ಳುಹಂದಿಗಳು ಇಲ್ಲಿ ಹೆಗ್ಗಣಗಳ ಜಾತಿಗೆ ಸೇರುತ್ತವೆ ಎಂಬುದನ್ನು ಬಿಟ್ಟರೆ ಅವುಗಳ ಬೇರಾವ ಗುಣಲಕ್ಷಣಗಳೂ ನನಗೆ ಜ್ಞಾಪಕವಿರಲಿಲ್ಲ. ಇದು ಸಾಲದೆಂಬಂತೆ ಇದುವರೆಗೂ ನನ್ನ ಸಂಶೋಧನೆಯೆಲ್ಲಾ ಸೆಂಟ್ರಲ್ ಕಾಲೇಜಿನ ಪ್ರಯೋಗ ಶಾಲೆಯ ನಾಲ್ಕು ಗೋಡೆಗಳ ಒಳಗೇ ನಡೆದಿತ್ತು. ವ್ಯವಸಾಯ ಬೆಳೆಗಳ ಬಗೆಗೆ ಒಂದಕ್ಷರವು ಗೊತ್ತಿಲ್ಲದ ಅಜ್ಞಾನಿ ನಾನಾಗಿದ್ದೆ.
ಅದೃಷ್ಟಕ್ಕೆ ಈ ಯೋಜನೆಯಲ್ಲಿ ನಮಗೆ ಇಲಿಗಳ ಮೇಲೆ ಸಂಶೋಧನೆ ನಡೆಸಲು ಮಾರ್ಗದರ್ಶನ ನೀಡಲು ವರ್ಷಕ್ಕೆ ಮೂರು ತಿಂಗಳವರಿಗೆ ಒಬ್ಬ ವಿದೇಶೀ ತಜ್ಞರ ಪೋಸ್ಟ್ ಒಂದಿತ್ತು. ಮೊದಲೆರಡು ವರ್ಷ ಹಾಗೆ ಬಂದವರು ಕ್ಯಾನ್ಬೇರಾದ ಆಸ್ಟ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಪ್ರೊ. ಬಾರ್ನೆಟ್. ಅರವತ್ತು ದಾಟಿದ ಅವರು ಆಗಿನ ಕಾಲಕ್ಕೆ ಇಲಿಗಳ ಸ್ವಭಾವದ ಬಗೆಗೆ ನುರಿತ ವಿಜ್ಞಾನಿಯಾಗಿದ್ದಲ್ಲದೆ ಎರಡನೇ ವಿಶ್ವಸಮರದ ವೇಳೆ ಇಲಿ ನಿಯಂತ್ರಣದ ಬಗೆಗೆ ಆ ದೇಶದ ಮಿಲಿಟರಿ ಪಡೆಗಾಗಿ ಸಾಕಷ್ಟು ಕೆಲಸ ಮಾಡಿದ್ದರು. ಇಲಿಗಳಿಗೂ ಸೇನಾ ಪಡೆಗಳಿಗೂ ಎಂತಹ ಸಂಬಂಧ ಅಂತ ನಿಮಗೆ ಆಶ್ಚರ್ಯವಾಗಿರಬಹುದು. ಇಲಿಗಳು ಸೇನೆಯ ಸಂಪರ್ಕ ಸಾಧನಗಳಿಗೆ ಅಳವಡಿಸಿದ್ದ ತಂತಿಗಳನ್ನು ಎಲ್ಲೆಂದರಲ್ಲಿ ಕಡಿದು ಹಾಕಿ ಸೇನೆಯ ಸಂವಹನಗಳಲ್ಲಿ ಅಲ್ಲೋಲಕಲ್ಲೋಲವನ್ನುಂಟುಮಾಡುತ್ತಿದ್ದವು. ಆದರೆ ಬಾರ್ನೆಟ್ ಅವರಿಗೆ ಇಲಿಗಳ ಸ್ವಭಾವದ ಬಗೆಗೆ ಒಂದು ವಿಶ್ವಕೋಶದಷ್ಟು ಜ್ಞಾನ ಇದ್ದರೂ, ಅವರು ಇಂಗ್ಲೆಂಡಿನಲ್ಲಿ ಇಲಿ ನಿಯಂತ್ರಣಕ್ಕೆ ಓನಾಮ ಹಾಕಿದ್ದರೂ ಅವರಿಗೆ ಭಾರತದ ಇಲಿಗಳ ಬಗೆ ಇದ್ದ ಜ್ಞಾನ ಸೊನ್ನೆ.
ಪಾಶ್ಚತ್ಯ ದೇಶಗಳಲ್ಲಿ ಕೇವಲ ಮೂರನಾಲ್ಕು ಜಾತಿ ಇಲಿಗಳಿರುತ್ತವೆ. ಕಂದು ಬಣ್ಣದ ನಾರ್ವೆ ಇಲಿ, ಕಪ್ಪು ಬಣ್ಣದ ಮನೆ ಇಲಿ, ಅಳಿಲು ಮತ್ತೆ ಅತಿ ಚಿಕ್ಕ ಗಾತ್ರದ ಸಣ್ಣಿಲಿ. ನಮ್ಮ ದೇಶದಲ್ಲಾದರೋ ಸುಮಾರು 32 ಇಲಿ ಪ್ರಭೇದಗಳಿದ್ದು, ಅದರಲ್ಲಿ 10 ರಿಂದ 12 ಜಾತಿ ಇಲಿಗಳು ವ್ಯವಸಾಯಕ್ಕೆ ಪೀಡಕಗಳು. ಇಲ್ಲಿಯ ಬೆಳೆಗಳೂ ವ್ಯವಿಧ್ಯಮಯ. ಬಾರ್ನೆಟ್ ಬಂದವರೇ ನಮ್ಮ ದೇಶದಲ್ಲಿ ಇಲಿಗಳ ಮೇಲೆ ಕೆಲಸ ಮಾಡುತ್ತಿದ್ದ ಏಕೈಕ ಪ್ರಾಣಿಶಾಸ್ತ್ರಜ್ಞ, ರಾಜಾಸ್ಥಾನದ ಡಾ. ಈಶ್ವರ ಪ್ರಕಾಶರನ್ನು ಬೆಂಗಳೂರಿಗೆ ಕರೆಸಿಕೊಂಡರು. ನಮ್ಮ ಮೊದಲ ಕೆಲಸ ನಮ್ಮ ಸಂಶೋಧನೆಯನ್ನ ಎಲ್ಲಿ ಮತ್ತೆ ಹೇಗೆ ಪ್ರಾರಂಭ ಮಾಡಬೇಕೆನ್ನುವುದನ್ನು ನಿರ್ಧರಿಸುವುದು. ಪ್ರಾರಂಭಿಕ ಸಂಶೋಧನೆ ಭತ್ತದ ಬೆಳೆಯಲ್ಲಿ, ಒಂದು ವರ್ಷದ ಕಾಲ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಮಾಡುವುದೆಂದು ನಿರ್ಧಾರವಾಯಿತು.
ಬೆಂಗಳೂರು ಸುತ್ತಮುತ್ತಲೂ ಅಂಥ ಗದ್ದೆ ನಮಗೆ ಕಾಣಲಿಲ್ಲ. ಮಂಡ್ಯದಿಂದಾಚೆ ಮೈಸೂರು ಕಡೆ ಕಣ್ಣಿಗೆ ಕಾಣುವಷ್ಟು ದೂರ ಭತ್ತದ ಹಸಿರು ಹೊನ್ನು ಭೂಮಿಯನ್ನು ತಬ್ಬಿಕೊಂಡಿತ್ತು. ಸರಿ, ಬಾರ್ನೆಟ್, ಈಶ್ವರ ಪ್ರಕಾಶ್, ನಾನು, ನನ್ನ ಕಿರಿಯ ಸಹದ್ಯೋಗಿಗಳನ್ನೊಳಗೊಂಡ ಪುಟ್ಟ ಗುಂಪು ಮಂಡ್ಯದತ್ತ ಹೊರಟಿತು. ಸಮತಟ್ಟು ನೆಲದಲ್ಲಿ ಎಕರೆಗಟ್ಟಲೆ ಹರಡಿದ್ದ ಮಂಡ್ಯದ ಭತ್ತದ ಗದ್ದೆಗಳು ನಮ್ಮ ತಕ್ಷಣದ ಪೈಲಟ್ ಅಧ್ಯಯನಕ್ಕೆ ಸರಿ ಹೋಗದ ಕಾರಣ, ನಾವು ಮೈಸೂರಿಗೆ ಸಮೀಪದಲ್ಲಿದ್ದ ನಾಗೇನಹಳ್ಳಿಯ ಕೃಷಿಸಂಶೋಧನಾ ಕೇಂದ್ರಕ್ಕೆ ಹೋದೆವು. ಆಗ 1973 ರಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಕೇವಲ ಭತ್ತ ಬೆಳೆಯಲಾಗುತ್ತಿತ್ತು. ನಾವು ಹೋದಾಗ ಭತ್ತದ ಕಟಾವು ಆಗಿ ಹೋಗಿತ್ತು. ಆದರೆ ಅಲ್ಲಿ ಭೂಮಿ ಸಮತಟ್ಟು ಇಲ್ಲದ ಕಾರಣ ಭತ್ತದ ತಾಕುಗಳು ಒಂದರ ಕೆಳಗೆ ಒಂದರಂತೆ ಇದ್ದು ನೀರು ಹಾಯಿಸುವದಕ್ಕೆ ಪ್ರಶಸ್ತವಾಗಿತ್ತು. ಇದು ತಾಕುಗಳ ನಡುವಣ ಬದುಗಳ ನಿರ್ಮಾಣಕ್ಕೂ ಅನುಕೂಲವಾಗಿತ್ತು. ಅಷ್ಟೆ ಅಲ್ಲಾ, ಈ ಬದುಗಳು ಇಲಿಗಳ ವಾಸಕ್ಕೆ ಹೇಳಿಮಾಡಿಸಿದ್ದಂತಿದ್ದವು. ನಮ್ಮ ಕಾರು ಸಂಶೋಧನಾ ಕ್ಷೇತ್ರಕ್ಕೆ ಒಳಹೋಗುತಿದ್ದಂತೆ ಬದುವಿನ ಮೇಲೆ ನೂರಾರು ಇಲಿ ಬಿಲಗಳು ಕಣ್ಣಿಗೆ ರಾಚುವಂತೆ ಕಂಡವು. ಬಾರ್ನೆಟ್ ಮತ್ತು ಈಶ್ವರ ಪ್ರಕಾಶ್ ಅವರಿಗೆ ನಿಧಿ ಸಿಕ್ಕಿದಷ್ಟೇ ಸಂತೋಷ. ನನಗೇ, ನನ್ನ ಕಿರಿಯ ಸಹೋದ್ಯೋಗಿಗೆ ನಮ್ಮ ಜೀವಮಾನವಿಡಿ ಅನ್ನ ಕೊಟ್ಟ, ಹೆಸರುಗಳಿಸಿಕೊಟ್ಟ ಇಲಿಗಳ ಆವಾಸ ಸ್ಥಾನದ ಪ್ರಥಮ ಪರಿಚಯ.
ನಾಗೇನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಂತೆ ನನಗೆ ಅಘಾತವೊಂದು ಕಾದಿತ್ತು. ಆಗ ಅಲ್ಲಿ ಇದ್ದ ಗೆಸ್ಟ್ ಹೌಸ್ನಲ್ಲಿ ಕೇವಲ ಒಂದು ಬೆಡ್ರೂಮ್ ಮತ್ತು ಅದಕ್ಕೆ ಹೊಂದಿಕೊಂಡಂತೆ ಒಂದು ಬಾತ್ ರೂಮ್ ಮಾತ್ರ ಇತ್ತು. ನಾನು ಸೆಂಟ್ರಲ್ ಕಾಲೇಜಿನಲ್ಲಿ ಪಾಠ ಹೇಳಿಕೊಟ್ಟ, ಈಗ ನನ್ನ ಕಿರಿಯ ಸಹದ್ಯೋಗಿಯಾಗಿದ್ದವರು ನನಗಿಂತ ಮೊದಲೇ ಹೋಗಿ ಅದನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ನಾನು ನನ್ನ ಕಷ್ಟವನ್ನು ಅಂದಿನ ಡೀನ್ ಡಾ. ರಾಮಕೃಷ್ಣ ಅವರಿಗೆ ವಿವರಿಸಿದಾಗ, ಅವರು ಕಠಿಣವಾಗಿ ನಾನಲ್ಲೇ ಕೆಲಸ ಮಾಡಬೇಕೆಂದೂ, ಇಲ್ಲವಾದರೆ ಇಡೀ ಪ್ರಾಜೆಕ್ಟನ್ನೇ ನಾಗೇನಹಳ್ಳಿಗೆ ವರ್ಗಾಯಿಸುವುದಾಗಿ ಹೇಳಿದರು. ಅವರ ಮಗಳೋ, ಸಂಬಂಧಿಯೋ ಇಂಥ ಪರಿಸ್ಥಿತಿಯನ್ನು ಎದುರಿಸಿದ್ದರೆ ಬಹುಶಃ ಅವರು ಈ ರೀತಿ ವರ್ತಿಸುತ್ತಿರಲಿಲ್ಲ. ವಿಧಿ ಇಲ್ಲದೆ ನಾನು ಹೊರಗಡೆ ಸೋಫಾ ಮೇಲೆ ಮಲಗುತ್ತಿದ್ದೆ ಮತ್ತು ಆತ ಸ್ನಾನ ಮಾಡಿ ಬರುವಷ್ಟರಲ್ಲಿ ಅಷ್ಟೋ ಇಷ್ಟೊ ಅಡುಗೆ ಮಾಡುತ್ತಿದ್ದೆ. ನಂತರ ಸ್ನಾನ ಮಾಡಿ ಫೀಲ್ಡ್ ವರ್ಕ್ ಮಾಡಲು ಪ್ರಾರಂಭಿಸುತ್ತಿದ್ದೆವು. ಅಲ್ಲಿ ಪ್ರತಿ ತಿಂಗಳೂ ಇಲಿ ಬಿಲಗಳ ಎಣಿಕೆ, ಭತ್ತದ ಬೆಳೆಗೆ ವಿವಿಧ ಹಂತಗಳಲ್ಲಿ ಇಲಿಗಳಿಂದಾಗುವ ಹಾನಿ, ಆಗ ಲಭ್ಯವಿದ್ದ ಮೂರು ಇಲಿ ಪಾಶಾಣಗಳ (zinc phosphide, aluminium phosphide and warfarin) ಪರಿಣಾಮವನ್ನು ನಿರ್ಧಾರಿಸುವುವದು ನಮ್ಮ ಧ್ಯೇಯವಾಗಿತ್ತು. ನಾಲ್ಕು ತಿಂಗಳ ಅವಧಿಯಲ್ಲಿ ಈ ಕೆಲಸ ಮುಗಿಯಿತು.
ಆಗ ಹೆಬ್ಬಾಳ ಕೆರೆಯ ಈ ಕಡೆ ದಂಡೆಯ ಪಕ್ಕ ನಾಲ್ಕು ಹೆಕ್ಟೇರ್ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗಾಗಿ ಭತ್ತದ ವಿವಿಧ ತಳಿಗಳನ್ನು ಕೃಷಿ ವಿಶ್ವವಿದ್ಯಾನಿಲಯದವರು ಬೆಳೆಯುತ್ತಿದ್ದರು. ನಾನು ನನ್ನ ಅತಿ ಉತ್ಸಾಹದ ಭರದಲ್ಲಿ ನಾವು ನಾಗೇನಹಳ್ಳಿಯಲ್ಲಿ ಮಾಡುತ್ತಿದ್ದ ಕೆಲಸವನ್ನೇ ಇಲ್ಲಿ ಪುನರಾವರ್ತಿಸಿದೆ. ನನಗೆ ದೊರಕಿದ ಫಲಿತಾಂಶದ ಆಧಾರದ ಮೇಲೆ ಲೇಖನವೊಂದನ್ನು ಸಿದ್ದಪಡಿ ವಿಜ್ಞಾನ ಸಮಾವೇಶವೊಂದಕ್ಕೆ ಕಳುಹಿಸಿಕೊಟ್ಟೆ. ಆದರೆ ಈ ಕಿರಿಯ ಸಹದ್ಯೋಗಿ ನಾನು ನಾಗೇನಹಳ್ಳಿಯಲ್ಲಿ ಮಾಡಿದ ಸಂಶೋಧನೆಯನ್ನ ನನ್ನೊಬ್ಬಳ ಹೆಸರಿನಲ್ಲೇ ಪ್ರಕಟಿಸುತ್ತಿದ್ದೇನೆಂದು ಆಪಾದಿಸಿದ, ಅದೂ ನನ್ನ ಬಳಿ ಅಲ್ಲ. ನಮ್ಮ ವಿಭಾಗಾಧಿಕಾರಿಗಳ ಬಳಿ. ಇದು ಕೇವಲ ನಾನು ಮಾಡಿದ ಕೆಲಸವೆಂದೂ, ಇದಕ್ಕಾಗಿ ನಾನು Farm Superintendent ಕಡೆಯಿಂದ ಕೂಲಿಯವರನ್ನು ಇಂಡೆಂಟ್ ಮಾಡಿದ್ದಕ್ಕೆ ಆಧಾರವಿದೆಯೆಂದು ಹೇಳಿದರೂ ಏನೂ ವಿಚಾರಣೆ ಮಾಡದೆ, ಅವರು ನನ್ನನ್ನು ನಂಬದೆ ನನಗೆ ಬುದ್ದಿ ಹೇಳಿದರು. ನಾನಿನ್ನು ಕೆಲಸಕ್ಕೆ ಸೇರಿದ ಹೊಸದು. ಇನ್ನೂ Probation Declare ಆಗಿರಲಿಲ್ಲ. ವೃಥಾ ವಿಷಯ ದೊಡ್ಡದು ಮಾಡಬಾರದೆಂದು ನಾನು ಕೆಲಸ ಮಾಡಿದ ಬಗ್ಗೆ ಒಂದಷ್ಟು ಮಾಹಿತಿ ಒದಗಿಸಿ ಸುಮ್ಮನಾದೆ. ಕಿರಿಯ ಸಹದ್ಯೋಗಿಯೊಬ್ಬನ ಮಾತು ಕೇಳಿಕೊoಡು ಒಂದು ಸಣ್ಣ ವಿಚಾರಣೆಯನ್ನೂ ನಡೆಸದೆ ನನಗೆ ಬುದ್ದಿ ಹೇಳಿದ, ನನ್ನ ಗುರುಗಳೇ ಆದ ವಿಭಾಗಾಧಿಕಾರಿಗಳ ನಡತೆ ನನಗೆ ತುಂಬಾ ನೋವನ್ನುಂಟು ಮಾಡಿತು. ಇಂತಹ ಅನ್ಯಾಯ ಪುನಃ ಆಗಬಾರದೆಂದು ನಾನು ಅಂದೇ ನಿರ್ಧರಿಸಿದೆ. ಅದಕ್ಕಿದ್ದ ಒಂದೇ ದಾರಿ: ಸಂಶೋಧನೆ ಮತ್ತು ಸಂಶೋಧನ ಲೇಖನಗಳ ಸಾಲು ಸಾಲು ಪ್ರಕಟಣೆ ಮತ್ತು ನನ್ನ ಸಂಶೋಧನೆ ಬಗ್ಗೆ ಪುಸ್ತಕ ಬರೆದು ಇಂತಹವರ ಬಾಯಿ ಮುಚ್ಚಿಸುವುದು.
ಕಾಲ ಚಕ್ರ ಉರುಳಿತು . 2017ರಲ್ಲಿ ನಾಗೇನಹಳ್ಳಿಯ ಕೃಷಿ ಸಂಶೋಧನಾ ಕೇಂದ್ರ, ಅದೀಗ ಸಾವಯವ ಕೃಷಿ ಸಂಶೋಧನಾ ಕೇಂದ್ರವಾಗಿ ಪರಿವರ್ತಿತವಾಗಿ ತನ್ನ ಶತಮಾನೊತ್ಸವವನ್ನು ಆಚರಿಸಿಕೊಂಡಿತು. ನಾನೀಗ ನಿವೃತ್ತಿಯ ನಂತರ ಬೆಂಗಳೂರು ಕೃಷಿವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯೆಯಾಗಿ ಕರ್ನಾಟಕ ರಾಜ್ಯದ ರಾಜ್ಯಪಾಲರಿಂದ ನೇಮಕಗೊಂಡಿದ್ದೆ. ಈ ಶತಮಾನೋತ್ಸವ ಸಮಾರಂಭವಕ್ಕೆ ನಾನು ಮುಖ್ಯ ಅತಿಥಿಗಳಲ್ಲಿ ಒಬ್ಬಳು. ಕುಲಪತಿಗಳು, ರಾಜ್ಯ ಸರ್ಕಾರದ ಕೃಷಿ ಆಯುಕ್ತರು, ಸ್ಥಳೀಯ ವಿಧಾನಸಭಾ ಸದಸ್ಯರು, ವಿಶ್ವವಿದ್ಯಾಲಯನಿಲಯದ ಇತರ ಪ್ರಮುಖ ಅಧಿಕಾರಿಗಳೊಂದಿಗೆ ವೇದಿಕೆಯ ಮೇಲೆ ಕೂತಿದ್ದಲ್ಲದೆ 45 ವರ್ಷಗಳ ಹಿಂದೆ ನಾಗೇನಹಳ್ಳಿಯಲ್ಲಿ ನಾನು ಮಾಡಿದ ಪ್ರಾಯೋಗಿಕ ಸಂಶೋಧನೆಯ ಬಗ್ಗೆ ಭಾಷಣ ಮಾಡಿ ಭಾರಿ ಕರತಾಡನಕ್ಕೆ ಭಾಜ್ಯಳಾದೆ. ವಿಧಿವಿಲಾಸ ಎಷ್ಟೊಂದು ಸಿಹಿಯಾಗಿತ್ತು.
(ಈ ಅಂಕಣ ಇನ್ನು ಮುಂದೆ ಪ್ರತೀ ಶನಿವಾರ ಪ್ರಕಟವಾಗುವುದು)
ಈ ಅಂಕಣದ ಎಲ್ಲಾ ಭಾಗಗಳನ್ನು ಓದಲು ಕ್ಲಿಕ್ ಮಾಡಿ
Published On - 4:13 pm, Sat, 8 October 22